ADVERTISEMENT

ಮರೀಗೌಡ ಜಾಡು ಹಿಡಿಯದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಮೈಸೂರು: ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ದೂರು ದಾಖಲಾಗಿ 17 ದಿನಗಳಾಗಿದ್ದರೂ ಕಾಂಗ್ರೆಸ್‌ ಮುಖಂಡ ಕೆ.ಮರೀಗೌಡ ಅವರ ಜಾಡು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, 2013ರ ವಿಧಾನಸಭಾ ಚುನಾವಣೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಗಿಟ್ಟಿಸಲು ಪ್ರಯತ್ನಿಸಿ ವಿಫಲವಾಗಿದ್ದರು. ಮೈಸೂರು ತಾಲ್ಲೂಕಿನ ಬೀರಿಹುಂಡಿ ಗ್ರಾಮದ ಮರೀಗೌಡ, 1995ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. ಬಳಿಕ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ಜೆಡಿಎಸ್‌ ಪಕ್ಷದಿಂದ ಗೆದ್ದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದರು. ಈ ಹಾದಿಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡರು.

2000ದಲ್ಲಿ ಬೀರಿಹುಂಡಿ ಕ್ಷೇತ್ರದಿಂದ ಗೆದ್ದು ಜಿಲ್ಲಾ ಪಂಚಾಯಿತಿ ಸದಸ್ಯರಾದರು. ಜೆಡಿಎಸ್‌ ಪ್ರತಿನಿಧಿಸುತ್ತಿದ್ದ ಅವರು ಪುನರಾಯ್ಕೆಯಾಗಿ ಕಾಂಗ್ರೆಸ್‌ ಬೆಂಬಲದೊಂದಿಗೆ 2006 ಜನವರಿಯಲ್ಲಿ ಜಿ.ಪಂ ಉಪಾಧ್ಯಕ್ಷರಾಗಿ ಅಧಿಕಾರಕ್ಕೇರಿದರು. 2006ರಲ್ಲಿ ಸಿದ್ದರಾಮಯ್ಯ ಜತೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಅವರು, 2008ರ ಆಗಸ್ಟ್‌ನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದರು. ಮರೀಗೌಡ 2010ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸದಸ್ಯ.

ಕುಟುಂಬದವರೂ ನಾಪತ್ತೆ: ಪೊಲೀಸರ ವಿಚಾರಣೆ ಭಯದಿಂದ ಅವರ ಕುಟುಂಬದವರೂ ನಾಪತ್ತೆ ಆಗಿದ್ದಾರೆ. ರಾಮಕೃಷ್ಣನಗರದಲ್ಲಿರುವ ಮರೀಗೌಡ ನಿವಾಸ ಬಿಕೋ ಎನ್ನುತ್ತಿದೆ.

ದಾಂದಲೆ ಪ್ರಕರಣ: 2007ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿರಲಿಲ್ಲ. ಇದನ್ನು ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇದು ಹಿಂಸೆಗೆ ತಿರುಗಿ ಸರ್ಕಾರಿ ಬಸ್‌ಗಳಿಗೆ ಕಲ್ಲು ತೂರಾಟ ನಡೆದಿತ್ತು. ಈ ಪ್ರಕರಣದಲ್ಲಿ ಮೈಸೂರು ದಕ್ಷಿಣ ಹಾಗೂ ಜಯಪುರ ಠಾಣೆಯಲ್ಲಿ ಮರೀಗೌಡ ವಿರುದ್ಧ ದೂರು ದಾಖಲಾಗಿದ್ದವು. ಕೆಲ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸಿಐಡಿ ‘ಸಿ’ ವರದಿ ಸಲ್ಲಿಸಿತ್ತು. ಉಳಿದ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.