ADVERTISEMENT

ಮಳೆ ಕೊರತೆ: ವಿದ್ಯುತ್ ಉತ್ಪಾದನೆ ಕುಂಠಿತ

ಚಂದ್ರಹಾಸ ಹಿರೇಮಳಲಿ
Published 3 ಸೆಪ್ಟೆಂಬರ್ 2015, 19:30 IST
Last Updated 3 ಸೆಪ್ಟೆಂಬರ್ 2015, 19:30 IST

ಶಿವಮೊಗ್ಗ: ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 70ರಷ್ಟು ಮಳೆ ಕೊರತೆಯಾಗಿದ್ದು, ಮಳೆಗಾಲದಲ್ಲೂ ಬೇಸಿಗೆಯ ಬಿಸಿಲಿನ ವಾತಾವರಣ ಸೃಷ್ಟಿಯಾಗಿದೆ. ಪ್ರಮುಖ ಜಲಾಶಯಗಳು ಭರ್ತಿಯಾಗದ ಕಾರಣ ವಿದ್ಯುತ್‌ ಉತ್ಪಾದನೆ ಕುಂಠಿತವಾಗುವ ಭೀತಿ ಎದುರಾಗಿದೆ.

ರಾಜ್ಯದ ಬೇಡಿಕೆಯ ಶೇ 22ರಷ್ಟು ವಿದ್ಯುತ್ ಪೂರೈಸುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಇನ್ನೂ 32 ಅಡಿ ನೀರಿನ ಕೊರತೆ ಇದೆ. ಸಮುದ್ರಮಟ್ಟದಿಂದ 1,819 ಅಡಿ ಇರುವ ಜಲಾಶಯದಲ್ಲಿ ನೀರಿನ ಪ್ರಮಾಣ 1,787 ಅಡಿಗೆ ಸೀಮಿತವಾಗಿದೆ. ಹಿಂದಿನ ವರ್ಷ ಈ ದಿನದಲ್ಲಿ ನೀರಿನ ಪ್ರಮಾಣ ಗರಿಷ್ಠಮಟ್ಟ ತಲುಪಿತ್ತು.

ಶರಾವತಿ ಯೋಜನಾ ಪ್ರದೇಶದಲ್ಲಿ ಪ್ರತಿ ದಿನ 21 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ನೀರಿನ ಕೊರತೆಯ ಕಾರಣ ಆ. 29ರಿಂದ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಕಡಿಮೆ ಮಾಡಲಾಗಿದ್ದು, ಕೇವಲ 6 ದಶ ಲಕ್ಷ ಯೂನಿಟ್‌ ಮಾತ್ರ ಉತ್ಪಾದಿಸಲಾಗುತ್ತಿದೆ. ನೀರಾವರಿ ಯೋಜನೆಯ ಭದ್ರಾ ಜಲಾಶಯ ತುಂಬಲು ಇನ್ನೂ 18 ಅಡಿ ನೀರು ಸಂಗ್ರಹವಾಗಬೇಕಿದೆ. ಜಲಾಶಯದ ನೀರಿನಮಟ್ಟ  ಪ್ರಸ್ತುತ 168.11 ಅಡಿ ಇದೆ. ಹಿಂದಿನ ವರ್ಷ ಜುಲೈ ಅಂತ್ಯದ ವೇಳೆಗೆ ಜಲಾಶಯ (ಗರಿಷ್ಠ 186 ಅಡಿ) ಭರ್ತಿಯಾಗಿತ್ತು.

ಜಲಾಶಯ ಭರ್ತಿಯಾಗದ ಕಾರಣ ಈ ಬಾರಿ ಅಚ್ಚುಕಟ್ಟು ಪ್ರದೇಶದ  ಬೇಸಿಗೆ ಬೆಳೆಗೆ ನೀರಿನ ಸಮಸ್ಯೆ ಎದುರಾಗಲಿದೆ. ಅಲ್ಲದೇ, ಶಿವಮೊಗ್ಗ, ದಾವಣಗೆರೆ ಸೆರಿದಂತೆ ಹಲವು ಜಿಲ್ಲೆಗಳ ಕುಡಿಯುವ ನೀರಿಗೂ ಕೊರತೆ ಬೀಳಲಿದೆ.ಜಿಲ್ಲೆಯಲ್ಲೇ ಹೆಚ್ಚು ಮಳೆ ಬೀಳುವ ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕಿನಲ್ಲೂ ಈ ಬಾರಿ ಮಳೆ ಕೊರತೆ ಎದುರಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಶೇ 30 ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಶೇ 45ರಷ್ಟು ಮಳೆ ಕೊರತೆಯಾಗಿದೆ.

ಬಿತ್ತನೆಯಾಗಿರುವ 90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇ 40ರಷ್ಟು ಮಳೆ ಆಶ್ರಿತ ಪ್ರದೇಶವಾಗಿದ್ದು, ಮಳೆಕೊರತೆಯ ಕಾರಣ ಭತ್ತದ ಬೆಳೆ ಒಣಗುತ್ತಿದೆ. ಇದರಿಂದ ಪಡಿತರ ವ್ಯವಸ್ಥೆಗೆ ಅಕ್ಕಿ ಪೂರೈಕೆಗೂ ಹಿನ್ನಡೆಯಾಗಲಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ. 51 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, 11.5 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾದ ಶುಂಠಿಗೂ ನೀರಿನ ಕೊರತೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.