ADVERTISEMENT

ಮಹಾಮೇಳಾವ್‌ಗೆ ಎಂ.ಇ.ಎಸ್‌ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2016, 19:30 IST
Last Updated 20 ನವೆಂಬರ್ 2016, 19:30 IST

ಬೆಳಗಾವಿ: ವಿಧಾನ ಮಂಡಲ ಅಧಿವೇಶನ ವಿರೋಧಿಸಿ ಸೋಮವಾರ ಮಹಾಮೇಳಾವ್‌ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್‌) ಸಿದ್ಧತೆ ಮಾಡಿಕೊಂಡಿದೆ. ಆದರೆ ಭಾನುವಾರ ರಾತ್ರಿವರೆಗೂ ಪೊಲೀಸರು ಅನುಮತಿ ನೀಡಿರಲಿಲ್ಲ.

ಅನುಮತಿ ಸಿಗುವ ಮೊದಲೇ ಎಂ.ಇ.ಎಸ್‌ ವೇದಿಕೆ ಸಿದ್ಧತೆ ಮಾಡಿಕೊಂಡಿದ್ದು, ಅಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೂ ನಗರದ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಬೆಳಿಗ್ಗೆ 11.30ಕ್ಕೆ ಮಹಾಮೇಳಾವ್‌ ನಡೆಸಲು ಎಂ.ಇ.ಎಸ್‌ ಸಿದ್ಧತೆ ನಡೆಸಿದೆ.

ಕರ್ನಾಟಕ ಸರ್ಕಾರದ ವಿರುದ್ಧ ಸಭೆ ನಡೆಸಿದರೆ ಸರ್ಕಾರ ತಮ್ಮನ್ನು ಬಂಧಿಸುತ್ತದೆ. ಅದನ್ನೇ ಗಡಿವಿವಾದದ ಪ್ರಕರಣದಲ್ಲಿ ಕೋರ್ಟ್‌ಗೆ ಪೂರಕ ಸಾಕ್ಷ್ಯವಾಗಿ ಸಲ್ಲಿಸಬಹುದು ಎಂಬ ದುರುದ್ದೇಶದಿಂದ ಮಹಾಮೇಳಾವ್‌ ನಡೆಸಲು ಎಂ.ಇ.ಎಸ್‌ ಮುಂದಾಗಿದೆ ಎನ್ನಲಾಗುತ್ತಿದೆ.

ADVERTISEMENT

‘ಮಹಾಮೇಳಾವ್‌ಗೆ ಅನುಮತಿ ನೀಡುವಂತೆ ಭಾನುವಾರ ರಾತ್ರಿ ಕೂಡ ಎಂ.ಇ.ಎಸ್ ಮುಖಂಡರು ನಗರ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದರು. ಆದರೆ ಮರಾಠಿ ಭಾಷಿಕರನ್ನು ಒಗ್ಗೂಡಿಸುವ ಎಂ.ಇ.ಎಸ್‌ ಯತ್ನದಿಂದ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವುದರಿಂದ ಜಿಲ್ಲಾಡಳಿತ ಈ ಬಾರಿ ಕಠಿಣ ಧೋರಣೆ ತಾಳಿದೆ’ ಎಂದು ಮೂಲಗಳು ತಿಳಿಸಿವೆ.

ಎಂ.ಇ.ಎಸ್‌ನ ಹಲವಾರು ಸ್ಥಳೀಯ ನಾಯಕರೊಂದಿಗೆ ಮಹಾರಾಷ್ಟ್ರದ ಮುಖಂಡ ಪ್ರೊ.ಎನ್‌.ಡಿ. ಪಾಟೀಲ ಮಹಾಮೇಳಾವ್‌ನಲ್ಲಿ ಪಾಲ್ಗೊಳ್ಳುವರು ಎಂದು ಸಂಘಟನೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.