ADVERTISEMENT

ಮಾತುಕತೆಗೆ ಸಿದ್ಧ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಬೆಂಗಳೂರು: ‘ಪಕ್ಷದ ಒಗ್ಗಟ್ಟಿಗಾಗಿ ಯಾರೊಂದಿಗೆ ಬೇಕಾದರೂ ಮಾತುಕತೆಗೆ ಸಿದ್ಧ’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ  ಹೇಳಿದ್ದಾರೆ.
 
ಕಲಬುರ್ಗಿಯಲ್ಲಿ ಭಾನುವಾರ ಕೊನೆಗೊಂಡ ರಾಜ್ಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪಕ್ಷದ ಐಕ್ಯತೆ ಮತ್ತು ಸಂಘಟನೆ ವಿಷಯ ಬಂದಾಗ ನಾನು ಪ್ರತಿಷ್ಠೆ ಬದಿಗೊತ್ತುತ್ತೇನೆ. ನಮ್ಮ ಮಧ್ಯೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಒಟ್ಟಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲು ನಾನಂತೂ ತಯಾರಿದ್ದೇನೆ.  ರಾಜ್ಯದ ಜನತೆಯ ಹಿತದೃಷ್ಟಿಯಿಂದ ಭಿನ್ನಮತ ತೊರೆದು ಪಕ್ಷ ಕಟ್ಟಲು ಶ್ರಮಿಸೋಣ’ ಎಂದು ಹೇಳುವ ಮೂಲಕ ವೇದಿಕೆಯಲ್ಲಿದ್ದ ಕೆ.ಎಸ್‌. ಈಶ್ವರಪ್ಪ ಅವರಿಗೆ ಪರೋಕ್ಷವಾಗಿ ಮಾತುಕತೆಗೆ  ಆಹ್ವಾನ ನೀಡಿದರೆಂದು  ಮೂಲಗಳು ತಿಳಿಸಿವೆ.
 
ಪಕ್ಷದೊಳಗಿನ ಭಿನ್ನಮತೀಯ ಚಟುವಟಿಕೆ ಬಗ್ಗೆ ಪ್ರಸ್ತಾಪಿಸುವಾಗ ಯಡಿಯೂರಪ್ಪ ಕೆಲವೊಮ್ಮೆ ಭಾವೋದ್ವೇಗಕ್ಕೂ ಒಳಗಾದರು. ಅಲ್ಲದೇ, ಭಿನ್ನಮತ ಸಲ್ಲದು ಎಂದು ಕಠಿಣ ಎಚ್ಚರಿಕೆಯನ್ನೂ ಪರೋಕ್ಷವಾಗಿ ನೀಡಲು ಅವರು ಹಿಂಜರಿಯಲಿಲ್ಲ ಎಂದು ತಿಳಿದುಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.