ADVERTISEMENT

ಮಾತೃಭಾಷಾ ಸ್ಥಿತಿ ಅಧ್ಯಯನಕ್ಕೆ ಸಮಿತಿ

ಎಸ್.ರವಿಪ್ರಕಾಶ್
Published 3 ಡಿಸೆಂಬರ್ 2016, 3:16 IST
Last Updated 3 ಡಿಸೆಂಬರ್ 2016, 3:16 IST
ಸನ್ಮಾನದ ಪುಳಕದಲ್ಲಿ ಬರಗೂರು       ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ
ಸನ್ಮಾನದ ಪುಳಕದಲ್ಲಿ ಬರಗೂರು ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ   

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರಾಜ್ಯದ ವಾದವನ್ನು ಇನ್ನಷ್ಟು ಬಲಗೊಳಿಸಲು ಅಗತ್ಯ ಮಾಹಿತಿ ಸಂಗ್ರಹಿಸಲು ತನಿಖಾ ಆಯೋಗ ಕಾಯಿದೆ ಅಡಿ ಸಮಿತಿಯೊಂದನ್ನು ರಚಿಸಲು ಉದ್ದೇಶಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

82 ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಈ ಸಮಿತಿಯು ದೇಶ-ವಿದೇಶಗಳಲ್ಲಿನ ಮಾತೃಭಾಷಾ ಮಾಧ್ಯಮದ ಸ್ಥಿತಿಗತಿ ಅಧ್ಯಯನ ನಡೆಸಲಿದೆ’ ಎಂದರು.

‘ಈ ಸಮಿತಿಯ ಮುಖ್ಯ ಉದ್ದೇಶ; ದೇಶ-ವಿದೇಶಗಳಲ್ಲಿ ಮಾತೃಭಾಷಾ ಮಾಧ್ಯಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದರ ಜೊತೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಉನ್ನತ ಸ್ಥಾನಕ್ಕೆ ಏರಿದವರ ಮಾಹಿತಿಗಳನ್ನು ಕಲೆ ಹಾಕಿ ವರದಿಯನ್ನು ಸಿದ್ಧಪಡಿಸಲಿದೆ. ಇದನ್ನು ಸುಪ್ರೀಂಕೋರ್ಟ್‌ ನ್ಯಾಯಾಲ ಯದ ಮುಂದಿಡಬೇಕು ಎನ್ನುವ ಸಲಹೆ ಕೂಡಾ ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲನೆಯಲ್ಲಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.

ADVERTISEMENT

‘ಕನ್ನಡ ಭಾಷೆಯು ಬೆಳೆಯಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು, ಕನ್ನಡ ಭಾಷೆಯಲ್ಲಿ ಬರೆಯುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಜ್ಞಾನ ಸಂಪತ್ತು, ಶಬ್ದ ಸಂಪತ್ತು ಬೆಳೆಯಬೇಕು. ವಿಜ್ಞಾನ- ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳಲಿಕ್ಕೆ ಬರುವುದಿಲ್ಲ ಎನ್ನುವುದು ಸುಳ್ಳು. ಕನ್ನಡ ಭಾಷೆಯು ಅಪಾರ ಚೈತನ್ಯವುಳ್ಳ ಭಾಷೆ. ಕನ್ನಡದ ಮೂಲಕವೂ ಕಲಿತೂ ಶ್ರೇಷ್ಠ ವಿಜ್ಞಾನಿಯಾಗಬಹುದು ಎನ್ನುವುದಕ್ಕೆ ನಮ್ಮವರೇ ಉದಾಹರಣೆಗಳಾಗಿ ಇದ್ದಾರೆ. ನಾನೂ ಕೂಡ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದವನು' ಎಂದು ಹೇಳಿದರು.

‘ಶಿಕ್ಷಣದಲ್ಲಿ ಕಲಿಕೆಯ ಮಾಧ್ಯಮ ದೊಡ್ಡ ಸವಾಲಾಗಿ ನಮ್ಮೆದುರು ಬೆಳೆದು ನಿಂತಿದೆ. ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ನೀಡಬೇಕು ಎಂಬುದು ಸರ್ಕಾರದ ಸಂಕಲ್ಪ. ಈ ನಿರ್ಧಾರಕ್ಕೆ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನಿಂದಾಗಿ ಹಿನ್ನಡೆಯಾಗಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಶೀಲನಾ ಅರ್ಜಿ ಮತ್ತು ಪರಿಹಾರಾತ್ಮಕ ಅರ್ಜಿ ಎರಡನ್ನೂ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ' ಎಂದರು.

'ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ.ಅದು ಹೆತ್ತವರ ಆಯ್ಕೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಈ ತೀರ್ಪು ಜಾರಿ ಆದರೆ, ಕನ್ನಡವೊಂದೇ ಅಲ್ಲ , ನಮ್ಮ ಎಲ್ಲ ಪ್ರಾದೇಶಿಕ ಭಾಷೆಗಳೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ಈ ಅಪಾಯವನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಅಗತ್ಯ ಬಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ಪ್ರಧಾಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದಾಗ ಗಮನ ಸೆಳೆದಿದ್ದೇನೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದ್ದೇನೆ. ಹೋರಾಟಗಾರರು ಮತ್ತು ಕಾನೂನು ತಜ್ಞರ ಜತೆ ಮಾತುಕತೆ ನಡೆಸಿರುವುದಾಗಿ’ ಹೇಳಿದರು.

‘ಶೀಘ್ರವೇ ಸಂಸ್ಕೃತಿ ನೀತಿ ಜಾರಿ’
ಅತಿ ಶೀಘ್ರವೇ ಸಂಸ್ಕೃತಿ ನೀತಿಯನ್ನು ಜಾರಿಗೊಳಿಸುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

‘ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಂಸ್ಕೃತಿ ನಿರೂಪಣಾ ಸಮಿತಿ ನೀಡಿರುವ ವರದಿಯ ಅಧ್ಯಯನಕ್ಕೆ ಸಂಪುಟ ಉಪಸಮಿತಿಯನ್ನು ನೇಮಿಸ ಲಾಗಿತ್ತು. ಉಪ ಸಮಿತಿಯು ಬಹು ತೇಕ ಶಿಫಾರಸುಗಳನ್ನು ಒಪ್ಪಿದೆ.  ಉಪಸಮಿತಿಯ ಅಭಿಪ್ರಾಯದ ವರದಿಯನ್ನು ಶೀಘ್ರವೇ ಸಂಪುಟದ ಮುಂದೆ ತಂದು ಸಂಸ್ಕೃತಿ ನೀತಿ ಜಾರಿ ಮಾಡಲಾಗುವುದು’ ಎಂದರು.

ಸರ್ಕಾರ ಯಾವತ್ತೂ ಸಾಹಿತಿಗಳ ಮತ್ತು ಸಾಹಿತ್ಯ ಪರಿಷ ತ್ತಿನ ಪರವಾಗಿದೆ’ ಎಂದರು.

ಗುರುವಿಗೆ ಧ್ವಜ ಹಸ್ತಾಂತರ
82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರಿಗೆ ನಿಕಟಪೂರ್ವ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಅವರು ಕಸಾಪ  ಧ್ವಜ ಹಸ್ತಾಂತರಿಸಿದರು.

‘ಗುರುವಿಗೆ ತಿರು ಮಂತ್ರ ಹಾಕುವವರೇ ಹೆಚ್ಚು. ನನ್ನ ವಿದ್ಯಾ ಗುರು ಬರಗೂರು ರಾಮಚಂದ್ರಪ್ಪ ಅವರಿಗೆ ನಾನು ಧ್ವಜ ಹಸ್ತಾಂತರಿ ಸಿದ್ದೇನೆ. ಈ ಅವಕಾಶ ಕಲ್ಪಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ಕೃತಜ್ಞತೆಗಳು’ ಎಂದು ಸಿದ್ಧಲಿಂಗಯ್ಯ ಹೇಳಿದರು.

* ಎಡ-ಬಲ ಚಿಂತನೆಗಳು ಇದ್ದ ಹಾಗೆ ಸಮನ್ವಯ ಚಿಂತನೆಯೂ ಇರುತ್ತದೆ. ಇವೆಲ್ಲ ಬಲ್ಲ ಸಾಹಿತಿ ಜನಪರ, ವಿರೋಧಿ ಯಾವುದು ಎಂಬುದನ್ನು ಯೋಚಿಸಿ ಸರ್ವ ಜನಾಂಗದ ಶಾಂತಿಯ ತೋಟವಾಗಿಸಿ, ಸಾಹಿತ್ಯ ಸೃಷ್ಠಿಸುತ್ತಾನೆ-
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಮುಖ ಅಂಶಗಳು
* ಹೈದ್ರಾಬಾದ್- ಕರ್ನಾಟಕ ಗ್ರಾಮ ಜಗತ್ತಿನ ಸಮಾನತಾ ದೃಷ್ಟಿಕೋನವನ್ನು ಬಿಂಬಿಸಿದ ತತ್ವಪದ ಸಾಹಿತ್ಯ ಸಂಗ್ರಹ ಮತ್ತು ಪ್ರಕಟಣೆಯ ಯೋಜನೆ.

* ರಾಜ್ಯಾದ್ಯಂತ ಇರುವ ತತ್ವ ಪದಗಳನ್ನು ಸಂಗ್ರಹಿಸಿದ, ಒಂದೊಂದು 500 ಪುಟಗಳವರೆಗೆ  ಇರುವ 50 ಸಂಪುಟಗಳ ಮುದ್ರಣ.

* ಎಲ್ಲ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದಿದ್ದು, ಎಲ್ಲಮುಖ್ಯಮಂತ್ರಿಗಳ ಸಭೆ ಕರೆಯಲಾಗುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.