ADVERTISEMENT

ಮಾಲೀಕನ ಮನೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಜೀತ!

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 0:00 IST
Last Updated 28 ಜುಲೈ 2016, 0:00 IST
ಎಸ್‌.ಈಶ್ವರಿ
ಎಸ್‌.ಈಶ್ವರಿ   

ಸಿದ್ದಾಪುರ (ವಿರಾಜಪೇಟೆ): ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದರೂ ಅಧ್ಯಕ್ಷರ ಕುರ್ಚಿಯಲ್ಲಿ ಕೂರಲು ತೋಟದ ಮಾಲೀಕನ ಒಪ್ಪಿಗೆ ಪಡೆಯಬೇಕು. ಸಭೆ ಯಲ್ಲಿ ಹೇಳಿದಂತೆ ಕೇಳಬೇಕು, ಅವರ ಸೂಚನೆಯಂತೆ ದಾಖಲೆಗಳಿಗೂ ಸಹಿ ಹಾಕಬೇಕು, ಪಡಿತರ ತರಲೂ ಅನುಮತಿಗೆ ಕಾಯಬೇಕು...

–ಇದು ಯಾವುದೊ ಕತೆಯಲ್ಲ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್‌.ಈಶ್ವರಿ ಅವರ ನಿಜಸ್ಥಿತಿ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎಸ್‌.ಗೋಪಾಲಕೃಷ್ಣ ಅವರು ಗ್ರಾ.ಪಂ ಅಧ್ಯಕ್ಷೆಯನ್ನು ತಮ್ಮ ತೋಟದಲ್ಲಿ ಕೂಲಿಯಾಳಾಗಿ ದುಡಿಸಿಕೊಳ್ಳುತ್ತಿದ್ದಾರೆ. ಜತೆಗೆ ‘ನಾನು ಹೇಳಿದಂತೆಯೇ ಕೇಳಬೇಕು’ ಎಂದು ಕಟ್ಟಪ್ಪಣೆ ವಿಧಿಸಿದ್ದಾರೆ.

ಗೋಪಾಲ ಕೃಷ್ಣ ಅವರ ತೋಟ ದಲ್ಲಿ ಕೆಲಸ ಮಾಡು ತ್ತಿದ್ದ ಈಶ್ವರಿ, ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಧ್ಯಕ್ಷ ಸ್ಥಾನ ಸಹ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದ ಕಾರಣ ‘ಎರವ’ ಜನಾಂಗಕ್ಕೆ ಸೇರಿದ ಈಶ್ವರಿ ಒಮ್ಮತ ದಿಂದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

‘ನನ್ನಿಂದಲೇ ಈ ಸ್ಥಾನಕ್ಕೆ ಏರಿದ್ದು’ ಎಂಬ ಕಾರಣಕ್ಕೆ ಅಧ್ಯಕ್ಷೆಯನ್ನು ಗೋಪಾಲಕೃಷ್ಣ ಕೈಗೊಂಬೆ ಮಾಡಿಕೊಂಡಿದ್ದಾರೆ. ಈಗಲೂ ತೋಟದಲ್ಲಿ ಆಕೆಗೆ ದಿಗ್ಬಂಧನ ಹಾಕಿ, ಕೂಲಿ ಕೆಲಸ ಮಾಡಿಸಿ ಕೊಳ್ಳುತ್ತಿದ್ದಾರೆ. ಆಕೆ ಉಡುವ ಬಟ್ಟೆ ಸೇರಿದಂತೆ ಎಲ್ಲದಕ್ಕೂ ತೋಟದ ಮಾಲೀಕನ ಎದುರು ಕೈಚಾಚಬೇಕಿದೆ.

ಮಕ್ಕಳನ್ನು ಶಾಲೆಗೆ ಕಳುಹಿಸಲೂ ಬಿಡುತ್ತಿಲ್ಲ. ಪತಿ, ಇಬ್ಬರು ಮಕ್ಕಳು ಸಹ ಮಾಲೀಕನ ಶೋಷಣೆಗೆ ಒಳಗಾಗಿದ್ದಾರೆ.

‘ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಬೇಕಿದ್ದ ಈಶ್ವರಿ ಅವರನ್ನು ತೋಟದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ತೋಟದಲ್ಲಿ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ’ ಎಂಬ ಆರೋಪಗಳು ಕೇಳಿಬರುತ್ತಿವೆ.

ರೇಷನ್‌ ಕಾರ್ಡ್ ಸಹ ವಶ: ‘ಪಡಿತರ ಚೀಟಿ ಸೇರಿದಂತೆ ಜಾತಿ ಪ್ರಮಾಣ ಪತ್ರವನ್ನೂ ಗೋಪಾಲಕೃಷ್ಣ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಎಲ್ಲ ದಾಖಲಾತಿಗಳನ್ನು ಇಟ್ಟುಕೊಂಡಿದ್ದು, ಚುನಾವಣೆಯಲ್ಲಿ ನಾನೇ ನಿನ್ನನ್ನು ಗೆಲ್ಲಿಸಿದ್ದು ಎಂದು ಹೇಳಿ ಈ ರೀತಿ ಹಿಂಸೆ ನೀಡುತ್ತಿದ್ದಾರೆ. ನೀಡಬೇಕಾಗಿದ್ದ 10 ತಿಂಗಳ ಸಂಬಳ 9,800ಅನ್ನು ಸಹ ಅವರೇ ಬಳಸಿಕೊಂಡಿದ್ದಾರೆ’ ಎಂದು ಈಶ್ವರಿ ದೂರಿದ್ದಾರೆ.

‘ಯಾರ ಬಳಿಯೂ ಈ ನೋವನ್ನು ಹಂಚಿಕೊಳ್ಳುತ್ತಿರಲಿಲ್ಲ. ಬದಲಾಗಿ ಪ್ರತಿ ಸಭೆಯಲ್ಲಿ ತಲೆ ತಗ್ಗಿಸಿ ಮೌನಕ್ಕೆ ಶರಣಾಗುತ್ತಿದ್ದರು’ ಎಂದು ಪಂಚಾಯಿತಿಯ ಇತರೆ ಸದಸ್ಯರು ಅಭಿಪ್ರಾಯಪಟ್ಟರು.

ಪ್ರಕರಣ ದಾಖಲು: ಪಂಚಾಯಿತಿ ಅಧ್ಯಕ್ಷೆಗೆ ದಿಗ್ಬಂಧನ ಹಾಕಿರುವ ಸದಸ್ಯ ಗೋಪಾಲಕೃಷ್ಣ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT