ADVERTISEMENT

ಮೂರನೇ ದಿನವೂ ಉರಿದ ಕಾಡು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 19:30 IST
Last Updated 20 ಫೆಬ್ರುವರಿ 2017, 19:30 IST
ಎಚ್‌.ಡಿ.ಕೋಟೆ ತಾಲ್ಲೂಕು ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಧಗಧಗಿಸುತ್ತಿರುವ ಕಾಳ್ಗಿಚ್ಚು ಸೋಮವಾರ ರಾತ್ರಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ  –ಪ್ರಜಾವಾಣಿ ಚಿತ್ರ
ಎಚ್‌.ಡಿ.ಕೋಟೆ ತಾಲ್ಲೂಕು ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಧಗಧಗಿಸುತ್ತಿರುವ ಕಾಳ್ಗಿಚ್ಚು ಸೋಮವಾರ ರಾತ್ರಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ –ಪ್ರಜಾವಾಣಿ ಚಿತ್ರ   

ಮೈಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮೂರನೇ ದಿನವಾದ ಸೋಮವಾರವೂ ಕಾಳ್ಗಿಚ್ಚು ನಿಯಂತ್ರಣಕ್ಕೆ ಬಂದಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಅಗ್ನಿಶಾಮಕಪಡೆಯ ಸಿಬ್ಬಂದಿ ಧಗಧಗಿಸುತ್ತಿರುವ ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ.

ಈ ಪ್ರದೇಶದಲ್ಲಿ ಇಷ್ಟು ದೊಡ್ಡ ಸ್ವರೂಪದ ಕಾಳ್ಗಿಚ್ಚು ಉಂಟಾಗಿರುವುದು ಇದೇ ಮೊದಲು ಎಂದು ಸುತ್ತಮುತ್ತಲ ಗ್ರಾಮಸ್ಥರು ಹೇಳುತ್ತಾರೆ. ಮೊಳೆಯೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಇದೀಗ ಚಿಕ್ಕಬೆಸುಗೆ, ಬಂಕವಾಡಿ ಸಮೀಪದ ಅರಣ್ಯ ಪ್ರದೇಶಗಳಿಗೂ ವಿಸ್ತರಿಸಿ ಬೇಗೂರು ಅರಣ್ಯ ವಲಯಕ್ಕೆ ವ್ಯಾಪಿಸಿದೆ. 200ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿಯ ತೀವ್ರತೆ ಕಡಿಮೆ ಇರುವ ಕಡೆ ಹಸಿರು ಸೊಪ್ಪಿನಿಂದ ಬಡಿಯುತ್ತ ಸಿಬ್ಬಂದಿ ಆರಿಸುತ್ತಿದ್ದಾರೆ. ಆದರೆ, ಗಾಳಿಗೆ ತೂರುತ್ತಾ ಹೋಗುವ ಲಂಟಾನ ಕಡ್ಡಿಗಳು ಬೆಂಕಿಯನ್ನು ಬಹುದೂರಕ್ಕೆ ಪಸರಿಸುತ್ತಿವೆ. ಕೆಲವೆಡೆ ಫೈರ್‌ಲೈನ್‌ಗಳನ್ನು ಮಾಡಿ ಇನ್ನಷ್ಟು ಪ್ರದೇಶಗಳಿಗೆ ಬೆಂಕಿ ವಿಸ್ತರಿಸದಂತೆ ತಡೆಯುತ್ತಿದ್ದಾರೆ. ಮೊಳೆಯೂರಿನಲ್ಲಿ ಉಂಟಾದ ಬೆಂಕಿ ಬೇಗೂರಿನ ತನಕ ವ್ಯಾಪಿಸಿದೆ.

ADVERTISEMENT

ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಚ್.ಡಿ.ಕೋಟೆ ತಾಲ್ಲೂಕಿನ ಅಗ್ನಿಶಾಮಕ ಪಡೆಯ ಸಿಬ್ಬಂದಿಗೆ ನೀರಿನ ಕೊರತೆ ಎದುರಾಗಿದೆ. ಕುಂಬಾರಕಟ್ಟೆ, ಹಿಡುಗಳಪಂಜಿ, ಸೇಬಗೆರೆ ಸೇರಿದಂತೆ ಸುತ್ತಮುತ್ತಲ ಕೆರೆಗಳು ಬತ್ತಿವೆ. ಸಮೀಪದ ಗ್ರಾಮಗಳಲ್ಲಿರುವ ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಹೀಗಾಗಿ, ಬೆಂಕಿ ನಂದಿಸಲು ನೀರೇ ಸಿಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

20 ಕಿ.ಮೀ ಅರಣ್ಯ ಭಸ್ಮ: ಕಳೆದ ಮೂರು ದಿನಗಳಿಂದ ಸುಮಾರು 20 ಕಿ.ಮೀ ವ್ಯಾಪ್ತಿಯ ಅರಣ್ಯ ಪ್ರದೇಶ ಭಸ್ಮವಾಗಿದೆ. ಕುರುಚಲು ಗಿಡಗಳ ಜತೆಗೆ ಬೀಟೆ, ತೇಗ, ಹೊನ್ನೆ, ಸಾಗುವನಿ ಮರಗಳೂ ಉರಿದು ಹೋಗಿವೆ.

* ಶೇ 90ರಷ್ಟು ಬೆಂಕಿ ಹತೋಟಿಗೆ ಬಂದಿದೆ. ಬೇಗೂರು ಕಡೆ ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಇದೆ. ಇದನ್ನು ತಡೆಯಲು ಶ್ರಮಿಸಲಾಗುತ್ತಿದೆ. ನಷ್ಟದ ಅಂದಾಜು ಇನ್ನೂ ಮಾಡಿಲ್ಲ
-ಹಿರಾಲಾಲ್, ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.