ADVERTISEMENT

ಯಕ್ಷಗಾನದಲ್ಲಿ ಚುಂಬನದ ದೃಶ್ಯ ವೈರಲ್‌ ಆದ ವಿಡಿಯೊ ತುಣುಕು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ಮಂಗಳೂರು: ಬಂಟ್ವಾಳ ತಾಲ್ಲೂಕಿನ ವಗೆನಾಡು ಎಂಬಲ್ಲಿ ನಡೆದ ‘ಗಾನ ನಾಟ್ಯ ವೈಭವ’ ಯಕ್ಷಗಾನ ಕಾರ್ಯಕ್ರಮದಲ್ಲಿ ಜಯಂತನ ಪಾತ್ರಧಾರಿ ಚುಂಬನದ ದೃಶ್ಯವನ್ನು ಅಭಿನಯಿಸಿರುವುದನ್ನು ಯಕ್ಷಗಾನ ಪ್ರೇಮಿಗಳು ಆಕ್ಷೇಪಿಸಿದ್ದಾರೆ.

ಈ ದೃಶ್ಯದ ವಿಡಿಯೊ ತುಣುಕು ಎರಡು ದಿನಗಳಿಂದ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿನಯವು ಅಶ್ಲೀಲವಾಗಿದೆ ಎಂಬ ಆರೋಪಗಳು ಹಾಗೂ ಸಮರ್ಥನೆಗಳು ವ್ಯಕ್ತವಾದವು. ಇಂದ್ರನ ಮಗ ಜಯಂತ ತನ್ನ ಪ್ರೇಯಸಿ ಸುಷಮೆಯೊಡನೆ ಸರಸವಾಡುವ ಪದ್ಯವೊಂದರಲ್ಲಿ ಜಯಂತ ಪಾತ್ರಧಾರಿಯಾಗಿ ರಾಕೇಶ್‌ ರೈ ಅಡ್ಕ ಮತ್ತು ಸುಷಮೆಯ ಪಾತ್ರಧಾರಿ ಆಗಿ ಪ್ರಶಾಂತ್‌ ಶೆಟ್ಟಿ ನೆಲ್ಯಾಡಿ ಅಭಿನಯಿಸಿದ್ದರು.

ತುಟಿಗಳನ್ನು ಬೆಸೆಯುವ ಚುಂಬನದ ಮಾದರಿಯಲ್ಲಿ ರಾಕೇಶ್‌ ಅವರು ಅಭಿನಯಿಸಿದ್ದು ತೀರಾ ಅಶ್ಲೀಲವಾಗಿ ಗೋಚರಿಸುತ್ತಿದೆ. ಯಕ್ಷಗಾನ ಕಲೆಯಲ್ಲಿ ಯಾವುದೇ ಭಾವಾಭಿವ್ಯಕ್ತಿಗೆ ಆಂಗಿಕ ಸಾಮೀಪ್ಯದ ಅಗತ್ಯವಿರುವುದಿಲ್ಲ. ಅದಕ್ಕೆ ಪೂರಕವಾದ ನಾಟ್ಯ, ಭಾವಾಭಿನಯದ ಮೂಲಕವೇ ಪ್ರದರ್ಶಿಸಬೇಕು ಎನ್ನುವುದು ಟೀಕಾಕಾರರ ಅಭಿಪ್ರಾಯ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಕಲಾವಿದ ರಾಕೇಶ್‌ ರೈ ಅಡ್ಕ, ‘ಕಾರ್ಯಕ್ರಮ ಬೇಗ ಮುಗಿಸಲು ಭಾಗವತರ ಸೂಚನೆಯನ್ನು ದಾಟಿಸಲು ನಾನು ಮುಖದ ಬಳಿ ಸಾರಿದ್ದೆ ಹೊರತು ಚುಂಬಿಸುವ ಉದ್ದೇಶದಿಂದ ಅಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಯ್ದ ಯಕ್ಷಗಾನದ ಹಾಡುಗಳಿಗೆ ನಾಟ್ಯ ಪ್ರದರ್ಶನ ನೀಡುವ ಕಾರ್ಯಕ್ರಮ ‘ಗಾನ ನಾಟ್ಯ ವೈಭವ’. ಈ ಕಾರ್ಯಕ್ರಮದಲ್ಲಿ ಅರ್ಥಗಾರಿಕೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.