ADVERTISEMENT

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 13:19 IST
Last Updated 6 ಅಕ್ಟೋಬರ್ 2017, 13:19 IST
ಹವಾಮಾನ ಇಲಾಖೆ ಪ್ರಕಟಿಸಿರುವ ಶುಕ್ರವಾರದ ಮಳೆ ಮಾರುತದ ಚಲನೆ ಸ್ಯಾಟಲೈಟ್‌ ಚಿತ್ರ
ಹವಾಮಾನ ಇಲಾಖೆ ಪ್ರಕಟಿಸಿರುವ ಶುಕ್ರವಾರದ ಮಳೆ ಮಾರುತದ ಚಲನೆ ಸ್ಯಾಟಲೈಟ್‌ ಚಿತ್ರ   

ಬೆಂಗಳೂರು: ರಾಜಧಾನಿ ಸೇರಿದಂತೆ ಎಲ್ಲೆಡೆ ಆರ್ಭಟಿಸುತ್ತಿರುವ ಮಳೆ ಇಂದು ಸೇರಿದಂತೆ ಮುಂದಿನ ಮೂರು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಬುಧವಾರ ಹಾಗೂ ಗುರುವಾರ ಮಧ್ಯಾಹ್ನ ಮತ್ತು ರಾತ್ರಿ ಸುರಿದ ಭಾರಿ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿ, ಜನಜೀವನಕ್ಕೆ ತೊಂದರೆಯಾಗಿದೆ. ಎರಡು ದಿನದಲ್ಲಿ ಒಟ್ಟು 10 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ 1.30ರಿಂದ ಅರ್ಧತಾಸು, ರಾತ್ರಿ 7.45ರಿಂದ ಒಂದು ತಾಸು ಭಾರಿ ಮಳೆ ಸುರಿದು ರಸ್ತೆಗಳೆಲ್ಲ ನದಿಯಂತಾಗಿದ್ದವು. 

ಆರ್ಭಟಿಸುತ್ತಿರುವ ಮಳೆ ಶುಕ್ರವಾರ ಸೇರಿದಂತೆ ಅ.9ರ ವರೆಗೆ ಮುಂದಿನ ಮೂರು ದಿನ ಮುಂದುವರಿಯಲಿದ್ದು, ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ADVERTISEMENT

ವಾಮಾನ ಇಲಾಖೆ ಪ್ರಕಟಿಸಿರುವ ಶುಕ್ರವಾರದ ಮಳೆ ಮಾರುತದ ಚಲನೆ ಸ್ಯಾಟಲೈಟ್‌ ಚಿತ್ರ

* ಇಂದು(ಅ. 6ರಂದು) ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

* ಅ. 7ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಂದೆರೆಡು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

* ಅ. 8ರಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಂದೆರೆಡು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. 

* ಅ. 9ರಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್‌, ಕಲಬುರ್ಗಿ, ಯಾದಗಿರಿ, ಬೆಳಗಾವಿ ಜಿಲ್ಲೆಗಳಲ್ಲಿ ಒಂದೆರೆಡು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.

ಹಿಂಗಾರು ಮಳೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಗುಡುಗು, ಮಿಂಚು ಇರುತ್ತದೆ. ಈಗ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಬಂಗಾಳ ಕೊಲ್ಲಿಯ ಒಡಿಶಾ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದಿನ ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ ಸಾಕಷ್ಟು ಮಳೆಯಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಹವಾಮಾನ ಇಲಾಖೆ ಪ್ರಕಟಿಸಿರುವ ಶುಕ್ರವಾರದ ಮಳೆ ಮಾರುತದ ಚಲನೆ ಸ್ಯಾಟಲೈಟ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.