ADVERTISEMENT

'ರಾಜ್ಯದಲ್ಲಿ 800 ದಲಿತ ಮಹಿಳೆಯರ ಮೇಲೆ ಅತ್ಯಾಚಾರ'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 12:43 IST
Last Updated 25 ಏಪ್ರಿಲ್ 2018, 12:43 IST
'ರಾಜ್ಯದಲ್ಲಿ 800 ದಲಿತ ಮಹಿಳೆಯರ ಮೇಲೆ ಅತ್ಯಾಚಾರ'
'ರಾಜ್ಯದಲ್ಲಿ 800 ದಲಿತ ಮಹಿಳೆಯರ ಮೇಲೆ ಅತ್ಯಾಚಾರ'   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ 3857 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು 800 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಜನರಿಗೆ ಉತ್ತರ ನೀಡಬೇಕು ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಒತ್ತಾಯಿಸಿದರು.

‘ಅಷ್ಟೇ ಅಲ್ಲ ರಾಜ್ಯದಲ್ಲಿ ಒಟ್ಟು 7523 ಮಹಿಳೆಯರ ಹತ್ಯೆಯಾಗಿದೆ. ಆದ್ದರಿಂದ, ರಾಹುಲ್ ಗಾಂಧಿ ಕರ್ನಾಟಕದಲ್ಲಿ ಕ್ಯಾಂಡಲ್ ಲೈಟ್ ಹಿಡಿದು ಪ್ರತಿಭಟನೆ ನಡೆಸುವರೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ರಾಹುಲ್ ಅವರು ಗುರುವಾರದಿಂದ ರಾಜ್ಯ ಚುನಾವಣಾ ಪ್ರಚಾರ ನಡೆಸುತ್ತಾರೆ. ಅದಕ್ಕೂ ಮೊದಲು ಐದು ಪ್ರಶ್ನೆಗಳಿಗೆ ಉತ್ತರ ನೀಡಬೇಕು’ ಎಂದೂ ಆಗ್ರಹಿಸಿದರು.

ADVERTISEMENT

ಪ್ರಶ್ನೆಗಳು ಹೀಗಿವೆ-

* ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 3718 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ. ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ಆತ್ಮಹತ್ಯೆಗಳು ಆಗಿಲ್ಲ.

* ಯುಪಿಎ ಅವಧಿಯಲ್ಲಿ ರಾಜ್ಯದಲ್ಲಿ ಬರಗಾಲ ಮತ್ತು ಪ್ರವಾಹದ ಸಂದರ್ಭದಲ್ಲಿ 5 ವರ್ಷಗಳ ಅವಧಿಗೆ ಕೊಟ್ಟ ಹಣ ₹4822 ಕೋಟಿ. ಅದರೆ, ಮೋದಿ ಸರ್ಕಾರ 2014 ರಿಂದ 2017ರ ಅವಧಿಯಲ್ಲಿ ಬರಗಾಲ ಪರಿಹಾರವಾಗಿ ₹5693.69 ಕೋಟಿ ಹಣ ನೀಡಿದೆ. ಮೋದಿ ಕೊಟ್ಟ ಹಣವನ್ನು ಸಿದ್ದರಾಮಯ್ಯ ಯಾವ ರೀತಿ ಖರ್ಚು ಮಾಡಿದ್ದಾರೆ ಎಂಬುದಕ್ಕೆ ಲೆಕ್ಕ ಕೊಡಬೇಕು. ಮೋದಿ ಕೊಟ್ಟರೂ ಸಿದ್ದರಾಮಯ್ಯ ಕೊಡಲ್ಲ ಎಂಬ ಮಾತಿದೆ.

* ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಮುನ್ನ ರಾಜ್ಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಉತ್ತರ ನೀಡಬೇಕು.

* ರಾಜ್ಯದಲ್ಲಿ 2015ರಲ್ಲಿ 254 ಕೋಮುಗಲಭೆಗಳು ನಡೆದಿವೆ. ಸಿದ್ದರಾಮಯ್ಯ ಅವರ ತುಷ್ಟೀಕರಣದಿಂದಾಗಿ ಬಹುಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಪಿಎಫ್ಐ ಮತ್ತು ಎಸ್‌ಡಿಪಿಐ ಕಾರಣ. ಈ ಎರಡೂ ಸಂಘಟನೆಗಳಿಗೆ ಸೇರಿದ 175 ಜನರ ವಿರುದ್ಧ ಕ್ರಿಮಿನಲ್ ಕಟ್ಲೆಯನ್ನು ವಾಪಸ್ ಪಡೆಯಲಾಗಿದೆ. ಇದಕ್ಕೆ ಏನು ಹೇಳುತ್ತಾರೆ.

* ಬೆಂಗಳೂರಿನಲ್ಲಿ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಭಾರಿ ಹಗರಣ ನಡೆದಿವೆ. ಕೇವಲ 10.7 ಕಿ.ಮೀ ರಿಂಗ್ ರೋಡ್‌ಗೆ ₹468 ಕೋಟಿ ನಿಗದಿ ಮಾಡಲಾಗಿದೆ. ಅಚ್ಚರಿ ಎಂದರೆ ಇಸ್ರೋ ಮಂಗಳ ಗ್ರಹಕ್ಕೆ ₹450 ಕೋಟಿ ಖರ್ಚು ಮಾಡಿ ನೌಕೆಯನ್ನು ಕಳುಹಿಸಿದೆ. ಬೆಂಗಳೂರಿನಲ್ಲಿ 10 ಕಿ.ಮೀ ರಸ್ತೆ ನಿರ್ಮಾಣ ಬಾಹ್ಯಾಕಾಶ ಯಾನಕ್ಕಿಂತ ದುಬಾರಿಯಾಗಿದೆ.

ಈ ಪ್ರಶ್ನೆಗಳ ಮೂಲಕ ರಾಹುಲ್ ಅವರನ್ನು ರಾಜ್ಯಕ್ಕೆ ಸ್ವಾಗತಿಸುತ್ತಿದ್ದೇವೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.