ADVERTISEMENT

ರಾಷ್ಟ್ರಕವಿ ಆಯ್ಕೆ: ಸಮಿತಿ ನಿರ್ಧಾರಕ್ಕೆ ಕಸಾಪ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಮೇ 2015, 19:30 IST
Last Updated 5 ಮೇ 2015, 19:30 IST

ಬೆಂಗಳೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕವಿಗಳಿಗೆ ರಾಷ್ಟ್ರಕವಿಯಂತಹ ಬಿರುದು ನೀಡುವ ಅಗತ್ಯವಿಲ್ಲ ಎಂಬ ರಾಷ್ಟ್ರಕವಿ ಆಯ್ಕೆ ಸಮಿತಿಯ ನಿರ್ಧಾರವನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಕಟುವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ 9ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಅರಸೊತ್ತಿಗೆಯ ಪಳೆಯುಳಿಕೆ ಯಂತಿರುವ ಇಂತಹ ಸ್ಥಾನಮಾನಗಳನ್ನು ಮುಂದುವರಿಸುವುದು ಬೇಡ ಎಂದು ಸಮಿತಿ ಹೇಳಿದೆ. ಹಾಗಿದ್ದರೆ ಕನ್ನಂಬಾಡಿ ಕಟ್ಟೆ, ಮೈಸೂರು ಬ್ಯಾಂಕ್‌ ವೃತ್ತ ಒಡೆದು ಹಾಕಬೇಕಾ’ ಎಂದು ಪ್ರಶ್ನಿಸಿದರು.

‘ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಕಟ್ಟಿಸಿದವರು ಮೈಸೂರು ಅರಸರು. ಸಮಿತಿಯ ಪ್ರಕಾರ ಅದನ್ನೂ ಒಡೆದು ಹಾಕಬೇಕಾಗುತ್ತದೆ’ ಎಂದು ಆಕ್ರೋಶದಿಂದ ನುಡಿದರು.

‘ಸಮಿತಿಯ ಅಧ್ಯಕ್ಷರು ನಿವೃತ್ತ ನ್ಯಾಯಾಧೀಶರು. ನ್ಯಾಯಾಲಯ ವ್ಯವಸ್ಥೆಯನ್ನು ಆರಂಭಿಸಿದವರು ಬ್ರಿಟಿಷರು. ಅದು ಬ್ರಿಟಿಷ್ ಪಳೆಯುಳಿಕೆ. ಅದನ್ನು ಸಮಿತಿಯಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.