ADVERTISEMENT

ವಾಟ್ಸ್ಆ್ಯಪ್‌ನಲ್ಲಿ ಪಿಯು ಪ್ರಶ್ನೆಪತ್ರಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 4:42 IST
Last Updated 14 ಮಾರ್ಚ್ 2017, 4:42 IST
ಮಾನ್ವಿಯಲ್ಲಿ ಸೋಮವಾರ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದ ದ್ವಿತೀಯ ಪಿಯುಸಿ ಅಕೌಂಟೆನ್ಸಿ ಪ್ರಶ್ನೆಪತ್ರಿಕೆ
ಮಾನ್ವಿಯಲ್ಲಿ ಸೋಮವಾರ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದ ದ್ವಿತೀಯ ಪಿಯುಸಿ ಅಕೌಂಟೆನ್ಸಿ ಪ್ರಶ್ನೆಪತ್ರಿಕೆ   

ಮಾನ್ವಿ (ರಾಯಚೂರು ಜಿಲ್ಲೆ)/ ಬೆಂಗಳೂರು: ದ್ವಿತೀಯ ಪಿಯುಸಿ ಅಕೌಂಟೆನ್ಸಿ ವಿಷಯದ ಪ್ರಶ್ನೆಪತ್ರಿಕೆ ಸೋಮವಾರ ಪರೀಕ್ಷೆ ಆರಂಭವಾದ ಅರ್ಧಗಂಟೆಯಲ್ಲೇ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದೆ.

ಕಳೆದ ವರ್ಷ ದ್ವಿತೀಯ ಪಿಯುಸಿ ರಸಾಯನವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ದೊಡ್ಡ ವಿವಾದ ಸೃಷ್ಟಿಸಿತ್ತು. ಹೀಗಾಗಿ ಈ ವರ್ಷ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಷ್ಟಾದರೂ ಈ ಬಾರಿ ಅಕ್ರಮ ನಡೆದಿದಿದ್ದು, ರಾಜ್ಯ ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.

ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆರಂಭಿಸಿದ ಅರ್ಧಗಂಟೆಯಲ್ಲಿ ವಿಚಕ್ಷಣ  ದಳದ ಅಧಿಕಾರಿಯ ಸೋಗಿನಲ್ಲಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಉಪನ್ಯಾಸಕ ಸಿದ್ದನಗೌಡ ತನ್ನ ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆ ಫೋಟೊ ತೆಗೆದು ಅದನ್ನು ಪ್ರಾಚಾರ್ಯ ಮಹೇಶ ಕುಮಾರ ಅವರಿಗೆ ರವಾನಿಸಿದ.

ADVERTISEMENT

ಬಳಿಕ ಅದು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕಳಿಂಗ ಕಾಲೇಜಿನ ಪ್ರಾಚಾರ್ಯ ಮಹೇಶ ಕುಮಾರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಮಾನ್ವಿ ಪಟ್ಟಣದ ಕಳಿಂಗ ಪಿ.ಯು ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಶರಣಬಸವ ಬೆಟ್ಟದೂರು ಮತ್ತು ಶ್ರೀಪಂಪಾ ವಿರೂಪಾಕ್ಷೇಶ್ವರ ಕಲ್ಮಠ ಪಿ.ಯು ಕಾಲೇಜಿನ ಸಂಖ್ಯಾಶಾಸ್ತ್ರ ಉಪನ್ಯಾಸಕ ಸಿದ್ದನಗೌಡ ಮತ್ತಿಬ್ಬರು ಬಂಧಿತರು. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ರಿಮಿನಲ್‌ ಮೊಕದ್ದಮೆ: ಆರೋಪಿಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದು, ಕಳಿಂಗ ಕಾಲೇಜಿನ ಮಾನ್ಯತೆ ರದ್ದು ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಳಿಗ್ಗೆ 10.50ರ ಸುಮಾರಿಗೆ ವಾಟ್ಸ್ಆ್ಯಪ್‌ ಮೂಲಕ ಅಕೌಂಟೆನ್ಸಿ ಪ್ರಶ್ನೆಪತ್ರಿಕೆ ಎಲ್ಲೆಡೆ ಹರಿದಾಡಿತು. ಎಸ್‌ಆರ್‌ಎಸ್‌ವಿಎಸ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆಯ ಛಾಯಾಚಿತ್ರ ತೆಗೆಯಲಾಗಿದೆ ಎಂದು ಸಚಿವರು ಖಚಿತಪಡಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಕೆ.ಗಾದಿಗೆ ಪರೀಕ್ಷಾ ಕೇಂದ್ರಕ್ಕೆ  ಭೇಟಿ ನೀಡಿದಾಗ  ಕೇಂದ್ರದ ಮುಖ್ಯಸ್ಥ ವಿಜಯರಾವ್‌, ಕಾಲೇಜಿನ ಪ್ರಾಚಾರ್ಯ ಈರಣ್ಣ  ಮರ್ಲಟ್ಟಿ ಅವರು ‘ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ.  ಷಡ್ಯಂತ್ರದ ಮೂಲಕ ಪರೀಕ್ಷಾ ಕೇಂದ್ರದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನಿಸಲಾಗಿದೆ’ ಎಂದು ಆರೋಪಿಸಿದರು.

ಮಧ್ಯಾಹ್ನ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌ ವಿಚಾರಣೆ ನಡೆಸಿದರು.

‘ಈ ಸಂದರ್ಭದಲ್ಲಿ ಕಲ್ಮಠ ಕಾಲೇಜಿನ ಉಪನ್ಯಾಸಕ ಸಿದ್ದನಗೌಡ ಪರೀಕ್ಷಾ ಕೇಂದ್ರವೊಂದರಲ್ಲಿ ಅಕ್ರಮವಾಗಿ ಫೋಟೊ ತೆಗೆದು ವಾಟ್ಸ್ಆ್ಯಪ್‌ ಮೂಲಕ ಮೊದಲು ಕಳುಹಿಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ಸಿಂಗ್‌ ರಾಥೋಡ್‌, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನೀಡುವ ದೂರಿನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೋರಿಕೆ ಅಲ್ಲ: ಪ್ರಶ್ನೆ ಪತ್ರಿಕೆ ಬಯಲು ಪ್ರಕರಣ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ‘ಇದು ಪ್ರಶ್ನೆಪತ್ರಿಕೆ ಸೋರಿಕೆಯಲ್ಲ.   ಪರೀಕ್ಷಾ ಅಕ್ರಮ ಅಷ್ಟೆ. ಕೆಲವರ ವಾಟ್ಸ್‌ ಆ್ಯಪ್‌ನಲ್ಲಿ ಮಾತ್ರ ಇದು ಹರಿದಾಡಿದೆ. ಬಹುತೇಕ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಇದರ ಮಾಹಿತಿಯೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಆರೋಪಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸದಂತೆ ತಡೆಯಲು ವಿಫಲರಾದ ಮುಖ್ಯ ಸೂಪರಿಂಟೆಂಡೆಂಟ್‌ ಸಿ.ಎಸ್‌. ವಿಜಯರಾಜ್‌  ಅವರನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಮಾನ್ವಿಯ ಕಳಿಂಗ ಕಾಲೇಜಿನ ಮಾನ್ಯತೆ ರದ್ದು ಮಾಡಲಾಗಿದೆ. ಆ ಕಾಲೇಜಿನಲ್ಲಿ ಈಗ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬರುವ ಶೈಕ್ಷಣಿಕ ವರ್ಷದಲ್ಲಿ ಬೇರೆ ಕಾಲೇಜುಗಳಲ್ಲಿ ದಾಖಲಾತಿಗೆ ಅವಕಾಶ ನೀಡಲಾಗುವುದು. ಹೊಸದಾಗಿ ಪ್ರಥಮ ಪಿಯುಸಿಗೆ  ಪ್ರವೇಶ ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದರು.

ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 18 ಪುಟಗಳಿದ್ದವು. ಕನ್ನಡ ಮಾಧ್ಯಮದಲ್ಲಿ  10 ಪುಟಗಳು, ಇಂಗ್ಲಿಷ್‌ ಮಾಧ್ಯಮದ  8 ಪುಟಗಳಿದ್ದವು. ಆರೋಪಿಗಳು ಒಂದು ಪುಟದ ಚಿತ್ರ ಸೆರೆ ಹಿಡಿದು ತಮ್ಮ ವಾಟ್ಸ್‌ ಆ್ಯಪ್‌ ಮೂಲಕ  ಕೆಲವರಿಗೆ ಕಳುಹಿಸಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಕಳಿಂಗ ಪಿ.ಯು ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಶರಣಬಸವ ಬೆಟ್ಟದೂರು ಈ ಹಿಂದೆ ಪತ್ರಿಕೆಯೊಂದರ ಅರೆಕಾಲಿಕ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು.

6 ವಿದ್ಯಾರ್ಥಿಗಳು ಡಿಬಾರ್‌: ಸೋಮವಾರ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದ 6 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ. ದಾವಣಗೆರೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ನಕಲಿ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ.
ಸಮಾಜಶಾಸ್ತ್ರ ವಿಷಯದಲ್ಲಿ ನಕಲು ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಇಬ್ಬರು, ವಿಜಯಪುರ ಹಾಗೂ ಕಲಬುರ್ಗಿಯ ತಲಾ ಇಬ್ಬರು ವಿದ್ಯಾರ್ಥಿಗಳು ಡಿಬಾರ್‌ ಆಗಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್‌ ನಿಷೇಧ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ನಿಷೇಧಿಸಿ ಸೋಮವಾರ ಸುತ್ತೋಲೆ ಹೊರಡಿಸಲಾಗಿದೆ.

ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ಪ್ರತಿ ವಿದ್ಯಾರ್ಥಿಯನ್ನು ತಪಾಸಣೆ ಮಾಡಿದ ಬಳಿಕ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಸೂಪರಿಂಟೆಂಡೆಂಟ್‌ ಹೊರತುಪಡಿಸಿ ಇತರೆ ಸಿಬ್ಬಂದಿ ಮೊಬೈಲ್‌ ಬಳಸುವಂತಿಲ್ಲ ಎಂದು ನಿರ್ದೇಶಿಸಲಾಗಿದೆ. ಪರೀಕ್ಷೆ ಅವಧಿ ಮುಗಿಯುವ ಮುನ್ನವೇ ಕೊಠಡಿಯಿಂದ ತೆರಳುವ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಯನ್ನು ವಶಕ್ಕೆ ತೆಗೆದುಕೊಂಡು ಪರೀಕ್ಷೆ ಮುಗಿದ ನಂತರ ಸಂಗ್ರಹಿಸಿಕೊಳ್ಳುವಂತೆ ಸೂಚಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರ ನಡೆದರೆ ಅದಕ್ಕೆ ಪರೀಕ್ಷಾ ಕೇಂದ್ರದ ಮುಖ್ಯ ಸೂಪರಿಂಟೆಂಡೆಂಟ್‌ ಮತ್ತು ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಜವಾಬ್ದಾರರಾಗುತ್ತಾರೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

* ಪರೀಕ್ಷೆ ಸುಗಮವಾಗಿ ನಡೆಯಬಾರದು. ಇಲಾಖೆಗೆ ಮತ್ತು ನನಗೆ ಕೆಟ್ಟ ಹೆಸರು ತರಬೇಕೆಂದು ಇಂತಹ ಪ್ರಯತ್ನ ನಡೆಸಿರುವ ಸಾಧ್ಯತೆ ಇದೆ

- ತನ್ವೀರ್‌ ಸೇಠ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.