ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಹುದ್ದೆಗಳೆಲ್ಲಾ ಖಾಲಿ ಖಾಲಿ

ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆ * ಅತಿಥಿ ಉಪನ್ಯಾಸಕರೇ ಆಧಾರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2016, 2:55 IST
Last Updated 15 ಜೂನ್ 2016, 2:55 IST
ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧ
ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧ   

ಉನ್ನತ ಶಿಕ್ಷಣಕ್ಕೆ ಪ್ರತಿ ಬಜೆಟ್ನಲ್ಲಿಯೂ ಸಾವಿರ ಸಾವಿರ ಕೋಟಿ ರೂಪಾಯಿ ನೀಡಲಾಗುತ್ತಿದ್ದರೂ  ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ.

ಬಹಳಷ್ಟು ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸಕರ ಬಲದಲ್ಲಿಯೇ ನಡೆಯುತ್ತಿವೆ. ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳಬೇಕು ಎಂಬ ಕರೆ ಎಲ್ಲ ಕಡೆಯಿಂದ ಕೇಳಿ ಬರುತ್ತಿದ್ದರೂ ವಿಶ್ವವಿದ್ಯಾಲಯಗಳಲ್ಲಿ ತಜ್ಞ ಮತ್ತು ಕಾಯಂ ಪ್ರಾಧ್ಯಾಪಕರಿಲ್ಲ. ಬೋಧಕೇತರ ಸಿಬ್ಬಂದಿಗೂ ಕೊರತೆ ಇದೆ. ಈ ಬಗ್ಗೆ ಪ್ರಜಾವಾಣಿ ನಡೆಸಿದ ಸಮೀಕ್ಷೆ ಇಲ್ಲಿದೆ.

ಮೈಸೂರು: ಶತಮಾನೋತ್ಸವ ಸಡಗರದಲ್ಲಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಧಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ

‘ಹಲವರು ನಿವೃತ್ತಿ ಅಂಚಿನಲ್ಲಿದ್ದು, ಪ್ರತಿ ತಿಂಗಳು 3–4 ಮಂದಿ ನಿವೃತ್ತಿ ಹೊಂದುತ್ತಿದ್ದಾರೆ. 580 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿ­ಸುತ್ತಿದ್ದು, ಕಾಯಂ ಬೋಧಕರಿಗಿಂತಲೂ ಇವರ ಸಂಖ್ಯೆಯೇ ಹೆಚ್ಚು ಇದೆ.

ಆದರೆ, ವಿಶ್ವವಿದ್ಯಾಲಯದಲ್ಲಿ ಕಳೆದ ಹತ್ತು ವರ್ಷಗಳಿಂದ ಈ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ’ ಎಂದು ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

3 ಸ್ನಾತಕೋತ್ತರ ಕೇಂದ್ರಗಳು ಮತ್ತು 4 ಸಂಯೋಜಿತ ಕಾಲೇಜುಗಳು ವಿ.ವಿ ವ್ಯಾಪ್ತಿಗೆ ಒಳಪಟ್ಟಿವೆ. ಒಟ್ಟು 57 ಸ್ನಾತಕೋತ್ತರ ಅಧ್ಯಯನ ವಿಭಾಗಗಳಿವೆ. ಸುಮಾರು 20 ಸಾವಿರ ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ವಿವಿಧ ಅಧ್ಯಯನ ವಿಭಾಗಗಳಲ್ಲಿ 2,886 ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ. ಕೆಲ ವಿಭಾಗಗಳಲ್ಲಿ ಒಬ್ಬರೂ ಕಾಯಂ ಅಧ್ಯಾಪಕರಿಲ್ಲ. ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದಲ್ಲಿ ಮುಖ್ಯಸ್ಥರನ್ನು ಹೊರತು ಪಡಿಸಿದರೆ, ಉಳಿದೆಲ್ಲರೂ ಅತಿಥಿ ಉಪನ್ಯಾಸಕರೆ.

‘55 ಬ್ಯಾಕ್‌ಲಾಗ್‌ ಸೇರಿದಂತೆ ಒಟ್ಟು 205 ಬೋಧಕ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಬ್ಯಾಕ್‌ಲಾಗ್‌ ಹುದ್ದೆಗಳ ಮೀಸಲು,

ಹೈದರಾಬಾದ್‌– ಕರ್ನಾಟಕ ಮೀಸಲು ನಿಗದಿ ಇತ್ಯಾದಿ ಕಾರಣದಿಂದಾಗಿ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗಿಲ್ಲ. ಈಗ ಸಮಸ್ಯೆಗಳು ಪರಿಹಾರವಾಗಿವೆ. ಎಲ್ಲ ಇಲಾಖೆಗಳಿಂದ ನೇಮಕಾತಿ ನಡೆಸಲು ಹಸಿರು ನಿಶಾನೆ ಲಭಿಸಿದೆ’ ಎಂದು ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಕರ್ನಾಟಕ ವಿವಿಯಲ್ಲೂ ಪಾಠ ಮಾಡೋರಿಲ್ಲ!
ಧಾರವಾಡ:
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ರಾಜ್ಯದಲ್ಲಿ ಆರಂಭಗೊಂಡ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿ ಕರ್ನಾಟಕ ವಿಶ್ವವಿದ್ಯಾಲಯದ್ದಾಗಿದೆ.

ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರ ಸಂಖ್ಯೆಗೆ ಅನುಗುಣವಾಗಿ ಬೋಧಕರು ಇಲ್ಲ ಎಂಬ ಕೂಗು ಮೊದಲಿನಿಂದಲೂ ಇದೆ.

ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ನಾತಕೋತ್ತರ ಕೇಂದ್ರಗಳಿಗೆ 537 ಬೋಧಕ ಹುದ್ದೆಗಳನ್ನು ಉನ್ನತ ಶಿಕ್ಷಣ ಇಲಾಖೆ ಮಂಜೂರು ಮಾಡಿದೆ. ಆದರೆ 324 ಬೋಧಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು 213 ಹುದ್ದೆಗಳು ಖಾಲಿ ಉಳಿದಿವೆ.

ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕರ್ನಾಟಕ ಕಾಲೇಜು ಅತಿಥಿ ಉಪನ್ಯಾಸಕರಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಗೆ ಒಟ್ಟು 191 ಹುದ್ದೆಗಳು ಮಂಜೂರಾಗಿವೆ. ಅವುಗಳಲ್ಲಿ 110 ಕಾಯಂ ಉಪನ್ಯಾಸಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ, ‘ವಿ.ವಿಯಲ್ಲಿ ಕಾಯಂ ಪ್ರಾಧ್ಯಾಪಕರ ಕೊರತೆ ಇದೆ. ಆದರೆ ಇದನ್ನು ಸರಿದೂಗಿಸಲು ಅತಿಥಿ ಉಪನ್ಯಾಸಕರು ಹಾಗೂ ಬೋಧಕ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಿಎಚ್‌.ಡಿ ಆದವರನ್ನೇ ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ  ಅತಿಥಿ ಉಪನ್ಯಾಸಕರೇ ಹೆಚ್ಚು
ಮಂಗಳೂರು:
ವಿಶ್ವವಿದ್ಯಾಲಯದಲ್ಲಿ ಮಂಜೂರಾದ ಹುದ್ದೆ 273 ಇದ್ದರೆ ಅತಿಥಿ ಉಪನ್ಯಾಸಕರ ಸಂಖ್ಯೆಯೇ 249 ಇದೆ. ಇರುವ ಹುದ್ದೆಯ ಸುಮಾರು ಶೇ 90ಕ್ಕೂ ಹೆಚ್ಚು ಪ್ರಾಧ್ಯಾಪಕರ ಅಗತ್ಯ ವಿಶ್ವವಿದ್ಯಾಲಯಕ್ಕೆ ಇದೆ.

ಮಂಜೂರಾದ ಹುದ್ದೆಗಳ ಪೈಕಿಯೂ ಭರ್ತಿ ಆಗಿರುವುದು 219 ಮಾತ್ರ. ಅಂದರೆ ಸರ್ಕಾರ ನೇಮಿಸಿದ ಉಪನ್ಯಾಸಕರಿಗಿಂತ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರೇ ವಿಶ್ವವಿದ್ಯಾಲಯದ ವಿವಿಧ ಕೋರ್ಸುಗಳಿಗೆ ಪಾಠ ಮಾಡುತ್ತಿದ್ದಾರೆ.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕೊಣಾಜೆಯಲ್ಲಿರುವ ವಿವಿ ಕ್ಯಾಂಪಸ್‌ನ ಸ್ನಾತಕೋತ್ತರ ಕೋರ್ಸುಗಳು, ಮಂಗಳೂರು ನಗರದಲ್ಲಿರುವ ವಿಶ್ವವಿದ್ಯಾಲಯ ಕಾಲೇಜು, ಮಡಿಕೇರಿಯಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರಿಯಪ್ಪ ಕಾಲೇಜು ಹಾಗೂ ಚಿಕ್ಕಅಳುವಾರದ ಕಾಲೇಜು ಸೇರಿದೆ.

ವಿವಿ ಕ್ಯಾಂಪಸ್‌ನಲ್ಲಿ 171 ಹುದ್ದೆ ಮಂಜೂರಾಗಿದ್ದರೆ ಭರ್ತಿಯಾಗಿರುವುದು 131 ಹುದ್ದೆ ಮಾತ್ರ. ನಗರದಲ್ಲಿರುವ ವಿವಿ ಕಾಲೇಜಿನಲ್ಲಿಯೂ ಮಂಜೂರಾದ 57 ಹುದ್ದೆಗಳಲ್ಲಿ 10 ಹುದ್ದೆಗಳು ಖಾಲಿ ಉಳಿದಿವೆ.

ಮಡಿಕೇರಿ ಎಫ್‌ಎಂಕೆಎಂಸಿಯಲ್ಲಿಯೂ ನಾಲ್ಕು ಹುದ್ದೆಗಳು ಖಾಲಿ ಇವೆ. ಚಿಕ್ಕಅಳುವಾರದಲ್ಲಿ ಹೊಸದಾಗಿ ಎಂ.ಕಾಂ, ಅರ್ಥಶಾಸ್ತ್ರ, ಸಮಾಜ ಕಾರ್ಯ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ತರಗತಿಗಳು ಇತ್ತೀಚೆಗೆ ಆರಂಭವಾಗಿದ್ದು ಅತಿಥಿ ಉಪನ್ಯಾಸಕರ ಬಲದಲ್ಲಿಯೇ ಕಾಲೇಜು ನಡೆಯುತ್ತಿದೆ.

ಖಾಲಿ ಹುದ್ದೆಗಳದ್ದೇ ಸಮಸ್ಯೆ! ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 248 ಬೋಧಕ ಮತ್ತು 706 ಬೋಧಕೇತರ ಹುದ್ದೆಗಳಿದ್ದು, ಈ ಪೈಕಿ 150 ಬೋಧಕ ಹಾಗೂ 374 ಬೋಧಕತೇರ ಹುದ್ದೆಗಳು ಖಾಲಿ ಇವೆ. 36 ಪ್ರಾಧ್ಯಾಪಕ, 67 ಸಹಾಯಕ ಪ್ರಾಧ್ಯಾಪಕ ಹಾಗೂ 145 ಸಹ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ.

‘ಇತಿಹಾಸ ವಿಭಾಗದ ಒಬ್ಬರು ಕಾಯಂ ಪ್ರಾಧ್ಯಾಪಕರು ಈಚೆಗೆ ನಿವೃತ್ತಿಯಾದ್ದರಿಂದ ಆ ವಿಭಾಗದಲ್ಲಿ ಸದ್ಯ ಕಾಯಂ ಬೋಧಕ ಸಿಬ್ಬಂದಿ ಯಾರೂ ಇಲ್ಲ. ಅದೇ ರೀತಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲೂ ಕಾಯಂ ಬೋಧಕ ಸಿಬ್ಬಂದಿ ಇಲ್ಲ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ಹೇಳುತ್ತಾರೆ.

ಪ್ರತಿ ತಿಂಗಳು 4–5 ಜನ ಬೋಧಕತೇರ ಸಿಬ್ಬಂದಿ ನಿವೃತ್ತರಾಗುತ್ತಾರೆ. ಹೀಗಾಗಿ, ಬೋಧಕ ಸಿಬ್ಬಂದಿಗಿಂತಲೂ ಬೋಧಕೇತರ ಸಿಬ್ಬಂದಿ ಹುದ್ದೆಗಳು ಹೆಚ್ಚು ಖಾಲಿ ಇವೆ. 210ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ.

ರಾಜಧಾನಿಯಲ್ಲಿದ್ದರೂ ನೀಗದ ಕೊರತೆ
ಬೆಂಗಳೂರು:
ರಾಜ್ಯದ  ಅರ್ಧ ಶತಮಾನ ಕಂಡಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೇ 40ರಷ್ಟು ಸಿಬ್ಬಂದಿ ಕೊರತೆ ಇದೆ.

ವಿವಿಗೆ ಪ್ರಾಧ್ಯಾಪಕರ ಹಾಗೂ ಉಪನ್ಯಾಸಕರ ಹುದ್ದೆಗಳು ಸೇರಿ 590 ಬೋಧಕ ಹುದ್ದೆಗಳು  ಮಂಜೂರಾಗಿವೆ.  ಈ ಪೈಕಿ ಭರ್ತಿಯಾಗಿರುವುದು 365 ಹುದ್ದೆಗಳು ಮಾತ್ರ. ವಿಶ್ವವಿದ್ಯಾಲಯಕ್ಕೆ 1,171 ಬೋಧಕೇತರ ಹುದ್ದೆ ಗಳು ಮಂಜೂರಾಗಿದ್ದು, 731  ಮಾತ್ರ ಭರ್ತಿಯಾಗಿವೆ. ಕೆಲವು ವರ್ಷಗಳಿಂದ ಈ ಹುದ್ದೆಗಳು ಭರ್ತಿಯಾಗದೆ ಉಳಿದಿವೆ.

‘ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ 2012ರಲ್ಲಿ ಕುಲಪತಿಯಾಗಿದ್ದ ಎನ್‌.ಪ್ರಭುದೇವ್‌ ಅವರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು. ಈಗಿನ ಕುಲಪತಿ ಪ್ರೊ. ಬಿ.ತಿಮ್ಮೇಗೌಡ ಅವರೂ ಸಹ ಇಲಾಖೆಗೆ ಮೂರು ಬಾರಿ ಪತ್ರ ಬರೆದಿದ್ದರು. ಆದರೆ, ಇಲಾಖೆ ಈವರೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ’ ಎಂದು ವಿವಿಯ ಅಧಿಕಾರಿಯೊಬ್ಬರು ತಿಳಿಸಿದರು.

ನಿವೃತ್ತರ ನೇಮಕ: ಸಿಬ್ಬಂದಿ ಕೊರತೆ ಕಾರಣಕ್ಕೆ ವಿವಿ ನಿವೃತ್ತ ಸಿಬ್ಬಂದಿಯನ್ನೇ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ವಿವಿಯಲ್ಲಿ ಇಂದಿಗೂ ಸಾಕಷ್ಟು ಸಿಬ್ಬಂದಿ ನಿವೃತ್ತಿ ನಂತರ ಮರುನೇಮಕಕಗೊಂಡಿದ್ದಾರೆ.

ಇದು ವಿವಿಗೆ ಒಂದು ರೀತಿಯಲ್ಲಿ ಆರ್ಥಿಕ ಹೊರೆ ಆಗಿದೆ. ಅವರಿಗೆ ಕನಿಷ್ಠ ₹10 ಸಾವಿರದಿಂದ ₹ 75 ಸಾವಿರದ ವರೆಗೆ ವೇತನ ಪಾವತಿಸಲಾಗುತ್ತಿದೆ. ನಿವೃತ್ತ ಸಿಬ್ಬಂದಿಯ ನೇಮಕ ಮಾಡಿಕೊಳ್ಳಬಾರದು ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದ್ದರೂ ವಿವಿ ಅದನ್ನು ಪಾಲಿಸುತ್ತಿಲ್ಲ ಎಂಬ ಆರೋಪವೂ ಇದೆ.

ಕನ್ನಡ ವಿವಿ ಎಂಬ ದೊಡ್ಡ ಮನೆ ಖಾಲಿ ಇದೆ!
ಬಳ್ಳಾರಿ:
ಕನ್ನಡ ಸಂಶೋಧನೆಯ ಆಶಯದಿಂದ ಸ್ಥಾಪನೆಯಾಗಿ ಎರಡೂವರೆ ದಶಕಗಳನ್ನು ಕಂಡಿರುವ ಕನ್ನಡ ವಿಶ್ವವಿದ್ಯಾಲಯ ಎಂಬ ದೊಡ್ಡ ಮನೆ ಖಾಲಿ ಇದೆ ಎಂದು  ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಬೇಸರ ವ್ಯಕ್ತಪಡಿಸುತ್ತಾರೆ.

ಭಾಷೆ, ಸಮಾಜ ವಿಜ್ಞಾನ ಮತ್ತು ಲಲಿತ ಕಲಾ ಅಧ್ಯಯನ ವಿಭಾಗಗಳಲ್ಲಿ ಅಗತ್ಯವಿರುವಷ್ಟು ಬೋಧಕ ಸಿಬ್ಬಂದಿ ಆರಂಭದಿಂದಲೂ ಇಲ್ಲ. ವಿಶ್ವವಿದ್ಯಾಲಯದ ಸ್ಥಾಪನೆ ವೇಳೆ 73 ಬೋಧಕರನ್ನು ನೇಮಿಸಲಾಗಿತ್ತು. ಅವರ ಪೈಕಿ ಹಲವರು ನಿವೃತ್ತರಾಗಿದ್ದಾರೆ. ಈಗ ಉಳಿದವರು 50 ಮಂದಿ ಮಾತ್ರ, ಹೀಗಾಗಿ ವಿಶ್ವವಿದ್ಯಾಲಯ ಬೋಧಕ ಸಿಬ್ಬಂದಿ ಇಲ್ಲದೆ ಖಾಲಿಯಾಗಿದೆ ಎನ್ನುತ್ತಾರೆ ಅವರು.

ಮೂರು ನಿಕಾಯಗಳ ಒಟ್ಟು 21 ವಿಭಾಗಗಳಲ್ಲೂ ಪರಿಪೂರ್ಣ ಸಂಖ್ಯೆಯ ಪೂರ್ಣಾವಧಿ ಅಧ್ಯಾಪಕರಿಲ್ಲ. ಯುಜಿಸಿ ನಿಯಮದ ಪ್ರಕಾರ ಪ್ರತಿ ವಿಭಾಗದಲ್ಲಿ ಏಳು ಬೋಧಕ ಸಿಬ್ಬಂದಿ ಇರಬೇಕು.

ಆದರೆ ಈಗ ಯಾವ ವಿಭಾಗದಲ್ಲೂ ಈ ಸನ್ನಿವೇಶ ಇಲ್ಲ. ಎಂ.ಎ, ಪಿಎಚ್‌ಡಿ ಸಂಯೋಜಿತ ಕೋರ್ಸ್‌ಗಳು ಕೆಲವು ವಿಷಯಗಳಲ್ಲಿ ಮಾತ್ರವೇ ಜಾರಿಯಲ್ಲಿವೆ. ಮಾಡಬೇಕಾದ ಕೆಲಸ ಬಹಳಷ್ಟಿದೆ. ಸಿಬ್ಬಂದಿ ಕೊರತೆ ಅದಕ್ಕೆ ದೊಡ್ಡ ತೊಡಕಾಗಿದೆ ಎಂಬುದು ಅವರ ವಿವರಣೆ.

ವಿಸ್ತರಣೆ ಕೇಂದ್ರದಲ್ಲೂ ಇಲ್ಲ: ವಿಶ್ವವಿದ್ಯಾಲಯದ ಪ್ರಸಾರಾಂಗ, ದೂರ ಶಿಕ್ಷಣ ವಿಭಾಗದಲ್ಲೂ ಪೂರ್ಣಾವಧಿ ಸಿಬ್ಬಂದಿ ಇಲ್ಲ.  11 ಪೀಠಗಳಲ್ಲಿ ಪೂರ್ಣಾವಧಿ ಬೋಧಕರಿಲ್ಲ. ಹೀಗಾಗಿ ಒಬ್ಬೊಬ್ಬ ಅಧ್ಯಾಪಕರು 7–8 ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

ವಿಶ್ವವಿದ್ಯಾಲಯವು ಕೂಡಲಸಂಗಮ, ಕುಪ್ಪಳ್ಳಿ ಮತ್ತು ಕುಡುಗನಕಟ್ಟಿಯಲ್ಲಿ ಒಂದೂವರೆ ದಶಕದ ಅವಧಿಯಲ್ಲಿ ವಿಸ್ತರಣ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿಯೂ ಪೂರ್ಣಾವಧಿ ಬೋಧಕರಿಲ್ಲ. ನಿಯೋಜನೆ ಮೇಲೆ ವಿಶ್ವವಿದ್ಯಾಲಯದ ಅಧ್ಯಾಪಕರೇ ಬೋಧಿಸುತ್ತಾರೆ.

(ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ್, ಇ.ಎಸ್‌. ಸುಧೀಂದ್ರ ಪ್ರಸಾದ್‌, ಕೋಡಿಬೆಟ್ಟು ರಾಜಲಕ್ಷ್ಮಿ, ಮಂಜುನಾಥ ಹೆಬ್ಬಾರ್‌, ಕೆ.ನರಸಿಂಹಮೂರ್ತಿ)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.