ADVERTISEMENT

ವೀರಶೈವ ಮಹಾಸಭಾ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2017, 19:16 IST
Last Updated 1 ಆಗಸ್ಟ್ 2017, 19:16 IST
ವೀರಶೈವ– ಲಿಂಗಾಯತ ಧರ್ಮವನ್ನು ಒಡೆಯಬಾರದು ಎಂದು ಒತ್ತಾಯಿಸಿ ವೀರಶೈವ– ಲಿಂಗಾಯತ ಸಮುದಾಯದವರು ಹುಬ್ಬಳ್ಳಿಯಲ್ಲಿ ಮಂಗಳವಾರ  ಪ್ರತಿಭಟನೆ ನಡೆಸಿದರು
ವೀರಶೈವ– ಲಿಂಗಾಯತ ಧರ್ಮವನ್ನು ಒಡೆಯಬಾರದು ಎಂದು ಒತ್ತಾಯಿಸಿ ವೀರಶೈವ– ಲಿಂಗಾಯತ ಸಮುದಾಯದವರು ಹುಬ್ಬಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ವೀರಶೈವ–ಲಿಂಗಾಯತರಲ್ಲಿ ಸ್ವತಂತ್ರ ಧರ್ಮಕ್ಕೆ ಸಂಬಂಧಿಸಿದಂತೆ ಜಟಾಪಟಿ ತೀವ್ರಗೊಂಡಿದ್ದು, ಆರೋಪ–ಪ್ರತ್ಯಾರೋಪ ಹೆಚ್ಚಾಗಿದೆ. ಪರಸ್ಪರ ವಿರುದ್ಧ ಪ್ರತಿಭಟನೆಗಳು, ವಾಕ್ಸಮರ ನಡೆಯುತ್ತಿವೆ. ಈ ನಡುವೆಯೇ ಅಖಿಲ ಭಾರತ ವೀರಶೈವ ಮಹಾಸಭಾ ಬುಧ
ವಾರ (ಆ. 2) ಮಹತ್ವದ ಸಭೆ ಸೇರಲಿದೆ.

ಸ್ವತಂತ್ರ ವೀರಶೈವ–ಲಿಂಗಾಯತ ಧರ್ಮದ ಬೇಡಿಕೆ ಸಂಬಂಧ  ಉಂಟಾಗಿರುವ ಗೊಂದಲ ನಿವಾರಿಸಿ, ಹೋರಾಟದ ಮುಂದಿನ ಹೆಜ್ಜೆ ಕುರಿತು ನಿರ್ಧರಿಸಲು ಈ ಸಭೆ ಸೇರಲಿದ್ದು, 65 ಕಾರ್ಯಕಾರಿಣಿ ಸದಸ್ಯರು, ರಾಜ್ಯದ 30 ಜಿಲ್ಲೆಗಳ ಅಧ್ಯಕ್ಷರು, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣದ ಅಧ್ಯಕ್ಷರಿಗೆ ಈ ಸಭೆಗೆ ಆಮಂತ್ರಣ ನೀಡಲಾಗಿದೆ.

ಸ್ವತಂತ್ರ ಧರ್ಮದ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ದಿನದಿಂದ ಇಲ್ಲಿಯವರೆಗೆ ಆಗಿರುವ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ADVERTISEMENT

ವಿವಿಧ  ಮಠಾಧೀಶರು ನೀಡಿರುವ ಹೇಳಿಕೆಗಳಿಂದ ಉಂಟಾಗಿರುವ ಗೊಂದಲ, ಹೇಳಿಕೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗಳು, ವೀರಶೈವರನ್ನು ಹೊರಗಿಟ್ಟು, ಲಿಂಗಾಯತರಿಗೆ ಮಾತ್ರ ಸೀಮಿತಗೊಳಿಸಿ ಸ್ವತಂತ್ರ ಧರ್ಮ ಘೋಷಿಸಬೇಕು ಎಂಬ  ಕೂಗಿನ ಬಗ್ಗೆಯೂ ಸಭೆ ಚರ್ಚಿಸಲಿದೆ ಎಂದು ಮಹಾಸಭಾದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮಠಾಧೀಶರು–ಮುಖಂಡರ ಸಭೆ: ‘ವೀರಶೈವರು ಹಾಗೂ ಲಿಂಗಾಯತರ ನಡುವೆ ಒಮ್ಮತ ಮೂಡಿಸಲು ಮಠಾಧೀಶರು ಹಾಗೂ ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಸಮುದಾಯದ ಮುಖಂಡರ ಸಭೆ ಕರೆಯಲು ನಿರ್ಧರಿಸಲಾಗಿದೆ.

ನಾಳಿನ ಕಾರ್ಯಕಾರಿಣಿಯಲ್ಲಿ ದಿನಾಂಕ ನಿಗದಿ ಮಾಡಲಾಗುವುದು’ ಎಂದು ಮೂಲಗಳು ಹೇಳಿವೆ.

ವೀರಶೈವ–ಲಿಂಗಾಯತ ಪರಂಪರೆಗೆ ಸೇರಿರುವ  ಮಠ ಹಾಗೂ ಶಾಖಾ ಮಠಗಳು 2,000 ಕ್ಕೂ ಹೆಚ್ಚಿದ್ದು, ಪಂಚ ಪೀಠಗಳ ಮುಖ್ಯಸ್ಥರು ಹಾಗೂ 20 ಪ್ರಮುಖ ಮಠಾಧೀಶರನ್ನು ಮಾತ್ರ ಸಭೆಗೆ ಕರೆಯುವ ಆಲೋಚನೆ ಇದೆ.

ಹುಬ್ಬಳ್ಳಿಯಲ್ಲಿ ಪ್ರತಿಭಟನಾ ಮೆರವಣಿಗೆ: ‘ಮಾತೆ ಮಹಾದೇವಿ ಸೇರಿದಂತೆ ಹಲವು ಧಾರ್ಮಿಕ ನಾಯಕರು ಹಾಗೂ ರಾಜಕೀಯ ಮುಖಂಡರು ಸೇರಿಕೊಂಡು ಅಖಂಡವಾಗಿರುವ ವೀರಶೈವ– ಲಿಂಗಾಯತ ಧರ್ಮವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿ ಪಂಚಪೀಠಾಚಾರ್ಯರ ಅನುಯಾಯಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಂಕಾಪುರ ಚೌಕದ ದೇಸಾಯಿ ಓಣಿಯಲ್ಲಿರುವ ಶ್ರೀಶೈಲ ಪೀಠದ ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ಧಾರವಾಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ  ನೂರಾರು ಮಂದಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ, ಲಕ್ಷ್ಮೇಶ್ವರ ಮುಕ್ತಿಮಠದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ‘ಮಾತೆ ಮಹಾದೇವಿ ಅವರು ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಒತ್ತಾಯಿಸುವ ಮೂಲಕ ಶತಮಾನಗಳಿಂದ ಬೆಳೆದು ಬಂದಿರುವ ವೀರಶೈವ–ಲಿಂಗಾಯತ ಧರ್ಮಕ್ಕೆ ಅಪಚಾರ ಎಸಗಿದ್ದಾರೆ. ಅಖಂಡವಾಗಿದ್ದ ಧರ್ಮ ಒಡೆಯುವ ಸಂಚು ನಡೆಸಿದ್ದಾರೆ’ ಎಂದು ಆರೋಪಿಸಿದರು.

ಪಂಚಪೀಠಾಚಾರ್ಯರು ಹೇಳಿದವರಿಗೆ ಮತ: ಪ್ರತ್ಯೇಕ ಲಿಂಗಾಯತ ಧರ್ಮವನ್ನಾಗಿ    ಘೋಷಿಸಬೇಕು ಎಂದು   ಒತ್ತಾಯಿಸುವ ಮೂಲಕ ಹಲವು ಸಚಿವರು, ರಾಜಕೀಯ ಮುಖಂಡರು ಧರ್ಮಕ್ಕೆ ದ್ರೋಹ ಬಗೆದಿದ್ದಾರೆ. ಇವರನ್ನು ಗೆಲ್ಲಿಸಿದ್ದೇ ತಪ್ಪಾಯಿತು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿದ್ದು, ಪಂಚಪೀಠಗಳ   ಸ್ವಾಮೀಜಿಗಳು ಯಾರಿಗೆ ಸೂಚಿಸುತ್ತಾರೋ ಅವರಿಗೇ ಮತ ಹಾಕುವ ನಿರ್ಣಯ ಕೈಗೊಳ್ಳೋಣ ಎಂದು ಸಮಾಜದ ಮುಖಂಡ ಪ್ರಕಾಶ ಬೆಂಡಿಗೇರಿ ಹೇಳುತ್ತಿದ್ದಂತೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಜನರು ಚಪ್ಪಾಳೆ ಮೂಲಕ ಒಪ್ಪಿಗೆ ನೀಡಿದರು.

ಸಿಎಂ ಹೆಸರು ತಳಕು ಸಲ್ಲ– ನಂಜಯ್ಯನಮಠ: ‘ಸ್ವತಂತ್ರ ಧರ್ಮ ಮನ್ನಣೆ ನೀಡುವ ವಿಚಾರ ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಬೆರಳನ್ನು ನಮ್ಮ ಕಣ್ಣಿಗೇ ಚುಚ್ಚಿದ್ದಾರೆ ಎಂದು ರಂಭಾಪುರಿ ಶ್ರೀಗಳು ಹೇಳಿಕೆ ನೀಡಿರುವುದು ದುರದೃಷ್ಟಕರ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಜಿ.ನಂಜಯ್ಯನಮಠ ಮಂಗಳವಾರ ಬಾಗಲಕೋಟೆಯಲ್ಲಿ ಹೇಳಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆ ಸಲ್ಲ. ಮಠಾಧೀಶರು ಯಾವುದೇ ಪಕ್ಷ ಇಲ್ಲವೇ ವ್ಯಕ್ತಿಯ ಬೆನ್ನೆಲುಬಾಗಿ ಮಾತನಾಡಬಾರದು ಎಂಬುದನ್ನು ಅವರು ಅರಿತುಕೊಳ್ಳಲಿ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

‘ನಿರ್ಣಯವೇ ಅಂತಿಮ’
‘ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮದ ವಿಷಯದಲ್ಲಿ ಎದ್ದಿರುವ ಎಲ್ಲ ವಿವಾದಗಳಿಗೆ ಮಹಾಸಭಾ ಕೈಗೊಳ್ಳಲಿರುವ ನಿರ್ಣಯ ತೆರೆ ಎಳೆಯಲಿದೆ’ ಎಂದು  ವೀರಶೈವ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

‘ಮಹಾಸಭಾ ಇಡೀ ಸಮುದಾಯದ ಪ್ರಾತಿನಿಧಿಕ ಸಂಸ್ಥೆ. ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಾಲ್ಕೈದು ದಶಕಗಳಿಂದ ಎಲ್ಲರೂ ಒಗ್ಗೂಡಿಯೇ ಬೇಡಿಕೆ ಮಂಡಿಸುತ್ತಿದ್ದೇವೆ.  ಈಗ ಒಬ್ಬರ ವಿರುದ್ಧ ಮತ್ತೊಬ್ಬರು ಪ್ರತಿಭಟನೆ ನಡೆಸುತ್ತಾ, ಟೀಕಾ ಪ್ರಹಾರ ಮಾಡುತ್ತಿರುವುದು ಸರಿಯಲ್ಲ.  ಈ ಸಂಬಂಧ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

* ಮೊದಲು ಕಚ್ಚಾಟ ನಿಲ್ಲಿಸಲಿ. ನಂತರ ಎಲ್ಲ ಮಠಾಧೀಶರನ್ನು ಸೇರಿಸಿ ಒಮ್ಮತ ಮೂಡಿಸಲಾಗುವುದು. ಸಿದ್ಧಗಂಗಾ ಶ್ರೀಗಳು ನೇತೃತ್ವ ವಹಿಸಿದರೆ ಒಪ್ಪಿಕೊಳ್ಳುತ್ತೇವೆ.

– ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯ

* ಈ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ. ಇದು ಬಹಳ ಸೂಕ್ಷ್ಮ ವಿಷಯ. ಅಗತ್ಯಬಿದ್ದರೆ ಕೆಪಿಸಿಸಿ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಲಾಗುವುದು

– ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

* ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂಬ ಬೇಡಿಕೆಗೆ ಸುದೀರ್ಘ ಇತಿಹಾಸ ಇದೆ.  ಮಹಾಸಭಾ ಇದೇ ಬೇಡಿಕೆಗೆ ಹೋರಾಟ  ಮುಂದುವರಿಸುತ್ತಿದೆ

– ಈಶ್ವರ ಖಂಡ್ರೆ, ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿ

* ಮುಖ್ಯಮಂತ್ರಿ ಸಿದ್ದರಾಮಯ್ಯ  ವೀರಶೈವ ಮತ್ತು ಲಿಂಗಾಯತರ ಮಧ್ಯೆ ಪ್ರತ್ಯೇಕ ಧರ್ಮದ ವಿಷಯವನ್ನು ಪ್ರಸ್ತಾಪಿಸಿ ಕಿಡಿ ಹಚ್ಚಿದ್ದಾರೆ

– ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.