ADVERTISEMENT

‘ವೆಂಕಯ್ಯ ನಾಯ್ಡು ಹೃದಯಹೀನರು’

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
‘ವೆಂಕಯ್ಯ ನಾಯ್ಡು ಹೃದಯಹೀನರು’
‘ವೆಂಕಯ್ಯ ನಾಯ್ಡು ಹೃದಯಹೀನರು’   

ಬೆಂಗಳೂರು: ‘ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುವುದು ರೈತರ ಫ್ಯಾಷನ್‌ ಆಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿಕೆಯನ್ನು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ  ಕೋಡಿಹಳ್ಳಿ ಚಂದ್ರಶೇಖರ್‌ ಖಂಡಿಸಿದರು.

‘ವೆಂಕಯ್ಯನಾಯ್ಡು ಅವರಿಗೆ ರೈತರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಅವರು ಹೃದಯ ಹೀನರು. ರೈತರು ದೇಶಕ್ಕೆ ಅನ್ನ ನೀಡುವ ಸಲುವಾಗಿ ಪರಿಶ್ರಮ ಹಾಕುತ್ತಾರೆ. ಸಾಲ ಮಾಡಿ ಬೆಳೆ ಬೆಳೆಯುತ್ತಾರೆ. ಆದರೆ, ನಿರೀಕ್ಷಿತ ಬೆಲೆ ಇಲ್ಲದೆ ನಷ್ಟ ಅನುಭವಿಸುತ್ತಾರೆ. ಹೀಗಾಗಿ ವೆಂಕಯ್ಯ ನಾಯ್ಡು ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು’ ಎಂದು ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ  ತಡವಾಗಿಯಾದರೂ ₹50,000 ವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ರೈತರು ಒಟ್ಟು ₹10,736 ಕೋಟಿ ಅಲ್ಪಾವಧಿ ಸಾಲ ಪಡೆದಿದ್ದಾರೆ.  ಈ ಪೈಕಿ ₹8,165 ಕೋಟಿಯನ್ನು ಮಾತ್ರ ಮನ್ನಾ ಮಾಡಿದ್ದಾರೆ. ಉಳಿದ ₹2,571 ಕೋಟಿ ಸಾಲವನ್ನೂ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಸಾಲ ಪಡೆದಿದ್ದಾರೆ. ಇದನ್ನು ಮನ್ನಾ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಹೋರಾಟದ ಫಲವಾಗಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇದು ಖಂಡನೀಯ. ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ, ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲವನ್ನು ಕೇಂದ್ರ ಸರ್ಕಾರದಿಂದ ಮನ್ನಾ ಮಾಡಿಸಲಿ. ಆಗ ಅವರನ್ನು ಹಾಡಿ ಕೊಂಡಾಡುತ್ತೇವೆ’ ಎಂದರು.

‘ಕೇಂದ್ರ ಸರ್ಕಾರವು ಕಾರ್ಪೊರೇಟ್‌ ಕಂಪೆನಿಗಳಿಗೆ ತೋರಿಸಿದ ಔದಾರ್ಯ ವನ್ನು ರೈತರ ಮೇಲೆ ತೋರಿಸುತ್ತಿಲ್ಲ. ತೆರಿಗೆ ವಿನಾಯ್ತಿ, ಸಾಲ ಮನ್ನಾ, ಸಬ್ಸಿಡಿ ರೂಪದಲ್ಲಿ ₹6 ಲಕ್ಷ ಕೋಟಿಯನ್ನು ಕಾರ್ಪೊರೇಟ್‌ ಕಂಪೆನಿಗಳಿಗೆ ನೀಡ ಲಾಗಿದೆ. ಇದು ಆರ್ಥಿಕ ಅಶಿಸ್ತು ಅಲ್ಲವೇ’ ಎಂದು ಪ್ರಶ್ನಿಸಿದರು.

‘ಜುಲೈ 6ರಿಂದ ಜಾಥಾ’: ರೈತರ ಮೇಲೆ ನಡೆದ ಗೋಲಿಬಾರ್‌ ಖಂಡಿಸಿ ಹಾಗೂ ಸಾಲ ಮನ್ನಾಕ್ಕೆ ಒತ್ತಾಯಿಸಿ ಜುಲೈ 6ರಂದು ವಿವಿಧ ರೈತ ಸಂಘಟನೆಗಳ ಸದಸ್ಯರು ಮಧ್ಯಪ್ರದೇಶದ ಮಂದ್‌ಸೌರ್‌ನಿಂದ ಜಾಥಾ ಹಮ್ಮಿ ಕೊಂಡಿದ್ದಾರೆ. ಅಕ್ಟೋಬರ್‌ 2ರಂದು  ಬಿಹಾರದ ಚಂಪಾರಣ್ಯದಲ್ಲಿ ಜಾಥಾ ಕೊನೆಗೊಳ್ಳಲಿದೆ. ಅಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ’ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ವೆಂಕಯ್ಯ ನಾಯ್ಡು ಹೇಳಿಕೆ ಖಂಡಿಸಿ ಪ್ರತಿಭಟನೆ: ‘ಕೇಂದ್ರ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡಬೇಕು ಹಾಗೂ ವೆಂಕಯ್ಯ ನಾಯ್ಡು ಅವರು ತಮ್ಮ ಹೇಳಿಕೆ ಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ನಗರದ ಮೌರ್ಯ ವೃತ್ತದ ಬಳಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.