ADVERTISEMENT

ಶುಲ್ಕಕ್ಕಿಂತ ಪ್ರಯಾಣ ವೆಚ್ಚವೇ ಹೆಚ್ಚು!

ತಾಂತ್ರಿಕ ಶಿಕ್ಷಣ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಅರ್ಹತಾ ಪ್ರಮಾಣಪತ್ರ ಕಡ್ಡಾಯ

ಮನೋಜ ಕುಮಾರ್ ಗುದ್ದಿ
Published 29 ಮೇ 2016, 19:39 IST
Last Updated 29 ಮೇ 2016, 19:39 IST

ಹುಬ್ಬಳ್ಳಿ: ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಕಡ್ಡಾಯವಾಗಿ ಅರ್ಹತಾ ಪ್ರಮಾಣಪತ್ರ ತರುವಂತೆ ಷರತ್ತು ವಿಧಿಸಿರುವುದು ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ತಾಂತ್ರಿಕ ಶಿಕ್ಷಣ ಪಡೆಯಲು ಅರ್ಜಿ ಸಲ್ಲಿಸಲು ಇಚ್ಛಿಸುವವರು ಜಿಲ್ಲಾ ಕೇಂದ್ರದಲ್ಲಿರುವ ಡಿಪ್ಲೊಮಾ ಕಾಲೇಜಿನಿಂದ ಚಲನ್‌ ಪಡೆದು ಬ್ಯಾಂಕಿಗೆ ₹ 1 ಸಾವಿರ ಕಟ್ಟಬೇಕು. ಈ ರಸೀದಿಯ ಜೊತೆಗೆ  ಶೈಕ್ಷಣಿಕ ದಾಖಲೆಗಳಿಗೆ ಪ್ರಾಚಾರ್ಯರಿಂದ ದೃಢೀಕರಣ ಪತ್ರದೊಂದಿಗೆ ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಗೆ ತೆರಳಿ ಅರ್ಹತಾ ಪ್ರಮಾಣಪತ್ರ ಪಡೆದುಕೊಳ್ಳಬೇಕು.

ಡಿಪ್ಲೊಮಾಗೆ ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನ. ಬೀದರ್‌, ಕಲಬುರ್ಗಿ, ಬೆಳಗಾವಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಹೋಗಲು ಕನಿಷ್ಠ 12 ರಿಂದ 15 ತಾಸು ಬೇಕು. ಐದಾರು ಸಾವಿರ ರೂಪಾಯಿ ದುಡ್ಡು ಕೂಡ ಖರ್ಚಾಗುತ್ತದೆ.

ತಾಂತ್ರಿಕ ಶಿಕ್ಷಣ ಇಲಾಖೆಯು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಈ ರೀತಿ ನೀತಿ ತೊಂದರೆ ಕೊಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಹುಬ್ಬಳ್ಳಿಯ ಸಿಬಿಎಸ್‌ಇ ವಿದ್ಯಾರ್ಥಿ ಎಂ. ಓಂಕಾರ, ‘ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ  ಪ್ರಧಾನ ಕಚೇರಿಗೆ ದೂರವಾಣಿ (080–22356949) ಮಾಡಿದಾಗ ಈ ಸಂಬಂಧ ಸರ್ಕಾರದ ಆದೇಶ ಇದೆ.

ಬೆಂಗಳೂರಿಗೇ ಬಂದು ಅರ್ಹತಾ ಪ್ರಮಾಣಪತ್ರ ಪಡೆಯಬೇಕು ಎಂಬ ಮಾಹಿತಿ ಸಿಕ್ಕಿತು. ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದಲ್ಲೇ ಪ್ರಮಾಣಪತ್ರ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಅಲವತ್ತುಕೊಂಡರು.

‘ನಿಮಗೆ, ರಾಜ್ಯದ ಪಠ್ಯಕ್ರಮ ಬಿಟ್ಟು ಕೇಂದ್ರ ಪಠ್ಯಕ್ರಮದಲ್ಲಿ ಓದಲು ಹೇಳಿದ್ದು ಯಾರು ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ.  ಗಡಿ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಸಿಬಿಎಸ್‌ಇ ವಿದ್ಯಾರ್ಥಿಯ ಪೋಷಕರೊಬ್ಬರು ದೂರಿದರು.

‘ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಿದ್ಯಾರ್ಥಿಗಳ ಅರ್ಜಿಗಳನ್ನು ನಮ್ಮ  ಕಚೇರಿಯ ಸಿಬ್ಬಂದಿಯೊಬ್ಬರ ಮೂಲಕ ಬೆಂಗಳೂರಿಗೆ ಕಳಿಸಿ, ಪ್ರಮಾಣಪತ್ರ ತರಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಹುಬ್ಬಳ್ಳಿಯ ಡಿಪ್ಲೊಮಾ ಕಾಲೇಜೊಂದರ ಉಪನ್ಯಾಸಕರು ತಿಳಿಸಿದರು.

‘ದುರುಪಯೋಗ ತಪ್ಪಿಸಲು’
‘ಸಿಬಿಎಸ್‌ಇಯಿಂದ ತಾಂತ್ರಿಕ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ವಿರಳ. ಮೊದಲಿನಿಂದಲೂ ಕೇಂದ್ರ ಕಚೇರಿಯಲ್ಲಿಯೇ ಈ ಪ್ರಮಾಣಪತ್ರ ಕೊಡುವ ಪದ್ಧತಿ ಇದೆ.

ಇದನ್ನು ವಿಕೇಂದ್ರೀಕರಿಸಿ, ಜಿಲ್ಲಾ ಕೇಂದ್ರದಲ್ಲಿ ರುವ ಅಧಿಕಾರಿಗಳ ಮೂಲಕ ಕೊಡುವ ವ್ಯವಸ್ಥೆ ಮಾಡಬಹುದು. ಆದರೆ, ಈ ಹಂತದಲ್ಲಿ ದುರುಪ ಯೋಗವಾಗುವ ಸಾಧ್ಯತೆ ಇರುವು ದರಿಂದ ಆ ಅಧಿಕಾರವನ್ನು ಕೊಟ್ಟಿಲ್ಲ’ ಎಂದು ನಿರ್ದೇಶನಾಲಯದ ಹುಬ್ಬಳ್ಳಿ ವಲಯದ ನೋಡಲ್‌ ಅಧಿಕಾರಿ ಶಿವಪುತ್ರಪ್ಪ ಭೈರನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.