ADVERTISEMENT

ಸಂಶೋಧಕ ವಿದ್ವಾಂಸರ ಕೊರತೆಗೆ ವಿಷಾದ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2013, 19:59 IST
Last Updated 27 ಫೆಬ್ರುವರಿ 2013, 19:59 IST

ಬೆಂಗಳೂರು: `ಹಳೆಗನ್ನಡವನ್ನು ಅಭ್ಯಾಸ ಮಾಡಿದ ವಿದ್ವಾಂಸರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಆಗೆಲ್ಲ ದೊಡ್ಡ ದೊಡ್ಡ ಸಂಶೋಧನೆ ಕೈಗೊಳ್ಳಲು ಆರ್ಥಿಕ ತೊಂದರೆಯಿತ್ತು. ಈಗ ಸಾಕಷ್ಟು ಹಣವಿದ್ದರೂ ಸಂಶೋಧನೆ ನಡೆಸಲು ವಿದ್ವಾಂಸರ ಕೊರತೆ ಎದ್ದುಕಾಣುತ್ತಿದೆ' ಎಂದು ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರವು ನಗರದ ಕನ್ನಡಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಚೀನ ಗದ್ಯಸಾಹಿತ್ಯ ಮಾಲೆಯ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಪ್ರಾಚೀನ ಮತ್ತು ಆಧುನಿಕ ವಿದ್ವಾಂಸರಲ್ಲಿ ಪದ್ಯವೇ ಶ್ರೇಷ್ಠ ಎಂಬ ಭಾವನೆಯಿದೆ. ಆದರೆ ಗದ್ಯದ ಅಳ ವಿಸ್ತಾರ ತಿಳಿಯಪಡಿಸುವ ಸಲುವಾಗಿಯೇ ಪ್ರಾಚೀನ ಗದ್ಯ ಸಾಹಿತ್ಯ ಕೃತಿಗಳನ್ನು ಸಂಪಾದಿಸಲಾಗಿದೆ' ಎಂದರು.

`ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, ಚಿತ್ರ ನಟಿ- ನಿರ್ದೇಶಕಿ ಅಪರ್ಣಾ ಸೇನ್ ಸೇರಿದಂತೆ ಪಶ್ಚಿಮ ಬಂಗಾಳದ ಸೇನ್ ವಂಶಸ್ಥರು ಮೂಲತಃ ಕರ್ನಾಟಕದವರು. ಇವರೊಂದಿಗೆ ರಾಜ್ಯದ ಗ್ರಾಮದೇವತೆ ಮಂಚಮ್ಮ ಕೂಡ ಬಂಗಾಳಕ್ಕೆ ವಲಸೆ ಹೋಗಿದ್ದಾಳೆ. ಬಂಗಾಳ, ಒಡಿಶಾ, ಅಸ್ಸಾಂ, ನಾಗಲ್ಯಾಂಡ್ ಸೇರಿದಂತೆ ಬಹುಭಾಗದಲ್ಲಿ ಈ ಮಂಚಮ್ಮನನ್ನು ಮಾನಸಾ ದೇವಿ ಎಂದು ಪೂಜಿಸಲಾಗುತ್ತಿದೆ.

ಸಂಶೋಧನೆಯಿಂದ ಇಂತಹ ಹತ್ತು ಹಲವು ಸತ್ಯ ಸಂಗತಿಗಳು ಹೊರಬರಬೇಕಿದೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ತಿಳಿಸಿದರು.

ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, `ಪ್ರಾಚೀನ ಗದ್ಯಕಾವ್ಯದ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸುವ ಜವಾಬ್ದಾರಿ ಹಿರಿಯರ ಮೇಲಿದೆ. ಇನ್ನಷ್ಟು ಗದ್ಯಸಾಹಿತ್ಯಮಾಲೆ  ಹೊರತರುವ ಪ್ರಯತ್ನ ಪ್ರಾಧಿಕಾರದಿಂದ ಜರುಗಲಿದೆ' ಎಂದರು.

ಬಿಡುಗಡೆಯಾದ ಕೃತಿಗಳು
ಸಮಾರಂಭದಲ್ಲಿ ಬಿಡುಗಡೆಯಾದ ಸಂಪಾದಿತ ಪ್ರಾಚೀನ ಗದ್ಯಸಾಹಿತ್ಯ ಮಾಲೆಯ ಕೃತಿಗಳು ಹಾಗೂ ಅವುಗಳ ಸಂಪಾದಕರು
`ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ' (ಡಾ.ಎಂ.ಎ.ಜಯಚಂದ್ರ), `ನಯಸೇನ ವಿರಚಿತ ಧರ್ಮಾಮೃತ' (ಡಾ.ಶುಭಚಂದ್ರ), `ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ' (ಡಾ.ಪಿ.ವಿ.ನಾರಾಯಣ), `ಬ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ- `ವಡ್ಡಾರಾಧನೆ' (ಡಾ.ಶಾಂತಿನಾಥ ದಿಬ್ಬದ), `ಹರಿಹರ ವಿರಚಿತ ಕನ್ನಡ ಶರಣರ ಕತೆಗಳು' (ಡಾ.ಎಂ.ಎಂ.ಕಲಬುರ್ಗಿ), `ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ' (ಡಾ ಶಿವಲಿಂಗಯ್ಯ ಜಿ.ಎ), `ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ' (ಡಾ.ಎಚ್.ಎಂ.ನಾಗರಾಜರಾವ್), `ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವು' (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ), `ದೇವಚಂದ್ರ ವಿರಚಿತ ರಾಜಾವಳಿ ಕತೆ' (ಡಾ.ರಾಮೇಗೌಡ,) `ಮುದ್ದಣ ವಿರಚಿತ ರಾಮಾಶ್ವಮೇಧಂ' (ಡಾ.ಗಾಯತ್ರಿ ನಾವಡ).

ವಡ್ಡಾರಾಧನೆ...
`ವಡ್ಡಾರಾಧನೆ ಎಂಬ ಹೆಸರುಳ್ಳ ಕೃತಿಯನ್ನು ಶಿವಕೋಟ್ಯಾಚಾರ್ಯ ಎಂಬುವವರು ರಚಿಸಿದ್ದಾರೆ ಎಂದೇ ಭಾವಿಸಲಾಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ' ಎಂದು ಡಾ.ಎಂ.ಎಂ.ಕಲಬುರ್ಗಿ ಅಭಿಪ್ರಾಯಪಟ್ಟರು.

`ವಡ್ಡಾರಾಧನೆ ಎಂಬುದು ಕೃತಿಯ ಹೆಸರಲ್ಲ. ಶಿವಕೋಟ್ಯಾಚಾರ್ಯ ಎಂಬುದು ಕವಿ ಹೆಸರಲ್ಲ. ಬ್ರಾಜಿಷ್ಣು ಎಂಬ ಕವಿಯಿಂದ ರಚಿಸಲಾದ ಆರಾಧನಾ ಕರ್ಣಾಟಟೀಕಾ ಕೃತಿಯನ್ನೇ ವಡ್ಡಾರಾಧನೆ ಎಂದು ಹೆಸರಿಡಲಾಗಿದೆ. ಈ ವಿಚಾರವನ್ನು 40 ವರ್ಷಗಳ ಹಿಂದೆ ಪಿಎಚ್.ಡಿ. ಮಾಡುವ ಸಂದರ್ಭದಲ್ಲೇ ತಿಳಿಸಿದ್ದೆ. ಈಗ ಗದ್ಯಮಾಲೆ ಪ್ರಕಟಿಸುವಾಗ ಪ್ರಧಾನ ಸಂಪಾದಕತ್ವ ವಹಿಸಿಕೊಂಡಿರುವುದರಿಂದ ಶಾಂತಿನಾಥ ದಿಬ್ಬದ ಅವರು ಸಂಪಾದಿಸಿರುವ ಈ ಕೃತಿಗೆ ಬ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ ಎಂದೇ ಹೆಸರಿಡಲಾಗಿದೆ' ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.