ADVERTISEMENT

ಸಚಿವರಿಗೆ ಕಾದು ಸುಸ್ತಾದ ಮಕ್ಕಳು

5 ನಿಮಿಷದ ಕಾರ್ಯಕ್ರಮಕ್ಕೆ 8 ತಾಸು ಕಾದ ಕಿವುಡ, ಮೂಗ ವಿದ್ಯಾರ್ಥಿಗಳು

ಇ.ಎಸ್.ಸುಧೀಂದ್ರ ಪ್ರಸಾದ್
Published 5 ಜನವರಿ 2016, 19:39 IST
Last Updated 5 ಜನವರಿ 2016, 19:39 IST

ಧಾರವಾಡ: ಆ ಮಕ್ಕಳು ಬೆಳಿಗ್ಗೆಯಿಂದ ಊಟವಿಲ್ಲದೆ ಬಳಲಿದ್ದರೂ ಹಾಡಿ, ಕುಣಿಯುವ ಸಂಭ್ರಮದಲ್ಲಿ ದಣಿವನ್ನು ಮರೆತಿದ್ದರು. ತಾವು ಯಾರಿಗಾಗಿ ಊಟ ಬಿಟ್ಟು ಕಾಯುತ್ತಿದ್ದೇವೆ ಎಂಬ ಅರಿವೂ ಆ ಮಕ್ಕಳಿಗೆ ಇರಲಿಲ್ಲ.

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಹುಬ್ಬಳ್ಳಿ– ಧಾರವಾಡದ ಸುಮಾರು 300ಕ್ಕೂ ಅಧಿಕ ಮಕ್ಕಳನ್ನು ಕರೆತರುವಂತೆ ಅಕಾಡೆಮಿಯ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದರಂತೆ. ಇವರಲ್ಲಿ 150 ಮಕ್ಕಳು ಕಿವುಡ– ಮೂಗರು. ಮಕ್ಕಳು ಮಾತ್ರವಲ್ಲ, ಇವರನ್ನು ಕರೆತಂದ ಶಿಕ್ಷಕರಿಗೂ ತಾವು ಯಾವ ಕಾರ್ಯಕ್ರಮಕ್ಕೆ ಬಂದಿದ್ದೇವೆ, ಯಾರು ಬರುತ್ತಿದ್ದಾರೆ ಎಂಬ ಮಾಹಿತಿಯೂ ಇರಲಿಲ್ಲ.

ಹುಬ್ಬಳ್ಳಿಯ ಪ್ರಿಯದರ್ಶಿನಿ ಕಿವುಡ ಮೂಗ ಮಕ್ಕಳ ಶಾಲೆ, ನಗರದ ಹೊನ್ನಮ್ಮ ಶಾಲೆ, ಬಾಲಕಿಯರ ಬಾಲಮಂದಿರ, ಬಾಲಕರ ಬಾಲಮಂದಿರ, ಕೆಎನ್‌ಕೆ ಬಾಲಕಿಯರ ಶಾಲೆ, ಎಪಿಎಂಸಿ ಸರ್ಕಾರಿ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

ಸಂಜೆ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಮಟಮಟ ಮಧ್ಯಾಹ್ನ 12 ಗಂಟೆಗೇ ಮಕ್ಕಳನ್ನು ಕರೆಯಿಸಲಾಗಿತ್ತು. ಬಂದ ಮಕ್ಕಳಿಗೆ ತಿಂಡಿಯೂ ಇಲ್ಲ, ಊಟವೂ ಇಲ್ಲ. ಶಿಕ್ಷಕರೇ ಸೇರಿ ಅವಲಕ್ಕಿ ತರಿಸಿ ಮಕ್ಕಳಿಗೆ ತಿನಿಸಿದರು. ಕಾಯ್ದು ಸುಸ್ತಾದ ಮಕ್ಕಳು ಗಲಾಟೆ ಆರಂಭಿಸಿಯಾರು ಎಂದು ಒಂದಾದ ಮೇಲೊಂದರಂತೆ ಹಾಡುಗಳನ್ನು ಹಾಡಿಸುತ್ತಿದ್ದರು. ನೃತ್ಯ ಮಾಡಿಸುತ್ತಿದ್ದರು.

ಸಂಜೆ 6 ಆದರೂ ಕಾರ್ಯಕ್ರಮವೂ ಇಲ್ಲ, ಕರೆಯಿಸಿದ ಅಕಾಡೆಮಿ ಅಧ್ಯಕ್ಷರೂ ಇಲ್ಲ. ಕತ್ತಲಾದರೂ ಮಕ್ಕಳನ್ನು ಇಲ್ಲೇ ಇರಿಸಬೇಕೋ ಅಥವಾ ಕರೆದುಕೊಂಡು ಹೋಗಬೇಕೋ ಎಂದು ಶಿಕ್ಷಕರು ಚಿಂತೆಗೀಡಾಗಿದ್ದರು. ಬಂದು ಹೋಗುವ ಅನೇಕರಿಗೆ ಯಾರು ಬರುತ್ತಾರೆ, ಎಷ್ಟು ಹೊತ್ತಿಗೆ ಬರುತ್ತಾರೆ ಎಂಬ ಪ್ರಶ್ನೆ ಕೇಳುತ್ತ ಗಡಿಯಾರ ನೋಡುತ್ತಿದ್ದರು.

ಅಂತೂ ಸಚಿವ ಜಿ.ಪರಮೇಶ್ವರ್‌ ಬಾಲವಿಕಾಸ ಅಕಾಡೆಮಿ ಕಚೇರಿಗೆ ಬಂದಾಗ ರಾತ್ರಿ ಬರೋಬ್ಬರಿ 8 ಗಂಟೆ ಆಗಿತ್ತು! ಮಕ್ಕಳನ್ನು ನೋಡಿ, ಕ್ಯಾಲೆಂಡರ್‌ ಬಿಡುಗಡೆ ಮಾಡಿ, ಟಾಟಾ ಮಾಡಿ ಹೊರಟರು. ಈ ಮೂಲಕ ಅಕಾಡೆಮಿ ಅಧ್ಯಕ್ಷರ ಉದ್ದೇಶ ಈಡೇರಿತು. ‘ಕ್ಯಾಲೆಂಡರ್‌ ಅವರದ್ದು, ಅದರಲ್ಲಿರುವ ಫೋಟೊಗಳೂ ಅವರದ್ದೇ.

ಹೀಗಿರುವಾಗ ಸಂಬಂಧವಿಲ್ಲದ ನಮ್ಮನ್ನು ಕರೆಯಿಸಿ ಕಾಯಿಸಿದ್ದಾದರೂ ಏಕೆ. ಸಾಮಾನ್ಯ ಮಕ್ಕಳನ್ನು ಹಿಡಿದುಕೊಳ್ಳುವುದೇ ಕಷ್ಟ. ಅದರಲ್ಲೂ ಕಿವುಡ, ಮೂಗ ಮಕ್ಕಳಿಗೆ ಪರಿಸ್ಥಿತಿಯನ್ನು ವಿವರಿಸುವುದಾದರೂ ಹೇಗೆ?’ ಎಂದು ಶಿಕ್ಷಕರು ಅಸಮಾಧಾನ ಹೊರಹಾಕಿದರು.

ಈ ಕುರಿತು ಕೇಳಿದ ಪ್ರಶ್ನೆಗೆ ತುಸು ಗಡುಸಾಗಿಯೇ ಪ್ರತಿಕ್ರಿಯಿಸಿದ ದಾಕ್ಷಾಯಿಣಿ ಬಸವರಾಜ, ‘ನಾವ್ಯಾಕ್ರಿ ಬೇಗ ಕರಸೋಣ ಅವ್ರನ್ನ.... ಯಾರೂ ಇಲ್ಲಿ ಬೇಗ ಬಂದಿಲ್ಲ. ಮಧ್ಯಾಹ್ನದ ಮೇಲೆಯೇ ಮಕ್ಕಳು ಬಂದಾರ....  ಇದು ಮಕ್ಕಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮ. ಅವರಿಗಾಗಿಯೇ ಕಲ್ಪಿಸಿದ್ದ ವೇದಿಕೆ’ ಎಂದರು.

ಈ ಮಧ್ಯೆ ತಮ್ಮ ಕಚೇರಿ ಸಿಬ್ಬಂದಿಗೆ ದೂರವಾಣಿ ವರ್ಗಾಯಿಸಿ ಅವರಿಂದ ಉತ್ತರ ಹೇಳಿಸುವ ಪ್ರಯತ್ನವನ್ನೂ ಮಾಡಿದರು. ಅಧ್ಯಕ್ಷರಿಂದಲೇ ಉತ್ತರ ಬೇಕು ಎಂದಾಗ ಮತ್ತೆ ಸಂಪರ್ಕಕ್ಕೆ ಬಂದರು. ಹಾಗಿದ್ದರೆ ಗೃಹ ಸಚಿವ ಪರಮೇಶ್ವರ್‌ ಬಂದಾಗ ಈ ಪೈಕಿ ಯಾವ ಮಕ್ಕಳಿಗೆ ವೇದಿಕೆ ನೀಡಿದಿರಿ ಎನ್ನುವ ಪ್ರಶ್ನೆಗೆ ಅಕಾಡೆಮಿ ಅಧ್ಯಕ್ಷರ ಬಳಿ ಯಾವುದೇ ಉತ್ತರ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.