ADVERTISEMENT

ಸಮಗ್ರ ತನಿಖೆಗೆ ಹಿಂದೇಟು

ಗ್ರಾಮೀಣ ಅಭಿವೃದ್ಧಿ ಇಲಾಖೆ: ₹1000 ಕೋಟಿ ನಾಪತ್ತೆ

ಹೊನಕೆರೆ ನಂಜುಂಡೇಗೌಡ
Published 25 ಜುಲೈ 2016, 0:00 IST
Last Updated 25 ಜುಲೈ 2016, 0:00 IST
ಸಮಗ್ರ ತನಿಖೆಗೆ ಹಿಂದೇಟು
ಸಮಗ್ರ ತನಿಖೆಗೆ ಹಿಂದೇಟು   

ಬೆಂಗಳೂರು: ರಾಜ್ಯದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌)ಗೆ ಬಿಡುಗಡೆ ಆಗಿರುವ ಅನುದಾನದಲ್ಲಿ ನಾಪತ್ತೆ ಆಗಿರುವ ₹1000 ಕೋಟಿಗೂ ಅಧಿಕ ಹಣ ಏನಾಯಿತು ಎಂದು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ.

ರಾಜ್ಯ ಸರ್ಕಾರವು ಹಣ ನಾಪತ್ತೆ  ಪ್ರಕರಣವನ್ನು  ಸಿಐಡಿ ತನಿಖೆಗೂ ಕೊಡುತ್ತಿಲ್ಲ. ಅಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದಾಖಲಾಗಿರುವ ದೂರಿನ ತನಿಖೆ ಚುರುಕುಗೊಳಿಸುವಂತೆಯೂ ಸೂಚಿಸುತ್ತಿಲ್ಲ. 
 
2009ರಿಂದ 2014ರವರೆಗೆ ಕೇಂದ್ರ ಮತ್ತು ರಾಜ್ಯದಿಂದ ಆರ್‌ಡಿಪಿಆರ್‌ಗೆ   ಬಿಡುಗಡೆಯಾದ ಒಟ್ಟು ಅನುದಾನದಲ್ಲಿ ₹2,815ಕೋಟಿ ನಾಪತ್ತೆಯಾಗಿತ್ತು.  ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲರ ಪ್ರಯತ್ನದಿಂದಾಗಿ  ₹1,335 ಕೋಟಿ ಪತ್ತೆಯಾಗಿದೆ.

ಸಿಂಡಿಕೇಟ್‌ ಬ್ಯಾಂಕಿನ ಒಂದು ನಾಮಕಾವಸ್ತೆ ಖಾತೆ (04462010099220)ಯಲ್ಲಿ ₹2,815ಕೋಟಿ ವ್ಯವಹಾರ ನಡೆಸಲಾಗಿದೆ. 

ಈ ಖಾತೆಯಲ್ಲಿ 2015ರ ಸೆಪ್ಟೆಂಬರ್‌ 30ರ ವೇಳೆಗೆ ₹ 495 ಕೋಟಿ ಮಾತ್ರ ಉಳಿದಿದೆ. ಲೆಕ್ಕಕ್ಕೆ ಸಿಗದಿರುವ ಹಣವನ್ನು  ಕೆಲವು ನಕಲಿ ವ್ಯಕ್ತಿಗಳು ನುಂಗಿ ಹಾಕಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಆರ್‌ಡಿಪಿಆರ್ ಇಲಾಖೆಯ ಅಧಿಕೃತ ಖಾತೆಗಳಿಂದ ಹಣ ನಾಪತ್ತೆಯಾದ ಪ್ರಕರಣ ಕುರಿತು ವಿಚಾರಣೆ ನಡೆಸಿದ ಐಎಫ್‌ಎಸ್‌ ಅಧಿಕಾರಿ ಪುನಟಿ ಶ್ರೀಧರ್‌  ಸಮಿತಿ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ  ಅಂತಿಮ ವರದಿ ಸಲ್ಲಿಸಿತ್ತು.

ಇಲಾಖೆ ಹಣಕಾಸು ವ್ಯವಹಾರ ಕುರಿತು ಲೆಕ್ಕ ಪರಿಶೋಧನೆ ನಡೆಸುವಂತೆ ಈ ಸಮಿತಿ ಶಿಫಾರಸು ಮಾಡಿತ್ತು. ಅನಂತರ ರಾಜ್ಯದ ಆಡಿಟ್‌ ಮತ್ತು ಅಕೌಂಟ್ಸ್‌ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎನ್‌.ಬಿ. ಶಿವರುದ್ರಪ್ಪ  ನೇತೃತ್ವದ ತ್ರಿಸದಸ್ಯ ಸಮಿತಿ ಲೆಕ್ಕ ಪರಿಶೋಧನೆ ಮಾಡಿದೆ. ಇವೆರಡೂ ಸಮಿತಿಗಳನ್ನು ಸ್ವತಃ ಪಾಟೀಲರೇ ನೇಮಕ ಮಾಡಿದ್ದಾರೆ.

ಶಿವರುದ್ರಪ್ಪನವರ ಸಮಿತಿ 2015ರ ಅಕ್ಟೋಬರ್‌ ತಿಂಗಳಲ್ಲಿ ಕೊಟ್ಟಿರುವ  ವರದಿಯಲ್ಲಿ, ‘ಕೆಲವು ನಕಲಿ ವ್ಯಕ್ತಿಗಳು ನಾಪತ್ತೆಯಾಗಿರುವ ಹಣವನ್ನು  ನುಂಗಿ ಹಾಕಿರುವ ಸಾಧ್ಯತೆಯಿದೆ’ ಎಂದು ಆತಂಕ ವ್ಯಕ್ತಪಡಿಸಿದೆ.

ಒಂದು ಅಂದಾಜಿನ ಮೇಲೆ ಆರ್‌ಡಿಪಿಆರ್‌ ಇಲಾಖೆಯಿಂದ ನಾಪತ್ತೆಯಾಗಿರುವ ಹಣ ಒಂದು ಸಾವಿರ ಕೋಟಿ ಎಂದು ಹೇಳಲಾಗಿದೆ. ಈ ಬಗ್ಗೆ  ಸಮಗ್ರ ತನಿಖೆ ನಡೆದರೆ  ಎಷ್ಟು ಹಣ ಅಧಿಕೃತ ಖಾತೆಗಳಿಂದ ನಾಪತ್ತೆಯಾಗಿದೆ. ಈ ಹಣ ಎಲ್ಲಿ ಹೋಗಿದೆ ಎನ್ನುವ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮುಖ್ಯಮಂತ್ರಿಗೆ ಪತ್ರ: ಇಲಾಖೆಯ ಅಧಿಕೃತ ಖಾತೆಗಳಿಂದ ಹಣ ತೆಗೆದು ಬಚ್ಚಿಡಲಾಗಿದೆ ಎಂಬ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಶಿಫಾರಸು ಮಾಡಿ ಸಚಿವ ಪಾಟೀಲರು 2015ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಆದರೆ, ಇದುವರೆಗೆ ಸಿಐಡಿ ತನಿಖೆ ಕುರಿತು ತೀರ್ಮಾನ  ಕೈಗೊಂಡಿಲ್ಲ. ಅಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರಿನ ತನಿಖೆಯೂ ನಡೆಯುತ್ತಿಲ್ಲ. ಈ ಮಧ್ಯೆ, ಹಗರಣ ಕುರಿತು ನ್ಯಾಯಾಂಗ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.

ಒಂದು ಯೋಜನೆಗೆ ಒಂದು ಖಾತೆ:  ರಾಜ್ಯ ಸರ್ಕಾರದ ಪ್ರತಿ ಇಲಾಖೆಯ ಪ್ರತಿಯೊಂದು ಯೋಜನೆಗೆ ಬರುವ ಅನುದಾನವನ್ನು ಒಂದೇ ಖಾತೆಯಲ್ಲಿ ಇಡಬೇಕು ಎಂಬುದು ನಿಯಮ. ಯಾವುದೇ ಕಾರಣಕ್ಕೂ ಎರಡು ಖಾತೆಗಳನ್ನು ತೆರೆಯುವಂತಿಲ್ಲ. ಹಾಗೇನಾದರೂ ತೆರೆದರೆ ಅದು ಕಾನೂನುಬಾಹಿರ ಕ್ರಮವಾಗುತ್ತದೆ.

ಅಧಿಕೃತ ಬ್ಯಾಂಕ್‌ ಖಾತೆ ತೆರೆಯುವ ಮೊದಲು ಕೇಂದ್ರ– ರಾಜ್ಯ ಸರ್ಕಾರ ಮತ್ತು ನಿರ್ದಿಷ್ಟ ಬ್ಯಾಂಕಿನ ನಡುವೆ ತ್ರಿಪಕ್ಷೀಯ ಒಪ್ಪಂದ ಏರ್ಪಡಬೇಕು. ಈ ರೀತಿ ತೆರೆದ ಖಾತೆಯಲ್ಲಿ ಮಾತ್ರ ಹಣ ಇಡಬೇಕು. ಆದರೆ, ಆರ್‌ಡಿಪಿಆರ್ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಖಾತೆಗಳನ್ನು ತೆರೆದು ಮನಸ್ಸಿಗೆ ಬಂದಂತೆ  ವಹಿವಾಟು ನಡೆಸಿದ್ದಾರೆ. ಈ ವಹಿವಾಟು ನಡೆದಿರುವುದಕ್ಕೆ ದಾಖಲೆಗಳೂ ಇಲ್ಲ.

ಅಧಿಕಾರಿಗಳ ಅಮಾನತು:  ಹಗರಣದ ಸಂಬಂಧ ಇಲಾಖೆ ಉಪ ಕಾರ್ಯದರ್ಶಿ ರಾಮಕೃಷ್ಣ ಹಾಗೂ ಗೆಜೆಟೆಡ್‌ ಅಧಿಕಾರಿ ಬಿ.ಎಸ್‌. ರಾಯಗೇರಿ ಅವರನ್ನು ಸಸ್ಪೆಂಡ್‌ ಮಾಡಲಾಗಿತ್ತು. ರಾಮಕೃಷ್ಣ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ಆದೇಶಕ್ಕೆ ತಡೆ ತಂದಿದ್ದಾರೆ. ಇವರಿಬ್ಬರೂ ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಇಡೀ ಹಗರಣದಲ್ಲಿ ಇವರಿಬ್ಬರೇ ಭಾಗಿಯಾಗಿದ್ದಾರೊ ಅಥವಾ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾತ್ರವೂ ಇದೆಯೊ ಎನ್ನುವ ಸಂಗತಿ ನಿಷ್ಪಕ್ಷಪಾತ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.

ಸಿಬಿಐ ತನಿಖೆ ಏಕಿಲ್ಲ
ರಾಜ್ಯ ಸರ್ಕಾರದ ಅಧಿಕೃತ ಖಾತೆಯಿಂದ ಹಣ ನಾಪತ್ತೆಯಾದ  ಪ್ರಕರಣ ಕುರಿತು ಸಿಬಿಐ ತನಿಖೆ ಏಕೆ ನಡೆಯುತ್ತಿಲ್ಲ.

ಸರ್ಕಾರದ ಖಾತೆಯಿಂದ ಒಂದು ಕೋಟಿಗಿಂತ ಅಧಿಕ ಹಣ ದುರ್ಬಳಕೆ ಆದರೂ ಸಿಬಿಐ ತನಿಖೆ ನಡೆಯಬೇಕು ಎಂಬ ನಿಯಮವಿದೆ. ಆದರೆ, ಈ ದೊಡ್ಡ ಪ್ರಕರಣ ಏಕೆ ಇನ್ನೂ ಸಿಬಿಐ ಕಣ್ಣಿಗೆ ಬಿದ್ದಿಲ್ಲ ಎಂದು ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ.

ಬ್ಯಾಂಕ್‌ ವ್ಯವಹಾರ ಈಗ ಆನ್‌ಲೈನ್‌ ಮೂಲಕ ನಡೆಯುತ್ತಿದೆ. ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಸರ್ಕಾರದ ಅಧಿಕಾರಿಗಳು ಮತ್ತು ಬ್ಯಾಂಕ್‌ ಅಧಿಕಾರಿಗಳು ಶಾಮೀಲಾಗಿದ್ದರೂ ಗೊತ್ತಾಗುತ್ತದೆ. ಪ್ರತಿ ತಿಂಗಳು ಬ್ಯಾಂಕ್‌ ವ್ಯವಹಾರ ಕುರಿತು ಪರಿಶೀಲನೆ ನಡೆಯುತ್ತವೆ ಎಂದೂ ಮೂಲಗಳು ವಿವರಿಸಿವೆ.

ಕಾನೂನು ಕ್ರಮ
ರಾಜ್ಯದ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಅಧಿಕೃತ ಖಾತೆಗಳಿಂದ ಹೊರ ತೆಗೆದು ಕಣ್ಣು ತಪ್ಪಿಸಿ ಬೇರೆಡೆ  ಇಡಲಾಗಿತ್ತು. ಈ ಹಣವನ್ನು ಪತ್ತೆ ಹಚ್ಚಿ ಸರ್ಕಾರದ ಖಜಾನೆಗೆ  ಒಪ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.

ADVERTISEMENT

ತಮ್ಮ ಇಲಾಖೆಯಲ್ಲಿ ಆರ್ಥಿಕ ಶಿಸ್ತು ತರಲು ಗಂಭೀರ ಪ್ರಯತ್ನ ನಡೆಸಲಾಗುತ್ತಿದೆ. ಹಣ ನಾಪತ್ತೆ ಪ್ರಕರಣದಲ್ಲಿ ಭಾಗಿಯಾದ ಆರೋ ಪಕ್ಕೆ ಒಳಗಾಗಿರುವ ಅಧಿಕಾರಿಗಳ ಮೇಲೆ ಕಾನೂನು  ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.