ADVERTISEMENT

ಸಾಹಿತ್ಯಾಸಕ್ತರಿಗೆ ಕೊಡಗಿನ ಕಡಂಬುಟ್ಟು, ಅಕ್ಕಿರೊಟ್ಟಿ

ಶ್ರೀಕಾಂತ ಕಲ್ಲಮ್ಮನವರ
Published 31 ಡಿಸೆಂಬರ್ 2013, 19:30 IST
Last Updated 31 ಡಿಸೆಂಬರ್ 2013, 19:30 IST
ಸಾಹಿತ್ಯಾಸಕ್ತರಿಗೆ ಕೊಡಗಿನ ಕಡಂಬುಟ್ಟು, ಅಕ್ಕಿರೊಟ್ಟಿ
ಸಾಹಿತ್ಯಾಸಕ್ತರಿಗೆ ಕೊಡಗಿನ ಕಡಂಬುಟ್ಟು, ಅಕ್ಕಿರೊಟ್ಟಿ   

ಮಡಿಕೇರಿ: ಕಡಂಬುಟ್ಟು (ಕಡಬು) ಚಟ್ನಿ, ಅಕ್ಕಿ ಪಾಯಸ, ಅಕ್ಕಿರೊಟ್ಟಿ... ಈ ಕೊಡ­ಗಿನ ವಿಶಿಷ್ಟ ಖಾದ್ಯಗಳು ಜನವರಿ ಏಳರಿಂದ ಮೂರು ದಿನಗಳ ಕಾಲ ನಡೆ­ಯ­ಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾ­ಸಕ್ತರಿಗೆ ಲಭ್ಯವಾಗಲಿವೆ.

ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಕ ಚಟು­­ವಟಿಕೆಗಳ ಜೊತೆ ಊಟೋಪ­ಚಾರಕ್ಕೂ ಪ್ರಾಮುಖ್ಯತೆ ಇದೆ. ಬಗೆ ಬಗೆಯ ವಿಶಿಷ್ಟ ಊಟೋಪಚಾರವನ್ನು ಸಮ್ಮೇಳನಗಳಲ್ಲಿ ಭಾಗ­ವ­ಹಿಸಲು ಬಂದ­ವರು ಬಯಸುವುದು ಸಹಜ. ಸಮ್ಮೇಳನ ನಡೆಯುವ ಆಯಾ ಜಿಲ್ಲೆಯ ಆಹಾರ ಪದ್ಧತಿಯ ಅನಾವ­ರಣಕ್ಕೂ ಇಲ್ಲಿ ಅವಕಾಶ ಇರುತ್ತದೆ.

ವಿವಿಧ ಪ್ರದೇಶಗಳ ಆಹಾರ ಪದ್ಧತಿಯನ್ನು ಕೂಡ ಗಮನ­ದಲ್ಲಿಟ್ಟುಕೊಂಡು ಆಹಾರ ಸಮಿತಿಯು ಮೆನು ತಯಾರಿಸಿದೆ. ಕೊಡಗಿನ ಆಹಾರದ ಜೊತೆ ಉತ್ತರ ಕರ್ನಾಟಕದ ಜೋಳದರೊಟ್ಟಿ, ಎಣ್ಣಗಾಯಿ, ಮೆಣಸು, ಖಾರ ಕೆಂಪು ಚಟ್ನಿಗೂ ಅವಕಾಶ ದೊರೆತಿದೆ.



ಅಡಿಕೆ ಹಾಳೆಯ ಪ್ಲೇಟ್‌: ಸಮ್ಮೇಳನ­ದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದಿರಲು ನಿರ್ಧರಿ­ಸಲಾಗಿದೆ. ಅಡಿಕೆ ಹಾಳೆಯ ಪ್ಲೇಟ್‌ ಹಾಗೂ ಪೇಪರ್‌ ಕಪ್‌ಗಳನ್ನು ಬಳಸ­ಲಾಗುವುದು. ಸುಮಾರು 2 ಲಕ್ಷದಷ್ಟು ಅಡಿಕೆ ಹಾಳೆಗಳನ್ನು ತರಿಸಿಕೊ­ಳ್ಳಲಾಗಿದೆ. ಕುಡಿಯಲು ಖನಿಜಯುಕ್ತ ನೀರು ಪೂರೈಕೆಯಾಗಲಿದೆ.

ನುರಿತ ಬಾಣಸಿಗರ ತಂಡ: ಅಡುಗೆ ತಯಾರಿಸಿಕೊಡುವ ಟೆಂಡರ್‌ ಹುಬ್ಬಳ್ಳಿಯ ‘ಶ್ರೀ ಬೈರು ಕ್ಯಾಟರರ್ಸ್‌’ ತಂಡಕ್ಕೆ ಲಭಿಸಿದೆ. ಈ ತಂಡವು ಇದಕ್ಕೂ ಮುಂಚೆ ಗಂಗಾವತಿಯಲ್ಲಿ ನಡೆದ 78ನೇ ಸಮ್ಮೇಳನ ಹಾಗೂ ವಿಜಾಪುರದಲ್ಲಿ ನಡೆದ 79ನೇ ಸಮ್ಮೇಳ­ನದಲ್ಲೂ ಊಟೋಪಚಾರದ ವ್ಯವಸ್ಥೆ ವಹಿಸಿಕೊಂಡಿತ್ತು. ಹೀಗಾಗಿ ಇಂತಹ ದೊಡ್ಡ ಪ್ರಮಾಣದ ಸಮ್ಮೇಳನಗಳನ್ನು ನಿರ್ವಹಿಸಿ ಈ ತಂಡಕ್ಕೆ ಅನುಭವವಿದೆ.

‘ಆಹಾರ ಸಮಿತಿಯವರು ನೀಡಿರುವ ಪಟ್ಟಿಯಂತೆ ಊಟ ಬಡಿಸಲು ನಾವು ಸಿದ್ಧರಿದ್ದೇವೆ. ಕೊಡಗಿನ ಖಾದ್ಯಗಳಾದ ಕಡಂಬುಟ್ಟು (ಕಡಬು) ಚಟ್ನಿ, ಅಕ್ಕಿ ಪಾಯಸ, ಅಕ್ಕಿರೊಟ್ಟಿಯನ್ನು ಮಾಡಲು ಸ್ಥಳೀಯ ಬಾಣಸಿಗರ ಸಹಾಯ ಪಡೆಯಲಿದ್ದೇವೆ ’ ಎಂದು ತಂಡದ ಮುಖ್ಯಸ್ಥರಾದ ಪ್ರಕಾಶ ಬಾಬುಲಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಊಟ, ತಿಂಡಿ ತಯಾರಿಸಲು ಬೇಕಾದ ಪಡಿತರವನ್ನು ಆಹಾರ ಸಮಿತಿಯಿಂದಲೇ ನೀಡಲಾಗುತ್ತದೆ. 600 ಬಾಣಸಿಗರು, 2,000ಕ್ಕೂ ಹೆಚ್ಚು ಸ್ವಯಂಸೇವಕರು, 10 ಉಪಸಮಿತಿಗಳು ಹಾಗೂ 250ಕ್ಕೂ ಹೆಚ್ಚು ಸಕ್ರಿಯ ಸದಸ್ಯರು ಊಟೋಪಚಾರದ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ’ ಎಂದು ಆಹಾರ ಸಮಿತಿಯ ಸಂಚಾಲಕ ಕೇಶವ ಕಾಮತ್‌ ಹೇಳಿದರು.

ಅಡುಗೆ ಮಾಡಿ ಬಡಿಸಲು ಟೆಂಡರ್‌ ಕರೆಯಲಾಗಿತ್ತು. ಏಳು ಪ್ರಮುಖ ತಂಡಗಳು ಟೆಂಡರ್‌ನಲ್ಲಿ ಭಾಗ­ವಹಿಸಿದ್ದವು. ಅವರಲ್ಲಿ ಬೈರು ಕ್ಯಾಟರರ್ಸ್‌ ತಂಡಕ್ಕೆ ಟೆಂಡರ್‌ ಲಭಿಸಿದೆ. ಜನವರಿ 6ರ ರಾತ್ರಿಯಿಂದಲೇ ಸಮ್ಮೇಳನಕ್ಕೆ ಬಂದವರಿಗೆ ಊಟ ನೀಡಲಾಗುತ್ತದೆ. ನಾಲ್ಕು ರಾತ್ರಿ– 3 ದಿನಗಳ ಕಾಲ ಊಟೋಪಚಾರದ ವ್ಯವಸ್ಥೆ ಮಾಡಿದ್ದೇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT