ADVERTISEMENT

13 ಸಚಿವರ ಪ್ರಮಾಣ

ಇಂದು ಖಾತೆ ಹಂಚಿಕೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2016, 20:15 IST
Last Updated 19 ಜೂನ್ 2016, 20:15 IST
13 ಸಚಿವರ ಪ್ರಮಾಣ
13 ಸಚಿವರ ಪ್ರಮಾಣ   

ಬೆಂಗಳೂರು: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿ ಈ ಹಿಂದೆ ರಾಜೀನಾಮೆ ನೀಡಿದ್ದ ಸಂತೋಷ್‌ ಲಾಡ್‌ ಅವರೂ ಸೇರಿದಂತೆ 13 ಶಾಸಕರು ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಪೂರ್ಣಗೊಳ್ಳುತ್ತಿದ್ದಂತೆಯೇ, ಸಚಿವರ ದೃಷ್ಟಿ ಪ್ರಮುಖ ಖಾತೆಗಳನ್ನು ತಿರುಗಿದೆ. ಆದರೆ, ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ತೀರ್ಮಾನಿಸಿಲ್ಲ ಎಂದು ಗೊತ್ತಾಗಿದೆ.

ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಹದಿಮೂರು ಜನರ ಪೈಕಿ ನಾಲ್ವರಿಗೆ ರಾಜ್ಯ ಸಚಿವರ ಸ್ಥಾನ ನೀಡಲಾಗಿದೆ. ಇನ್ನುಳಿದವರಿಗೆ ಸಂಪುಟ ದರ್ಜೆ ನೀಡಲಾಗಿದೆ.ಖಾತೆಗಳ ಹಂಚಿಕೆ ಸೋಮವಾರ ಆಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ.

ಹಳೆಯ ಮತ್ತು ಹೊಸ ಸಚಿವರ ಖಾತೆಗಳಲ್ಲಿ ಕೆಲವು ಬದಲಾವಣೆಗಳು ಆಗುವುದು ಖಚಿತ. ರಾಜ್ಯ ಸಚಿವ ಸ್ಥಾನದಿಂದ ಸಂಪುಟ ದರ್ಜೆಗೆ ಬಡ್ತಿ ಪಡೆದಿರುವ ಶರಣಪ್ರಕಾಶ ಪಾಟೀಲ, ಕೃಷ್ಣ ಭೈರೇಗೌಡ ಅವರಿಗೆ ಹೆಚ್ಚುವರಿ ಖಾತೆಗಳನ್ನು ವಹಿಸುವ ಸಾಧ್ಯತೆ ಇದೆ.

ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್ ಸೇರಿದಂತೆ ಸಂಪುಟ ಸೇರಿರುವ ಹಿರಿಯ ಶಾಸಕರಿಗೆ ಮಹತ್ವದ ಖಾತೆಗಳು ಸಿಗುವ ಸಾಧ್ಯತೆ ಇದೆ. ಹಾಗೆಯೇ, ಈ ಸರ್ಕಾರದ ಆರಂಭದಿಂದಲೂ ಸಂಪುಟದಲ್ಲಿರುವ, ಸಿದ್ದರಾಮಯ್ಯ ಆಪ್ತರಾದ ಎಚ್.ಸಿ. ಮಹದೇವಪ್ಪ ಅವರಂಥವರ ಖಾತೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ತೀರಾ ಕಡಿಮೆ ಎಂದು ಗೊತ್ತಾಗಿದೆ.

ಗೈರು: ಸಚಿವ ಸ್ಥಾನ ಕಳೆದುಕೊಂಡ 14 ಮಂದಿ ಪೈಕಿ ಶಾಮನೂರು ಶಿವಶಂಕರಪ್ಪ ಹಾಗೂ ಅಭಯಚಂದ್ರ ಜೈನ್ ಹೊರತುಪಡಿಸಿದರೆ, ಬೇರೆ ಯಾರೂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲ. ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಭೀಮಾನಾಯ್ಕ್ ಸಮಾರಂಭಕ್ಕೆ ಬಂದಿದ್ದರು. ಲಮಾಣಿ ಹಾಗೂ ಪ್ರಮೋದ್ ಪ್ರಮಾಣ ವಚನದ ನಂತರ ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ನಮಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.