ADVERTISEMENT

ಸ್ಕೂಬಾ ಡೈವಿಂಗ್‌ ಅವಘಡ: ಕೋಮಾಸ್ಥಿತಿಯಲ್ಲಿದ್ದ ಶ್ರುತಿ ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:49 IST
Last Updated 10 ಜುಲೈ 2017, 19:49 IST
ಸ್ಕೂಬಾ  ಡೈವಿಂಗ್‌  ಅವಘಡ:  ಕೋಮಾಸ್ಥಿತಿಯಲ್ಲಿದ್ದ  ಶ್ರುತಿ ಸಾವು
ಸ್ಕೂಬಾ ಡೈವಿಂಗ್‌ ಅವಘಡ: ಕೋಮಾಸ್ಥಿತಿಯಲ್ಲಿದ್ದ ಶ್ರುತಿ ಸಾವು   

ಚಿಕ್ಕಮಗಳೂರು: ಅಮೆರಿಕದ ಹವಾಯ್‌ನಲ್ಲಿ ಸ್ಕೂಬಾ ಡೈವಿಂಗ್‌ ಮಾಡುತ್ತಿದ್ದಾಗ ಆಮ್ಲಜನಕ ನಳಿಕೆ ಕಳಚಿಬಿದ್ದ ಪರಿಣಾಮ ಅಸ್ವಸ್ಥಗೊಂಡು ಕೋಮಾಸ್ಥಿತಿಗೆ ತಲುಪಿ ಆಸ್ಪತ್ರೆಗೆ ದಾಖಲಾಗಿದ್ದ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ವಿಶ್ವನಾಥ್‌ ಅವರ ಪುತ್ರಿ ವಿ.ಶ್ರುತಿ (20) ಭಾನುವಾರ ತಡರಾತ್ರಿ ಮೃತಪಟ್ಟರು.
ಜೂನ್‌ 30ರಂದು ಅವಘಡ ಸಂಭವಿಸಿತ್ತು. 10 ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.  ‘ಹವಾಯ್‌ನಲ್ಲಿನ ಆಸ್ಪತ್ರೆಗೆ ಮಗಳ ದೇಹದಾನ ಮಾಡಿದ್ದೇವೆ. ಅಸ್ಥಿಯನ್ನು ಮಾತ್ರ ಇಲ್ಲಿಗೆ ತಂದು ಉತ್ತರಾದಿ ಕ್ರಿಯೆನೆರವೇರಿಸುತ್ತೇವೆ’ ಎಂದು ತಂದೆ ವಿಶ್ವನಾಥ್‌ ತಿಳಿಸಿದರು.
‘ಪತ್ನಿ ಶಕುಂತಲಾ ಮತ್ತು ಮಗ ಕಾರ್ತಿಕ್‌ ಅವರಿಗೆ ತತ್ಕಾಲ್‌ನಲ್ಲಿ ಪಾಸ್‌ಪೋರ್ಟ್‌ ಸಿಕ್ಕಿದ್ದರಿಂದ ಅವರಿಬ್ಬರು ಜುಲೈ 7ರಂದು ರಾತ್ರಿ ಹೊರಟು 8ರಂದು ರಾತ್ರಿ ಹವಾಯ್‌ ತಲುಪಿದ್ದರು’ ಎಂದರು.

ಸ್ಕೂಬಾ ಡೈವಿಂಗ್ ಎಂದರೇನು?

ಬೆಂಗಳೂರು: ಸಾಗರದಾಳದ  ವಿಸ್ಮಯವನ್ನು ವೀಕ್ಷಿಸಲು ಈಜುಪಟುವು  ಕಡಲಾಳಕ್ಕೆ ಇಳಿಯುವ ಕಲೆಯೇ  ಸ್ಕೂಬಾ ಡೈವಿಂಗ್  ಆಗಿದೆ.
‘ವಿಶೇಷ ಉಡುಗೆ ಮತ್ತು ಉಸಿರಾಟದ ಉಪಕರಣಗಳನ್ನು ಅಳವಡಿಸಿಕೊಂಡು ಕಡಲಿನಾಳಕ್ಕೆ ಇಳಿಯುತ್ತಾರೆ. ಇದನ್ನು  ಸ್ಕೂಬಾ (ಸೆಲ್ಫ್ ಕಂಟೆಂಟ್ ಅಂಡರ್‌ವಾಟರ್ ಬ್ರೀಥಿಂಗ್ ಅಪ್ರಾಯಟಸ್)  ಎಂದು ಕರೆಯುತ್ತಾರೆ.  ಇದಕ್ಕೆ ವಿಶೇಷ ತರಬೇತಿ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮವಾಗಿಯೂ ಸ್ಕೂಬಾ ಡೈವಿಂಗ್ ಪ್ರಸಿದ್ಧಿ ಪಡೆಯುತ್ತಿದೆ’ ಎಂದು ಅಂತರರಾಷ್ಟ್ರೀಯ ಡೈವಿಂಗ್ ಕೋಚ್, ಗುರುಪ್ರಸಾದ್ ‘ಪ್ರಜಾವಾಣಿ’ಗೆ  ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.