ADVERTISEMENT

ಸ್ನೇಹಪರತೆಯ ಖಮರುಲ್‌ ಇಸ್ಲಾಂ

ಗಣೇಶ ಚಂದನಶಿವ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಖಮರುಲ್‌ ಇಸ್ಲಾಂ
ಖಮರುಲ್‌ ಇಸ್ಲಾಂ   

ಕಲಬುರ್ಗಿ: ಖಮರುಲ್‌ ಇಸ್ಲಾಂ ಅವರು ಈ ಭಾಗದ ಮುಸ್ಲಿಮರ ಧ್ವನಿ ಅಷ್ಟೇ ಅಲ್ಲ, ಅಚ್ಚುಮೆಚ್ಚಿನ ನಾಯಕರೂ ಆಗಿದ್ದರು. ಎಲ್ಲರೊಂದಿಗೆ ಬೆರೆಯುವ ಸ್ವಭಾವ, ಸ್ನೇಹಪರತೆ ಅವರನ್ನು ಎಲ್ಲ ಧರ್ಮೀಯರ ಪ್ರೀತಿಗೂ ಪಾತ್ರರಾಗುವಂತೆ ಮಾಡಿತ್ತು.

‘ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಮೂಲಕ ರಾಜಕೀಯ ಆರಂಭಿಸಿದ್ದರೂ ಅವರು ಕೋಮುವಾದಿ ಆಗಿರಲಿಲ್ಲ. ಇತರೆ ಧರ್ಮೀಯರ ಕೆಲಸಗಳನ್ನೂ ಅಷ್ಟೇ ಆಸ್ಥೆಯಿಂದ ಮಾಡುತ್ತಿದ್ದರು’ ಎಂಬುದು ಅವರ ಒಡನಾಡಿಗಳ ಮಾತು.

ವ್ಯಾಪಾರಿ ಕುಟುಂಬದ ಖಮರುಲ್‌, ಬಿ.ಇ ಮೆಕ್ಯಾನಿಕಲ್‌ ವ್ಯಾಸಂಗದ ನಂತರ ಸರ್ಕಾರಿ ನೌಕರಿಗೆ ಹಾತೊರೆದಿದ್ದರು. ಆ ನೌಕರಿ ಸಿಗಲಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದರಿಂದ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾದರು.

ADVERTISEMENT

ಉತ್ತಮ ವಾಗ್ಮಿಯಾಗಿದ್ದ ಇವರು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಸೇರಿ, ಅದನ್ನು ಸಂಘಟಿಸಿದರು. 1978ರಲ್ಲಿ ಕಲಬುರ್ಗಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಯತ್ನದಲ್ಲಿಯೇ ಯಶಸ್ಸು ಕಂಡರು. ಕಾಂಗ್ರೆಸ್‌ ಸಿಂಡಿಕೇಟ್‌ ಅಭ್ಯರ್ಥಿ ಮಹ್ಮದ್‌ ಅಲಿ, ಜನತಾ ಪಾರ್ಟಿ (ಜೆಎನ್‌ಪಿ)ಯ ಉಸ್ತಾದ್‌ ಸಾದತ್‌ ಹುಸೇನ್‌ ಅವರಂತಹ ಘಟಾನುಘಟಿಗಳನ್ನು ಸೋಲಿಸಿದರು.

ಆ ನಂತರದ ಎರಡು ವಿಧಾನಸಭಾ ಚುನಾವಣೆ (1983, 1985)ಗಳಲ್ಲಿ ಜನತಾ ಪಾರ್ಟಿಯ ಎಸ್‌.ಕೆ. ಕಾಂತಾ ವಿರುದ್ಧ ಪರಾಭವಗೊಂಡರು. ಮತ್ತೆ 1989ರಲ್ಲಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ನಿಂದ, 1994ರಲ್ಲಿ ಇಂಡಿಯನ್‌ ನ್ಯಾಷನಲ್‌ ಲೀಗ್‌ನಿಂದ ವಿಧಾಸಭೆ ಪ್ರವೇಶಿಸಿದರು.

1996ರ ಲೋಕಸಭಾ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಗೆದ್ದರು. ಆದರೆ, ಕೇಂದ್ರ ಸಚಿವರಾಗುವ ಆಸೆ ಈಡೇರಲಿಲ್ಲ. 1998ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡರು. ನಂತರ ಕಾಂಗ್ರೆಸ್‌ ಸೇರಿ ಮೂರು ಬಾರಿ ಶಾಸಕರಾದರು. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಕಲಬುರ್ಗಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು.

ಎಸ್‌.ಎಂ. ಕೃಷ್ಣ ಅವರ ಸಂಪುಟದಲ್ಲಿ ವಸತಿ ಮತ್ತು ಕಾರ್ಮಿಕ ಖಾತೆ ನಿರ್ವಹಿಸಿದ್ದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹಜ್‌, ವಕ್ಫ್‌ ಮತ್ತು ಪೌರಾಡಳಿತ ಸಚಿವರಾಗಿದ್ದರು. ಆರಂಭದಲ್ಲಿ ಹಜ್‌ ಖಾತೆಯನ್ನು ವಾಪಸ್‌ ಪಡೆದಿದ್ದ ಮುಖ್ಯಮಂತ್ರಿ, ಆ ನಂತರ ಇವರನ್ನು ಸಂಪುಟದಿಂದಲೇ ಕೈಬಿಟ್ಟರು.

ಸಚಿವ ಸ್ಥಾನ ಕಳೆದುಕೊಂಡ ನಂತರ ಖಮರುಲ್‌ ಕೆರಳಿದ್ದರು. ಸಂಸದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಸಚಿವ ಸ್ಥಾನ ಮತ್ತೆ ಗಿಟ್ಟಿಸಿಕೊಳ್ಳಲು ಒತ್ತಡ ತಂತ್ರ ಅನುಸರಿಸಿದ್ದರು. ಮತ್ತೆ ಎಚ್‌.ಡಿ.ದೇವೇಗೌಡರ ಸಖ್ಯಕ್ಕೂ ಹಾತೊರೆದಿದ್ದರು. ಕಾಂಗ್ರೆಸ್‌ ಪಕ್ಷ ಅವರಿಗೆ ಕೆಲ ತಿಂಗಳ ಹಿಂದಷ್ಟೇ ಎಐಸಿಸಿ ಕಾರ್ಯದರ್ಶಿ ಹುದ್ದೆ ಹಾಗೂ ಪಕ್ಷದ ಕೇರಳ ಉಸ್ತುವಾರಿ ವಹಿಸಿ ಸಮಾಧಾನ ಪಡಿಸಿತ್ತು.

‘ವಕ್ಫ್‌ ಆಸ್ತಿ ಕಬಳಿಕೆ ವಿವಾದ’ ಖಮರುಲ್‌ ಅವರಿಗೆ ಸುತ್ತಿಕೊಂಡಿತ್ತು. ಇದೇ ಕಾರಣಕ್ಕಾಗಿ ಬಿಜೆಪಿ ದೊಡ್ಡ ಹೋರಾಟವನ್ನೇ ಮಾಡಿತ್ತು. ಖಮರುಲ್‌ ಅವರು ಸಚಿವರಾಗಿದ್ದಾಗ ವಿಧಾನ ಮಂಡಲದಲ್ಲಿ ಅವರಿಗೆ ಪ್ರಶ್ನೆ ಕೇಳದೇ ‘ಬಹಿಷ್ಕಾರ’ ಹಾಕಿತ್ತು.

ಖಮರುಲ್‌ ಅವರ ಪೂರ್ವಜರು ಪಂಜಾಬ್‌ನವರು. ತಂದೆ ನೂರುಲ್‌ ಇಸ್ಲಾಂ. ತಾಯಿ ಅಫ್ಜಲ್‌ಬೇಗಂ. ಜನನ ಜನವರಿ 27, 1948. ಪತ್ನಿ ಖನ್ನೀಸಾಫಾತಿಮಾ ಬೇಗಂ, ದತ್ತು ಪುತ್ರ ಫರೋಜ್‌ ಉಲ್‌ ಇಸ್ಲಾಂ.

ನಾಲ್ಕೂವರೆ ದಶಕಗಳ ರಾಜಕೀಯ ಜೀವನದಲ್ಲಿ 11 ಚುನಾವಣೆ ಎದುರಿಸಿದ್ದ ಖಮರುಲ್‌, ಒಂದು ಬಾರಿ ಲೋಕಸಭೆಗೆ, ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ಕ್ರೀಡಾಪಟುವಾಗಿದ್ದರು. ಈ ಭಾಗದಲ್ಲಿ ಕ್ರೀಡೆಗೆ ಉತ್ತೇಜನ ನೀಡಿದ್ದರು. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾಗಿದ್ದರು.

ಅಂತ್ಯಕ್ರಿಯೆ ಇಂದು
ಕಲಬುರ್ಗಿ:
ಶಾಸಕ ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ (ತಡ್ಫೀನ್)ಯು ಇಲ್ಲಿನ ಜಿಲ್ಲಾ ನ್ಯಾಯಾಲಯ ಸಮೀಪದ ರೋಜಾ–ಇ–ಖಲಂದರ ಖಾನ್ ಸ್ಮಶಾನದಲ್ಲಿ ಸೆ. 19ರಂದು ರಾತ್ರಿ 9.30ರಿಂದ 10.30ರ ಅವಧಿಯಲ್ಲಿ ನಡೆಯಲಿದೆ.

ಬೆಳಿಗ್ಗೆ 8.30ರಿಂದ 9.30 ಗಂಟೆಯವರೆಗೆ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು ಹಾಗೂ ಬಂಧುಗಳು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವರು.

ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ಕೆಸಿಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.