ADVERTISEMENT

ಹಳಿ ತಪ್ಪಿದ ಬಸವ ಎಕ್ಸ್‌ಪ್ರೆಸ್‌

​ಪ್ರಜಾವಾಣಿ ವಾರ್ತೆ
Published 10 ಮೇ 2016, 19:30 IST
Last Updated 10 ಮೇ 2016, 19:30 IST
ಮೈಸೂರು ರೈಲು ನಿಲ್ದಾಣದಲ್ಲಿ ಮಂಗಳವಾರ ಹಳಿ ತಪ್ಪಿದ ಬಸವ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳನ್ನು ಮರಳಿ ಹಳಿ ಮೇಲೆ ತರಲು ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.
ಮೈಸೂರು ರೈಲು ನಿಲ್ದಾಣದಲ್ಲಿ ಮಂಗಳವಾರ ಹಳಿ ತಪ್ಪಿದ ಬಸವ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳನ್ನು ಮರಳಿ ಹಳಿ ಮೇಲೆ ತರಲು ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.   

ಮೈಸೂರು: ನಗರದ ರೈಲುನಿಲ್ದಾಣದಲ್ಲಿ ಬಸವ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಡೆದಿದೆ. ಬಾಗಲಕೋಟೆಗೆ ಮಧ್ಯಾಹ್ನ 1.30ಕ್ಕೆ ಹೊರಡಬೇಕಿದ್ದ ಬಸವ ಎಕ್ಸ್‌ಪ್ರೆಸ್, ನಿರ್ವಹಣೆ ಕಾರ್ಯದ ನಂತರ ಪ್ಲಾಟ್‌ಫಾರ್ಮ್‌ಗೆ ಬರುವಾಗ 2 ಬೋಗಿಗಳು ಹಳಿ ತಪ್ಪಿದವು.

ಇದರಿಂದ ಮೈಸೂರು– ಬೆಂಗಳೂರು, ಮೈಸೂರು– ಅರಸೀಕೆರೆ ಹಾಗೂ ಮೈಸೂರು– ಚಾಮರಾಜನಗರ ನಡುವಿನ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ರೈಲಿನಲ್ಲಿ ಪ್ರಯಾಣಿಕರು ಇರಲಿಲ್ಲ. ಆದರೆ, ಇದರಿಂದ ಹಲವು ರೈಲುಗಳ ಸಂಚಾರ ರದ್ದುಗೊಂಡಿತು. ಕೆಲವು ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿ ಪ್ರಯಾಣಿಕರು ಪರದಾಡಬೇಕಾಯಿತು.

ಸಂಚಾರದಲ್ಲಿ ವ್ಯತ್ಯಯ: ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ ಬರಬೇಕಿದ್ದ ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲನ್ನು ನಾಗನಹಳ್ಳಿಯಲ್ಲೇ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಲಾಯಿತು. ಈ ರೈಲು ಸಂಚಾರ ರದ್ದುಪಡಿಸಲಾಯಿತು.

ಮಧ್ಯಾಹ್ನ 2.45ಕ್ಕೆ ಬರಬೇಕಿದ್ದ ಅರಸೀಕೆರೆ– ತಾಳಗುಪ್ಪ– ಚಾಮರಾಜನಗರ ರೈಲನ್ನು ಬೆಳಗೊಳದಲ್ಲೇ ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಲಾಯಿತು. ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಸಂಪೂರ್ಣ ವಾಪಸ್ ಮಾಡಲಾಯಿತು. ಆದರೆ, ಈ ಹಂತದಲ್ಲಿ ಹಲವು ಪ್ರಯಾಣಿಕರು ‘ಹಣ ಬೇಡ ರೈಲು ಬೇಕು’ ಎಂದು ಘೋಷಣೆ ಕೂಗಿದರು.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಯಾಣಿಕರನ್ನು ಸಮಾಧಾನಪಡಿಸಿದರು. ಇದೇ ರೀತಿ ಚಾಮರಾಜನಗರದಿಂದ ಬರುತ್ತಿದ್ದ ಚಾಮರಾಜನಗರ, ಶಿವಮೊಗ್ಗ, ತಾಳಗುಪ್ಪ ರೈಲನ್ನು ಅಶೋಕಪುರಂನಲ್ಲೇ ನಿಲ್ಲಿಸಲಾಯಿತು.

ಮೈಸೂರು– ಮೈಲಾಡುದೊರೈ ಎಕ್ಸ್‌ಪ್ರೆಸ್ ರೈಲು, ಮೈಸೂರು– ಗೋಲಗುಂಬಜ್ ರೈಲು ಹಾಗೂ ಚಾಮರಾಜನಗರ– ತಿರುಪತಿ ಫಾಸ್ಟ್‌ ಪ್ಯಾಸೆಂಜರ್ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು.

ದುರಸ್ತಿ ಕಾರ್ಯ ವಿಳಂಬ?: ಹಳಿ ತಪ್ಪಿದ ರೈಲನ್ನು ಮರಳಿ ಹಳಿಯ ಮೇಲೆ ಜೋಡಿಸುವ ಕಾರ್ಯ ಮಂದಗತಿಯಲ್ಲಿ ಸಾಗಿದೆ ಎಂದು ಪ್ರಯಾಣಿಕರು ಆರೋಪಿಸಿದರು. ರಾತ್ರಿ ವೇಳೆಗೆ ದುರಸ್ತಿ ಕಾರ್ಯ ಮುಗಿಯಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.