ADVERTISEMENT

ಹಾವಲ್ಲ, ಕಟ್ಟಿಹಾಕುವ ಹಗ್ಗ: ರಮೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:34 IST
Last Updated 23 ನವೆಂಬರ್ 2017, 19:34 IST
ಚಿತ್ರ: ಪ್ರಕಾಶ್‌ ಶೆಟ್ಟಿ
ಚಿತ್ರ: ಪ್ರಕಾಶ್‌ ಶೆಟ್ಟಿ   

ಬೆಳಗಾವಿ: ‘ಖಾಸಗಿ ಆಸ್ಪತ್ರೆ ನಿಯಂತ್ರಣ (ತಿದ್ದುಪಡಿ) ಮಸೂದೆ ಹಾವಲ್ಲ. ತಪ್ಪು ಮಾಡಿದವರನ್ನು ಕಟ್ಟಿಹಾಕುವ ಹಗ್ಗ ಅಷ್ಟೇ’ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ವ್ಯಾಖ್ಯಾನಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಸಚಿವರು, ‘ಈ ಮಸೂದೆಯನ್ನು ಕೆಲವರು ಹಲ್ಲಿಲ್ಲದ ಹಾವು ಎಂದು ಬಣ್ಣಿಸಿದ್ದಾರೆ. ಹಾವಿನ ಹಲ್ಲನ್ನು ನೋಡಿದವರು ಯಾರು’ ಎಂದು ಪ್ರಶ್ನಿಸಿದರು.

‘ಕುಂದುಕೊರತೆ ಸಮಿತಿಗೆ ಸಿವಿಲ್‌ ನ್ಯಾಯಾಲಯದ ಅಧಿಕಾರ ನೀಡಲಾಗಿದೆ. ಅದರ ಅಧ್ಯಕ್ಷರಾಗುವ ಜಿಲ್ಲಾಧಿಕಾರಿಗಳು ಭಾರತೀಯ ದಂಡ ಸಂಹಿತೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಡಿ ಪ್ರಕರಣಗಳನ್ನು ನಿಭಾಯಿಸುವಷ್ಟು ಸಮರ್ಥರಾಗಿರುವುದಿಲ್ಲ. ಹಾಗಾಗಿ ಈ ಸಮಿತಿಗೆ ಕಾನೂನು ತಜ್ಞರನ್ನು ಸೇರಿಸಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಮಾಹಿತಿ ಕೇಂದ್ರ ತೆರೆಯುವುದನ್ನು ಕಡ್ಡಾಯ ಮಾಡಬೇಕು’ ಎಂದು ವಿ.ಎಸ್‌.ಉಗ್ರಪ್ಪ ಸಲಹೆ ನೀಡಿದರು.

ADVERTISEMENT

‘ಕುಂದು ಕೊರತೆ ಸಮಿತಿಗೆ ಬರುವ ದೂರುಗಳನ್ನು 90 ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂಬ ಕಾಲಮಿತಿಯನ್ನು 30 ದಿನಗಳಿಗೆ ಇಳಿಸಬೇಕು’ ಎಂದೂ  ಅವರು ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ಸಚೇತಕ ಐವನ್‌ ಡಿಸೋಜಾ, ‘ಐಪಿಸಿ ಹಾಗೂ ಸಿಆರ್‌ಪಿಸಿ ಅಡಿ ಪ್ರಕರಣಗಳನ್ನು 90 ದಿನಗಳಲ್ಲಿ ಇತ್ಯರ್ಥಪಡಿಸುವುದು ಕಷ್ಟ’ ಎಂದರು.

‘ಖಾಸಗಿ ಆಸ್ಪತ್ರೆಯವರು ಕುಂದುಕೊರತೆ ಸಮಿತಿ ಮುಂದೆ ವಕೀಲರ ಜೊತೆ ಹಾಜರಾಗಲು ಅವಕಾಶ ಕಲ್ಪಿಸಿದ್ದು ಸರಿಯಲ್ಲ. ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯ ಬಡ ರೋಗಿಗಳಿಗೆ ಇರುವುದಿಲ್ಲ’ ಎಂದರು.

‘ರಾಜ್ಯದ ಒಟ್ಟು ಖಾಸಗಿ ಆಸ್ಪತ್ರೆಗಳ ಪೈಕಿ ಶೇ 50ರಷ್ಟು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಇಲ್ಲಿನ ಜಿಲ್ಲಾಧಿಕಾರಿಗೆ ಕುಂದುಕೊರತೆ ಸಮಿತಿಯ ಹೊಣೆ ವಹಿಸಿದರೆ ಅವರ ಕಾರ್ಯದೊತ್ತಡ ಮತ್ತಷ್ಟು ಹೆಚ್ಚಾಗುತ್ತದೆ. ಈ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ ನಾಲ್ಕು ಸಮಿತಿಗಳನ್ನು ರಚಿಸಿ ಜಿಲ್ಲಾಧಿಕಾರಿಗೆ ಸಮಾನ ದರ್ಜೆಯ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದು ಕಾಂಗ್ರೆಸ್‌ನ ರವಿ ಸಲಹೆ ನೀಡಿದರು.

‘ನಿಯಮ ರೂಪಿಸುವಾಗ ಇದಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.

ಆಸ್ಪತ್ರೆಗಳಿಗೆ ಹಣ ಕಟ್ಟದಿದ್ದರೂ ಹೆಣವನ್ನು ತಕ್ಷಣವೇ ಬಿಟ್ಟುಕೊಡಬೇಕು ಎಂಬ ಅಂಶ ಮಸೂದೆಯಲ್ಲಿದೆ. ಇದರ ಹಿಂದೆ, ‘ಕಾನೂನು ಬದ್ಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ’ ಎಂಬ ಪದವನ್ನು ಸೇರಿಸಬೇಕು ಎಂದು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಸಲಹೆ ನೀಡಿದರು. ಇದಕ್ಕೆ ಸಚಿವರು ಸಮ್ಮತಿಸಿದರು.

‘2007ರ ಕಾಯ್ದೆಯಲ್ಲಿ ನಕಲಿ ವೈದ್ಯರಿಗೆ ಮಾತ್ರ ಜೈಲು ಶಿಕ್ಷೆ ವಿಧಿಸಲು ಅವಕಾಶ ಇತ್ತು. ಅದನ್ನು ಈಗಲೂ ಉಳಿಸಿಕೊಂಡಿದ್ದೇವೆ. ಚಿಕಿತ್ಸೆಯಲ್ಲಿ ಲೋಪವೆಸಗುವ ಅಥವಾ ನಿಗದಿಗಿಂತ ಹೆಚ್ಚು ಶುಲ್ಕ ಪಡೆಯುವ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ನಮ್ಮ ಮುಂದೆ ಇಲ್ಲ. ಈಗಿನ ಮಸೂದೆಯಲ್ಲಿ ಅಂತಹವರಿಗೆ ಜುಲ್ಮಾನೆ ವಿಧಿಸಲು ಮಾತ್ರ ಅವಕಾಶ ಇದೆ’ ಎಂದು ಸ್ಪಷ್ಟಪಡಿಸಿದರು.

ಆಯುಷ್‌ ವೈದ್ಯರ ಸಂಘಟನೆಯವರಿಗೂ ಈ ಸಮಿತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಜೆಡಿಎಸ್‌ನ ರಮೇಶ್‌ ಬಾಬು ಹಾಗೂ ಬಿಜೆಪಿಯ ಗಣೇಶ್‌ ಕಾರ್ಣಿಕ್‌ ಒತ್ತಾಯಿಸಿದರು. ನಿಯಮಗಳನ್ನು ರೂಪಿಸುವಾಗ ಈ ಬಗ್ಗೆ ನಿರ್ದಿಷ್ಟಪಡಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಕೋಳಿ ಎಲ್ಲಿಗೆ ಹೋಯಿತು?
‘ಒಂದು ಊರಲ್ಲಿ ನಾಲ್ಕು ಮನೆಗಳಿವೆ. ಅದರಲ್ಲಿ ಒಂದು ಶೂದ್ರರದು. ಉಳಿದ ಮೂರು ಬ್ರಾಹ್ಮಣರದು. ಒಂದು ದಿನ ಶೂದ್ರರ ಮನೆಯ ಕೋಳಿ ಕಳುವಾಯಿತು. ಅದು ಎಲ್ಲಿಗೆ ಹೊಯಿತು?’

ಸರ್ಕಾರಿ ಆಸ್ಪತ್ರೆಯ ಸ್ಥಿತಿ ಹಾಗೂ ಖಾಸಗಿ ಆಸ್ಪತ್ರೆ ಹಾವಳಿಯನ್ನು ರಮೇಶ್‌ ಕುಮಾರ್‌ ಕಟ್ಟಿಕೊಟ್ಟಿದ್ದು ಹೀಗೆ.

‘ನಾವು ಸರ್ಕಾರಿ ಆಸ್ಪತ್ರೆಗಳಿಗೆ ಸಂಬಳ ಕೊಟ್ಟು ವೈದ್ಯರನ್ನು ನೇಮಿಸಿಕೊಂಡಿದ್ದೇವೆ. ಅವರು ಆಸ್ಪತ್ರೆಯನ್ನೇ ನುಂಗಿ ಬಿಟ್ಟರು’ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

‘ಯಾವ ಜಾಗಕ್ಕೆ ವರ್ಗ ಮಾಡಿಸಿಕೊಳ್ಳಬೇಕೆಂದು ವೈದ್ಯರೇ ನಿರ್ಧರಿಸುತ್ತಾರೆ. ನಾವು ಮಗಳನ್ನು ಕೊಟ್ಟು ಅವರನ್ನು ಅಳಿಯನನ್ನಾಗಿ ಮಾಡಿಕೊಂಡಿದ್ದೇವೆ. ಕಲಿಯಲು ದಡ್ಡನಾದ ಮಗನಿಗೆ ಅಲ್ಲೇ ಪಕ್ಕದಲ್ಲಿ ಔಷಧ ಮಳಿಗೆ ಹಾಕಿಕೊಟ್ಟಿದ್ದೇವೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ನಾವೇ ಇದ್ದೇವೆ. ಖಾಸಗಿ ವೈದ್ಯಕೀಯ ಕಾಲೇಜುಗಳು ನಮ್ಮವೇ. ಅದರ ಸೀಟು ಮಾರುವವರೂ ನಾವೇ. ದುಬಾರಿ ಶುಲ್ಕ ನಿಗದಿ ಪಡಿಸುವವರೂ ನಾವೇ. ವಿದ್ಯಾರ್ಥಿವೇತನ ನೀಡುವವರೂ ನಾವೇ’ ಎಂದು ವ್ಯಂಗ್ಯವಾಗಿ ಹೇಳಿದರು.

’ನರ್ಸ್‌ಗಳಿಗೆ ನೀಡುವುದು ಲಂಚ ಅಲ್ಲ’
‘ಹೆರಿಗೆ ಆಸ್ಪತ್ರೆಗಳಲ್ಲಿ ನರ್ಸ್‌ಗಳಿಗೆ ದುಡ್ಡು ನೀಡದಿದ್ದರೆ ಮಗು ಗಂಡೊ, ಹೆಣ್ಣೋ ಎಂದು ತಿಳಿಸುವುದಿಲ್ಲ’ ಎಂದು ಕಾಂಗ್ರೆಸ್‌ನ ಮೋಟಮ್ಮ ದೂರಿದರು.

‘ಮಗು ಹುಟ್ಟಿದಾಗ ಖುಷಿಯಿಂದ ಉಡುಗೊರೆ ಕೊಡುವ ಪದ್ಧತಿ ರಾಜರ ಕಾಲದಿಂದಲೂ ಬಂದಿದೆ. ನರ್ಸ್‌ಗಳಿಗೆ ಹಣ ನೀಡುವುದನ್ನು ಲಂಚ ಎಂದು ತಿಳಿದುಕೊಳ್ಳಬೇಡಿ. ಈ ವರ್ಗದ ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ’ ಎಂದು ರಮೇಶ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.