ADVERTISEMENT

ಹೊತ್ತಿ ಉರಿಯುತ್ತಿದೆ ಮಳೆಕಾಡು

ಕೃಷಿ ಭೂಮಿ ವಿಸ್ತರಣೆಗೆ ಕಿಡಿಗೇಡಿಗಳ ಕೃತ್ಯ ಶಂಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಕಿಡಿಗೇಡಿಗಳು ಹಾಕಿದ ಬೆಂಕಿಗೆ ಮಳೆ ಕಾಡು ಆಹುತಿಯಾಗಿರುವುದು
ಕಿಡಿಗೇಡಿಗಳು ಹಾಕಿದ ಬೆಂಕಿಗೆ ಮಳೆ ಕಾಡು ಆಹುತಿಯಾಗಿರುವುದು   
ಹೊಸನಗರ: ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಶೋಲಾ (ಮಳೆಕಾಡು) ಅರಣ್ಯವು ಕಿಡಿಗೇಡಿಗಳ ಕೃತ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಬೆಂಕಿಗೆ ಆಹುತಿಯಾಗುತ್ತಿದೆ.
 
ತಾಲ್ಲೂಕಿನ ಗುಳ್ಳೆಕೊಪ್ಪ, ಮುಳುಗುಡ್ಡೆ, ಬಿಳಕಿ, ಕಚ್ಚಿಗೆಬೈಲು, ಮಾವಿನಹೊಳೆ, ಸಂಪೆಕಟ್ಟೆ, ಕೊಡಚಾದ್ರಿ ತಪ್ಪಲಿನ ಮೂಕಾಂಬಿಕಾ ವನ್ಯಜೀವಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಗುರುವಾರ ಹಾಗೂ ಶುಕ್ರವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.
 
ಅಕ್ರಮ- ಸಕ್ರಮ, ಅರಣ್ಯ ಭೂಮಿ ಹಕ್ಕು ಕಾಯ್ದೆಯ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವು ಕೃಷಿಕರು ಕಾಡಿಗೆ ಬೆಂಕಿಯಿಟ್ಟು, ಕೃಷಿ ಭೂಮಿ ಒತ್ತುವರಿಯ ಪ್ರಮಾಣ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ದೂರುತ್ತಾರೆ. ಕಳೆದ 3-–4 ದಿನಗಳಿಂದ ಗಾಳಿ ಹೆಚ್ಚಾಗಿದ್ದ ಕಾರಣ  ಬೆಂಕಿ ಹರಡುವ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. 
 
ರಕ್ಷಿತ ಅರಣ್ಯ ಪ್ರದೇಶದಲ್ಲಿ ಕಟ್ಟೆ (ಕ್ಯಾನ್ಸರ್) ರೋಗ ತಗುಲಿ ಒಣಗಿರುವ ಬಿದಿರು ಮೆಳೆಗೆ ಬೆಂಕಿ ಹಾಕಲಾಗುತ್ತಿದೆ. ಈ ಬೆಂಕಿಯು ತರಗೆಲೆಗಳ ಮೂಲಕ ಕಾಡಿಗೆ ಹಬ್ಬುತ್ತಿದೆ. ಅಗ್ನಿಶಾಮಕ ದಳ ನೆರವಿನಿಂದ ಕಾಡಿನ ರಕ್ಷಣೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಜಯೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
 
ದುರುದ್ದೇಶದಿಂದ ಕಾಡಿಗೆ ಬೆಂಕಿಯಿಡುವ ಪ್ರಕರಣಗಳು ಹೆಚ್ಚಾಗಿದ್ದು, ಅವರ ವಿರುದ್ಧ ಅರಣ್ಯ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
 
**
ಮುಳ್ಯಯ್ಯನಗಿರಿಯಲ್ಲಿ ಬೆಂಕಿ
ಚಿಕ್ಕಮಗಳೂರು: ಚಾರಣಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ ತಪ್ಪಲಿಗೆ ಶನಿವಾರ ಸಂಜೆ ಕಾಳ್ಗಿಚ್ಚು ಹರಡಿದ್ದು, ಅಂದಾಜು 25 ಹೆಕ್ಟೇರ್‌ಗೂ ಹೆಚ್ಚಿನ ಶೋಲಾ ಹುಲ್ಲುಗಾವಲು ಮತ್ತು ಶೋಲಾ ಅರಣ್ಯ ಬೆಂಕಿಗೆ ಆಹುತಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.