ADVERTISEMENT

‘ಕಾವೇರಿ’ಗೆ ಪ್ರವೇಶ ನಿರ್ಬಂಧ ಮಾಜಿ ಶಾಸಕರ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 19:49 IST
Last Updated 25 ಜೂನ್ 2016, 19:49 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಗೆ ಸಚಿವರು, ಶಾಸಕರು ಹಾಗೂ ಸಂಸದರ ಹೊರತು ಉಳಿದವರಿಗೆ ಪ್ರವೇಶ ನಿರ್ಬಂಧಿಸಿ ಸುತ್ತೋಲೆ ಹೊರಡಿಸಲಾಗಿದೆ.

ಮಾಜಿ ಶಾಸಕರಿಗೆ ಪ್ರವೇಶ ನೀಡಲು ಭದ್ರತಾ ಸಿಬ್ಬಂದಿ ನಿರಾಕರಿಸಿದಾಗ ಈ ವಿಷಯ ಬಹಿರಂಗವಾಗಿದೆ. ಮುಖ್ಯಮಂತ್ರಿಗಳ ಧೋರಣೆ ವಿರುದ್ಧ ಆಕ್ರೋಶಗೊಂಡಿರುವ ಕಾಂಗ್ರೆಸ್‌ನ 15ಕ್ಕೂ ಹೆಚ್ಚು ಮಾಜಿ ಶಾಸಕರು ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಭೆ ಸೇರಿ ಚರ್ಚಿಸಿದ್ದಾರೆ.

ಸೋಮವಾರ ಮತ್ತೊಂದುಸುತ್ತಿನ ಸಭೆ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ. ‘ಪ್ರಜಾವಾಣಿ’ ಜತೆ ಮಾತನಾಡಿದ ಮಾಜಿ ಶಾಸಕರಾದ ನೆ.ಲ. ನರೇಂದ್ರ ಬಾಬು ಮತ್ತು  ಸುರೇಶಗೌಡ ಅವರು, ‘ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೋದಾಗ ಪ್ರವೇಶ ನಿರ್ಬಂಧಿಸಿರುವುದು ಗಮನಕ್ಕೆ ಬಂದಿತು.

ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ನಮ್ಮದೇ  ಪಕ್ಷದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ಇಲ್ಲವೆಂದರೆ ಹೇಗೆ? ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ನಮ್ಮ ಪಾತ್ರವೂ ಇದೆ ಎಂಬುದನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಪರ ಮತ ಚಲಾಯಿಸಿದ ಜೆಡಿಎಸ್‌ನ  ಚಲುವರಾಯಸ್ವಾಮಿ, ಕೆ.ಗೋಪಾಲಯ್ಯ ಮತ್ತಿತರಿಗೆ ಸಿಗುವ ಪ್ರವೇಶ ನಮಗೆ ಸಿಗುವುದಿಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಸಭೆ ನಡೆಸಿದ ಸುದ್ದಿ ತಿಳಿದ ತಕ್ಷಣ ಕರೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ’ ಎಂದು ನೆ.ಲ. ನರೇಂದ್ರಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.