ADVERTISEMENT

‘ಬರವಣಿಗೆಗೆ ಬೇಕು ಅನುಭವ, ಭಾಷೆ ತಾಕತ್ತು’

‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ’ ಬಹುಮಾನ ವಿತರಣೆಯಲ್ಲಿ ಗೀತಾ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2013, 19:30 IST
Last Updated 26 ಅಕ್ಟೋಬರ್ 2013, 19:30 IST

ಗುಲ್ಬರ್ಗ: ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ–2013’ರ ಕಥೆ, ಕವನ ಮತ್ತು ಚಿಣ್ಣರ ವರ್ಣಚಿತ್ರ ಸ್ಪರ್ಧೆ ವಿಜೇತರಿಗೆ ಶನಿವಾರ ಇಲ್ಲಿನ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆ ಸಿಸಿ) ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಹಿರಿಯ ಸಾಹಿತಿ ಗೀತಾ ನಾಗಭೂಷಣ ಹಾಗೂ ಕಥೆಗಾರ ಅಮರೇಶ ನುಗಡೋಣಿ ಅವರು ‘ಪ್ರಶಸ್ತಿಪತ್ರ ಮತ್ತು ಬಹುಮಾನ’ ನೀಡಿ ಗೌರವಿಸಿದರು.

ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಮಹಾಂತೇಶ್ ನವಲಕಲ್, ಮೂರನೇ ಬಹುಮಾನ ಪಡೆದ ಟಿ.ಕೆ.ದಯಾನಂದ, ವಿದ್ಯಾರ್ಥಿ ವಿಭಾಗದಿಂದ ಅವಿನಾಶ ಬಡಿಗೇರ, ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಎಂ.ಶಂಕರ, ದ್ವಿತೀಯ ಬಹುಮಾನ ಪಡೆದ ವನರಾಗಶರ್ಮ, ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆದ ಕಾವ್ಯಶ್ರೀ ನಾಯ್ಕ, ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಬಂಡೇಶ ಎನ್.ಗಣೇಕಲ್, ಎಸ್.ಕೀರ್ತಿ, ಅಪೂರ್ವ, ಮೇದಿನಿ ಶೆಟ್ಟಿ ಹಾಗೂ ಪ್ರತೀಕ್ಷಾ ಮರಕಿಣಿ ಹಾಜರಿದ್ದು ಬಹುಮಾನ ಸ್ವೀಕರಿಸಿದರು.

ನಂತರ ಮಾತನಾಡಿದ ಗೀತಾ ನಾಗಭೂಷಣ, ‘ನನ್ನ ಹಾಗೂ ‘ಪ್ರಜಾವಾಣಿ’  ದೋಸ್ತಿ 35 ವರ್ಷಗ ಳಷ್ಟು ಹಳೆಯದು. 80ರ ದಶಕದಲ್ಲಿ ನಾನು ಕವನ ಬರೆಯಲು ಆರಂಭಿಸಿದೆ. ಮೊದಲ ಕವನ ಸುಧಾದಲ್ಲಿ ಪ್ರಕಟವಾಗಿತ್ತು. ಆ ಬಳಿಕ ಮಯೂರದಲ್ಲಿ ಕಾದಂಬರಿ ಪ್ರಕಟವಾಯಿತು’ ಎಂದು ನೆನಪಿಸಿಕೊಂಡರು.

1970ರ ದಶಕಕ್ಕೂ ಮುನ್ನ ಪ್ರಕಟವಾಗುತ್ತಿದ್ದ ಮತ್ತು ಅಜ್ಜಿಯರು ಹೇಳುತ್ತಿದ್ದ ಕಥೆಗಳಲ್ಲಿ ಒಂದು ಊರು, ರಾಜ, ರಾಣಿಯ ಪ್ರಸ್ತಾಪವಿರುತ್ತಿತ್ತು. ಬರೆಯುವ ವರ್ಗವೂ ಆಗ ಶ್ರೀಮಂತವಾಗಿತ್ತು. ಬಡವರು, ದಲಿತರು, ಶೋಷಿತರ ಕಥೆಗಳು 70ರ ದಶಕದ ನಂತರ ಪ್ರಕಟಗೊಳ್ಳಲು ಆರಂಭಿಸಿದವು. ಕೆಳ ವರ್ಗದವರ ನೋವು, ನಲಿವು, ಶೋಷಣೆ, ಬಡತನ ಹಾಗೂ ಹಸಿವುಗಳನ್ನು ಒಳಗೊಂಡ ಕಥೆಗಳ ಲೋಕ ನಂತರದ ದಿನಗಳಲ್ಲಿ ಅನಾವರಣ ಗೊಂಡಿತು ಎಂದು ಹೇಳಿದರು.

‘ಬೀದಿ ಬದಿ ಜನರ ಬದುಕಿನಲ್ಲಿ ಮುಚ್ಚಿಡುವಂತಹದ್ದು ಏನೂ ಇರುವುದಿಲ್ಲ. ಬಡವರ ಬದುಕು ಕಥೆಗಳಲ್ಲಿ ದಾಖಲಾಗಿಲ್ಲ ಎಂಬ ನೋವು ನನ್ನನ್ನು ಆವರಿಸಿತ್ತು. ಅಂತೆಯೇ ಕಥೆಗಳ ಮೂಲಕ ಆ ನೋವುಗಳನ್ನು ದಾಖಲು ಮಾಡುತ್ತ ಹೋದೆ. ಆರಂಭದಲ್ಲಿ ಮಡಿಯುಟ್ಟ ಮನಸ್ಸುಗಳಿಗೆ ನನ್ನ ಕಥೆ, ಕವನಗಳು ಬಿಸಿ ಮುಟ್ಟಿಸುತ್ತಿದ್ದವು’ ಎಂದ ಅವರು, ‘ಬರೆದು ಬರೆದು ದೊಡ್ಡವರಾಗೋಣ, ಬರೆದು ಬರೆದು ಬೆಳೆಯೋಣ. ಗಟ್ಟಿ ಅನುಭವ, ಆಳ ವಿಷಯ ಹಾಗೂ ಭಾಷೆಯನ್ನು ಬಳಸಿಕೊಳ್ಳುವ ತಾಕತ್ತು ಇರುವ ಎಲ್ಲರೂ ಕಥೆ, ಕವನ ರಚಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ ಎಂಬ ಭಾವನೆ ಈ ಭಾಗದ ಜನರಲ್ಲಿ ಇದೆ. ಆದರೆ, ಪ್ರಜಾವಾಣಿ ಬಳಗ ಗುಲ್ಬರ್ಗದಲ್ಲಿ ದೀಪಾವಳಿ ವಿಶೇಷಾಂಕ ಬಹುಮಾನ ವಿತರಣೆ ಸಮಾರಂಭ ಆಯೋಜಿಸುವ ಮೂಲಕ ಎಲ್ಲ ಜಿಲ್ಲೆಗಳ ಮೇಲೂ ಅಷ್ಟೇ ಪ್ರೀತಿ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಹಿಂದುಳಿದವರು ಎಂಬ ಭಾವನೆ ಅಳಿಸಿ ಹಾಕಲು ಇಲ್ಲಿಗೆ ಬಂದಿರುವುದು ನಿಜಕ್ಕೂ ಅಭಿನಂದನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಥೆಗಾರ ಅಮರೇಶ ನುಗಡೋಣಿ ಮಾತನಾಡಿ, ‘ಸಾಮಾಜಿಕ, ರಾಜಕೀಯ ಹಾಗೂ ರಾಜ್ಯ ಎದುರಿ ಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ವಿಶ್ಲೇಷಿಸಿ, ಜನ ರಿಗೆ ಪರಿಹಾರ ಸೂಚಿಸುವ ಮೂಲಕ ಕನ್ನಡಿಗರಲ್ಲಿ ವಿವೇಕ ರೂಪಿಸುವ ಕೆಲಸವನ್ನು ‘ಪ್ರಜಾವಾಣಿ’ ಮಾಡುತ್ತಿದೆ. ಜಾತಿ ಸಂವಾದ ಹಾಗೂ ಅನ್ನದ ಬಟ್ಟಲು ವಿಶೇಷ ಸರಣಿ ಲೇಖನಗಳ ಮೂಲಕ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಿ, ಚಿಂತನೆಗೆ ಹಚ್ಚಿದೆ. ಯುವಕ, ಯುವತಿಯರು ‘ಪ್ರಜಾವಾಣಿ’ ಯನ್ನು ನಿತ್ಯ ಓದಿದರೆ ವಿವೇಕ ಬೆಳೆಸಿಕೊಳ್ಳಬಹುದು’ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯ ನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪಾದಕ ಕೆ.ಎನ್.ಶಾಂತಕುಮಾರ್ ಉಪಸ್ಥಿತರಿದ್ದರು.  ಇದಕ್ಕೂ ಮುನ್ನ  ಗಾಯಕಿ ಮಾಲಾಶ್ರೀ ಕಣವಿ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಉಪ ಸಂಪಾದಕ ರಘುನಾಥ.ಚ.ಹ ನಿರೂಪಿಸಿದರು.

‘ನೌಕರಿ ಕಾಯಂ’ಗೆ ನೆರವಾದ ಬಹುಮಾನ!
‘ಒಪ್ಪತ್ತು ಪಾಠ; ಒಪ್ಪತ್ತು ಊಟ ಎಂಬ 1990ರ ದಿನಗಳಲ್ಲಿ ‘ಪ್ರಜಾವಾಣಿ’  ವಿಶೇಷಾಂಕ ಸ್ಪರ್ಧೆ ಯಲ್ಲಿ ಬರುವ ಬಹುಮಾನ ನಂಬಿಕೊಂಡು ನಾನು ಜೀವನ ಸಾಗಿಸುತ್ತಿದ್ದೆ. ಒಂದು ಸಾರಿಯ ಬಹುಮಾನ 2–3 ತಿಂಗಳು ಊಟ ಹಾಕುತ್ತಿತ್ತು’ ಎಂದು ಕಥೆಗಾರ ಅಮರೇಶ ನುಗಡೋಣಿ  ನುಡಿದರು.

‘1994–95ರಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ನನ್ನ ಕೆಲಸ ಕಾಯಂ ಆಗಬೇಕಾಗಿತ್ತು. ಆ ಎರಡೂ ವರ್ಷ ನನಗೆ ದೀಪಾವಳಿ ವಿಶೇಷಾಂಕ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿತ್ತು. ಹೀಗಾಗಿ, ನೌಕರಿ ಕಾಯಂ ಆಗಲು ಆ ಬಹುಮಾನಗಳೂ ಕಾರಣವಾದವು’ ಎಂದು ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ ತೇಲಿ ಬಂತು.

‘ಕಥೆಗಾರರಿಗೆ ‘ಪ್ರಜಾವಾಣಿ’  ವೇದಿಕೆ ಕಲ್ಪಿಸುವ ಜತೆಗೆ ಬಹುಮಾನ ವಿತರಿಸಿ, ಪ್ರೋತ್ಸಾಹಿಸುತ್ತದೆ. ಬಹುಮಾನ ಪಡೆಯುವವರು 2–3 ಜನರಾದರೂ, 600 ರಿಂದ 800 ಜನರಲ್ಲಿ ಬರವಣಿಗೆಯ ವಿವೇಕ ಜಾಗೃತಗೊಳ್ಳುತ್ತದೆ. ಹೀಗಾಗಿ, ‘ಪ್ರಜಾವಾಣಿ’ ಗೆ ವಿಶೇಷ ಅಭಿನಂದನೆ ಸಲ್ಲಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT