ADVERTISEMENT

‘ಸಹಾಯವಾಣಿ’ ಆರಂಭಿಸಿದ ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:31 IST
Last Updated 2 ಮೇ 2015, 19:31 IST

ಕಲಬುರ್ಗಿ: ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ 24–X7 ಉಚಿತ ಸಹಾಯವಾಣಿ ಆರಂಭಿಸುವ ಮೂಲಕ ಮತದಾರರ ಕುಂದು–ಕೊರತೆ ಆಲಿಸಲು ಮುಂದಾಗಿದ್ದಾರೆ. ಈ ವಿನೂತನ ವ್ಯವಸ್ಥೆಯನ್ನು ಶನಿವಾರದಿಂದ ಆರಂಭಿಸಿದ್ದು, ಇದಕ್ಕೆ ‘ಚಿತ್ತಾಪುರ ಸಹಾಯವಾಣಿ’ ಎಂದು ನಾಮಕರಣ ಮಾಡಿದ್ದಾರೆ.

‘ಪ್ರತಿಯೊಬ್ಬ ನಾಗರಿಕರು ಪಕ್ಷಭೇದ ಮರೆತು ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆ ಹಾಗೂ ದೂರುಗಳಿದ್ದಲ್ಲಿ 1860–425–4040 ಸಂಖ್ಯೆಗೆ ಕರೆ ಮಾಡಬಹುದು. ನಾನು ಅಥವಾ ನಮ್ಮ ಕಚೇರಿಯ ಸಿಬ್ಬಂದಿ ಆದಷ್ಟು ಬೇಗನೆ ದೂರುದಾರರನ್ನು ಸಂಪರ್ಕಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಇದು ದಿನದ 24 ಗಂಟೆ ಕಾರ್ಯ ನಿರ್ವಹಿಸುವುದರಿಂದ ಯಾವಾಗಬೇಕಾದರೂ ಕರೆ ಮಾಡಬಹುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೊದಲು ಶುಭವಾಣಿ (ಸ್ವಾಗತ) ಕೇಳಿ ಬರುತ್ತದೆ. ಬೀಪ್ ಟೋನ್ ಕೇಳಿದ ಬಳಿಕ ಎರಡು ನಿಮಿಷದಲ್ಲಿ ಸಮಸ್ಯೆಯನ್ನು ಹೇಳಬೇಕು. ಅದು ನಮ್ಮ ಕಚೇರಿಯ ಸರ್ವರ್‌ನಲ್ಲಿ ನಮೂದಾಗುತ್ತದೆ. ಆ ಬಳಿಕ ನಾವು ದೂರುದಾರರ ಮೊಬೈಲ್‌ಗೆ ಕರೆ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ದೂರುದಾರರು ಕೊಟ್ಟಿರುವ ಮಾಹಿತಿ ಹಾಗೂ ಸಮಸ್ಯೆಗಳನ್ನು ಗೌಪ್ಯವಾಗಿ ಇಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.