ADVERTISEMENT

‘ಸಾಲು ಮರ ನೆಟ್ಟ ತಿಮ್ಮಕ್ಕನಿಗೆ ಬಿಡಿಗಾಸೂ ಇಲ್ಲ’

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2014, 19:49 IST
Last Updated 18 ಅಕ್ಟೋಬರ್ 2014, 19:49 IST

ಬೆಂಗಳೂರು:
‘ಸೂರ ಗುಡಿಸಿಲಿನೊಳಗ ಊರ ಬೆಳಗಿದ ದೀಪ..
ದಾರವಾದಳು ಹೂಗಳ ಹಾರಕ್ಕ
ಹೆಸರು ಸಾಲುಮರದ ತಿಮ್ಮಕ್ಕ...’
ಎಂದು ಪರಿಸರ ಪ್ರೇಮಿ ಗಾಯಕರು ಹಾಡುತ್ತಿದ್ದರೆ ಇಡೀ ಸಭಾಂಗಣವೇ ಸ್ತಬ್ಧವಾಗಿ ಕೇಳಿಸಿಕೊಳ್ಳುತ್ತಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಈ ಹಾಡು ಗುನುಗುಣಿಸುತ್ತಿದ್ದರೆ,  ಪರಿಸರವಾದಿ ತಿಮ್ಮಕ್ಕ ಸ್ವತಃ ತಲೆದೂಗಿದರು. ಈ ಸಂದರ್ಭದಲ್ಲಿ ತಮ್ಮ ಜೀವನಾನುಭವ, ಪರಿಸರ ಪ್ರೇಮದ ಕುರಿತು ಮಾತನಾಡಿದರು.

‘ಮದುವೆಯಾಗಿ ದಿನಗಳು ಕಳೆಯುತ್ತ ಬಂದರೂ, ಮಕ್ಕಳಾಗುವ ಭಾಗ್ಯ ಕೂಡಿ ಬರಲಿಲ್ಲ. ಹೀಗಾಗಿ, ನಾನು ಮತ್ತು ನನ್ನ ಪತಿ ಮಕ್ಕಳಿಲ್ಲದಿರುವ ಕೊರಗನ್ನು ಗಿಡ ನೆಡುವುದರಲ್ಲಿ  ಮತ್ತು ಪೋಷಿಸುವುದರಲ್ಲಿ ಕಂಡುಕೊಂಡೆವು. ಇದರಲ್ಲಿಯೇ ಜೀವನ ಸಾರ್ಥಕ-ವಾಯಿತು. ಅಂದಿನಿಂದ, ಮರಗಳೇ ಮಕ್ಕಳಾದರು’ ಎಂದು ನುಡಿದರು.

‘ಇಡೀ ಮನೆಯು ಪ್ರಶಸ್ತಿಗಳು,  ಪ್ರಶಸ್ತಿ ಪತ್ರಗಳು, ಪಾರಿತೋಷಕಗಳಿಂದ ತುಂಬಿದೆ. ಆದರೂ, ಬದುಕು ಸವೆಸುವುದು ಇಂದು ದುಸ್ತರವಾಗಿದೆ. ಸಾಲು ಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕನ ಹತ್ತಿರ ಇಂದು ಒಂದು ಬಿಡಿಕಾಸೂ ಇಲ್ಲ’ ಎಂದು ವ್ಯಂಗ್ಯವಾಡಿದರು.
‘ಎಷ್ಟು ಮರಗಳನ್ನು ನೆಟ್ಟಿದ್ದೇವೆ ಎಂದು ಲೆಕ್ಕ ಇಟ್ಟು ನೆಟ್ಟಿಲ್ಲ. ಪಠ್ಯದಲ್ಲಿ ಒಂದು ಕಡೆ 284 ಮರಗಳೆಂದು ಇನ್ನೊಂದು ಕಡೆಯಲ್ಲಿ 484 ಮರಗಳೆಂದು ಹೇಳುತ್ತಾರೆ. ಅಸಲಿ ಎಷ್ಟು ಮರಗಳಿವೆ ಎಂದು ತಿಳಿದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT