ADVERTISEMENT

ಸಾವಿರಕ್ಕೂ ಹೆಚ್ಚು ನಿವೇಶನಕ್ಕೆ ಅಕ್ರಮ ಖಾತೆ!

ಭೂಗಳ್ಳರ ಸ್ವರ್ಗ ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ

ಚಂದ್ರಹಾಸ ಹಿರೇಮಳಲಿ
Published 3 ಜುಲೈ 2018, 20:05 IST
Last Updated 3 ಜುಲೈ 2018, 20:05 IST
ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆ
ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆ   

ಶಿವಮೊಗ್ಗ: ಇಲ್ಲಿಯ ನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಶಾಮೀಲಾಗಿ ಆಶ್ರಯ ಬಡಾವಣೆಯ ಒಂದು ಸಾವಿರಕ್ಕೂ ಹೆಚ್ಚು ನಿವೇಶನಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಡವರು, ಶ್ರಮಿಕರ ಬದುಕಿಗೆ ಆಸರೆಯಾಗಬೇಕಿದ್ದ ನಾಲ್ಕು ಸಾವಿರ ನಿವೇಶನಗಳನ್ನು ಒಳಗೊಂಡ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಭೂಗಳ್ಳರ ಸ್ವರ್ಗವಾಗಿದೆ.

ಜಿಲ್ಲೆಯವರೇ ಆದ ಎಸ್‌. ಬಂಗಾರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಗರದ ವಸತಿರಹಿತರಿಗೆ ನೆಲೆ ಕಲ್ಪಿಸಲು ಜಿಲ್ಲಾ ಕಾರಾಗೃಹದ ಹಿಂಭಾಗದ ಬೊಮ್ಮನಕಟ್ಟೆ ಬಳಿ 120 ಎಕರೆ ಪ್ರದೇಶ ಸ್ವಾಧೀನಪಡಿಸಿಕೊಂಡಿದ್ದರು. ಅವರ ಅವಧಿಯ ನಂತರ ಅಭಿವೃದ್ಧಿ ಪ್ರಕ್ರಿಯೆಗಳು ನಡೆದು1998ರವರೆಗೂ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.

ADVERTISEMENT

ಹಕ್ಕುಪತ್ರ ನೀಡುವಾಗ 20 ವರ್ಷಗಳವರೆಗೆ ಈ ನಿವೇಶನಗಳನ್ನು ಯಾರಿಗೂ ಪರಭಾರೆ ಮಾಡಬಾರದು. ಬಾಡಿಗೆ ನೀಡಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಕೆಲವರು ಮನೆ ಕಟ್ಟಿಕೊಂಡುಅಲ್ಲೇ ನೆಲೆಸಿದರು. ಬಹುತೇಕ ಜನರು ಮನೆ ಕಟ್ಟಿಕೊಳ್ಳದೆ ಖಾಲಿ ಬಿಟ್ಟರು. ಹೀಗೆ ಖಾಲಿ ಬಿಟ್ಟ ನಿವೇಶನಗಳನ್ನು ಹಂಚಿಕೆಯಾದ ಫಲಾನುಭವಿಗಳ ಗಮನಕ್ಕೆ ತಾರದೇ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?:

1998ರಲ್ಲಿ ರೂಪಾರಾಣಿ ಎಂಬುವವರಿಗೆ ಅಂದಿನ ಆಶ್ರಯ ಸಮಿತಿ ನಿವೇಶನ ಹಂಚಿಕೆ ಮಾಡಿತ್ತು.ಕೆಲವು ತಿಂಗಳ ಹಿಂದೆ ಅವರು ಮನೆ ಕಟ್ಟಲು ಆರಂಭಿಸಿದಾಗ ಬೇರೊಬ್ಬರ ಹೆಸರಿಗೆ ಅದೇ ನಿವೇಶನ ಖಾತೆಯಾಗಿರುವುದು ಬೆಳಕಿಗೆ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ ಖಾಲಿ ನಿವೇಶನದ ಫಲಾನುಭವಿಗಳು ಪಾಲಿಕೆ ಕಚೇರಿಗೆ ಎಡತಾಕಿದಾಗ ಬಹುದೊಡ್ಡ ಸಂಖ್ಯೆಯಲ್ಲಿ ಅಕ್ರಮನಡೆದಿರುವುದು ಪತ್ತೆಯಾಗಿತ್ತು.

ಶ್ರೀಮಂತರು, ನೌಕರರಿಗೂ ನಿವೇಶನ:

ಅಕ್ರಮವಾಗಿ ನಿವೇಶನಗಳನ್ನು ಖಾತೆ ಮಾಡಿಕೊಟ್ಟವರ ಪಟ್ಟಿಯಲ್ಲಿ ಶ್ರೀಮಂತರು, ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳೂ ಇದ್ದಾರೆ. ಒಂದೇ ಕುಟುಂಬದಲ್ಲಿ ಪತಿ, ಪತ್ನಿ ಇಬ್ಬರಿಗೂ, ಕೆಲವು ಕುಟುಂಬಗಳಲ್ಲಿ ಐದಾರು ಜನರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ. ರಾಜಕಾರಣಿಗಳು, ಅಧಿಕಾರಿಗಳ ಕುಟುಂಬ ವರ್ಗದವರಿಗೂ ನೀಡಲಾಗಿದೆ. ಒಟ್ಟು 8 ಬ್ಲಾಕ್‌ಗಳಿದ್ದು, ಪತಿಗೆ ಒಂದು ಬ್ಲಾಕ್‌ನಲ್ಲಿ ನಿವೇಶನ ಇದ್ದರೆ, ಪತ್ನಿಗೆ ಮತ್ತೊಂದು ಬ್ಲಾಕ್‌ನಲ್ಲಿ ನಿವೇಶನ ಮಂಜೂರು ಮಾಡಲಾಗಿದೆ.

ಸಹಿಯೂ ನಕಲು: ನಗರ ಪಾಲಿಕೆಯ ಕೆಲವು ಸಿಬ್ಬಂದಿ ಅಧಿಕಾರಿಗಳ ಗಮನಕ್ಕೇ ತಾರದೇ ಅವರ ಸಹಿಗಳನ್ನು ನಕಲು ಮಾಡಿ ಖಾತೆ ಮಾಡಿಕೊಟ್ಟಿದ್ದಾರೆ. ಅಂತರ್ಜಾಲ ಸೇವೆ ಜಾರಿಗೆ ಬಂದ ನಂತರವೂ ಅಧಿಕಾರಿಗಳ ಹೆಸರಿನ ನಕಲಿ ಐಡಿ ಸೃಷ್ಟಿಸಿ, ಖಾತೆಗೆ ಅನುಮೋದನೆ ಪಡೆದಿದ್ದಾರೆ. ಹಳೆಯ ದಾಖಲೆಗಳಲ್ಲಿ ಇದ್ದ ಹೆಸರುಗಳನ್ನು ಅಳಿಸಿ ಹೊಸ ಹೆಸರುಗಳನ್ನು ಸೇರಿಸುತ್ತಾ ಹೋಗಿದ್ದಾರೆ.ಅವಧಿಗೂ ಮುನ್ನವೇ ಕೆಲವು ಫಲಾನುಭವಿಗಳು ಪರಭಾರೆ ಮಾಡಿದ್ದು, ಇಂತಹ ನಿವೇಶನಗಳಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ.

****

ಪಾರ್ಕ್, ಶಾಲಾ ಜಾಗವೂ ಕಬಳಿಕೆ

ಫಲಾನುಭವಿಗಳಿಗೆ ನೀಡಿದ್ದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಜತೆಗೆ ಉದ್ಯಾನ, ಅಂಗನವಾಡಿ, ಶಾಲೆ, ಆಸ್ಪತ್ರೆ, ಸರ್ಕಾರಿ ಕಟ್ಟಡಗಳಿಗೆ ಮೀಸಲಿಟ್ಟದ್ದ ನಿವೇಶನಗಳನ್ನೂ ಖಾತೆ ಮಾಡಿಕೊಡಲಾಗಿದೆ.

ಇತ್ತ ನಿವೇಶನವಾಗಿ ಪರಿವರ್ತಿಸದೇ ನಾಗರಿಕ ಉದ್ದೇಶಗಳಿಗೆ ಮೀಸಲಿಟ್ಟಿದ್ದ ಖಾಲಿ ಜಮೀನನ್ನು ಕೆಲವರು ಒತ್ತುವರಿ ಮಾಡಿ ಖಾಸಗಿ ಲೇಔಟ್ ನಿರ್ಮಿಸಿದ್ದಾರೆ.

****

ದಾಖಲೆ ಸಂಪೂರ್ಣ ಗೆದ್ದಲು ತಿಂದಿವೆ!

ಮಾಹಿತಿ ಹಕ್ಕು ಕಾರ್ಯಕರ್ತರು ಹಗರಣ ಕುರಿತು ನಗರ ಪಾಲಿಕೆಗೆ ಮಾಹಿತಿ ಹಕ್ಕಿನ ಅಡಿ ಅರ್ಜಿ ಸಲ್ಲಿಸಿದ್ದಾರೆ. ಮೊದಲು ದುಬಾರಿ ಶುಲ್ಕ (ಒಂದು ಬ್ಲಾಕ್ ಮಾಹಿತಿಗೆ ₹ 12 ಸಾವಿರ) ಕಟ್ಟುವಂತೆ ನೋಟಿಸ್ ಬಂದಿದೆ. ಹಣ ಕಟ್ಟಿದ ನಂತರ ಬಂದ ನೋಟಿಸ್ ಅರ್ಜಿ ಸಲ್ಲಿಸಿದವರಿಗೇ ದಿಗಿಲು ಹುಟ್ಟಿಸಿದೆ.

‘ನೀವು ಕೇಳಿರುವ ಬಹುತೇಕ ದಾಖಲೆಗಳು ಸಂಪೂರ್ಣ ಗೆದ್ದಲು ತಿಂದಿವೆ. ಕೆಲವು ಭಾಗಶಃ ಹಾನಿಯಾಗಿದ್ದು, ನಕಲು ನೀಡಲು ಯೋಗ್ಯವಾಗಿಲ್ಲ’ ಎಂದು ಅಧಿಕಾರಿಗಳಿಂದ ಪತ್ರ ಬಂದಿದೆ.

****

ಬಡ ಜನರ ಬದುಕಿಗೆ ಆಸರೆಯಾಗಬೇಕಿದ್ದ ಮಹತ್ವದ ಯೋಜನೆ ದುರುಪಯೋಗವಾಗಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೂರುತ್ತೇವೆ.
- ಎಂ. ಗುರುಮೂರ್ತಿ, ಸಂಚಾಲಕ, ದಸಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.