ADVERTISEMENT

ಅಡಿಗರ ನೆಪದಲ್ಲಿ ‘ಬಾಂಬು’ಗಳ ಸುರಿಮಳೆ

ಗಾಂಭೀರ್ಯಕ್ಕೆ ಬಿಡುಗಡೆ ನೀಡಿದ ಅಳುವ ‘ಕಡಲೊಳು ತೇಲಿಬರುತಲಿದೆ’ ಕವಿತೆ

ಚ.ಹ.ರಘುನಾಥ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಅಡಿಗರ ನೆಪದಲ್ಲಿ ‘ಬಾಂಬು’ಗಳ ಸುರಿಮಳೆ
ಅಡಿಗರ ನೆಪದಲ್ಲಿ ‘ಬಾಂಬು’ಗಳ ಸುರಿಮಳೆ   

ಧಾರವಾಡ: ಅನೇಕ ಬಾಂಬುಗಳು ಇಂದು ಈ ವೇದಿಕೆಯಿಂದ ಸಿಡಿಯಲಿವೆ!

ಹೀಗೆಂದು ಹೇಳಿದ್ದು ಕಥೆಗಾರ ಎಸ್‌. ದಿವಾಕರ್‌. ಅವರು ಹೀಗೆ ಹೇಳಲಿಕ್ಕೆ ಕಾರಣ, ಗೋಪಾಲಕೃಷ್ಣ ಅಡಿಗರು ತಯಾರಿಸಿದ ಬಾಂಬು! ಆ ಪ್ರಸಂಗ ಹೀಗಿದೆ:

ಅದು ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭ. ಯುವಗೆಳೆಯರ ಜೊತೆ ಮಾತನಾಡುತ್ತಿದ್ದ ಅಡಿಗರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಒದಗಿದ ದುರ್ದೆಸೆಯ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದರು. ಮಾತು ಮುಗಿದ ನಂತರ ಅಲ್ಲಿಂದ ಮನೆಗೆ ಹೋಗಲು ಆಟೋ ಹತ್ತಿದ ಅವರು, ಸ್ವಲ್ಪ ಹೊತ್ತಿನಲ್ಲೇ ಆಟೋ ಇಳಿದು ಗೆಳೆಯರಿಗೆ ಹೇಳಿದ್ದು – ‘ನಾವೀಗ ಒಂದು ಬಾಂಬು ತಯಾರು ಮಾಡಬೇಕು’. ಅದಾದ ಎರಡು ದಿನಗಳ ನಂತರ ಅವರು ತಮ್ಮ ಕೋಟಿನ ಜೇಬಿನಿಂದ ಗೆಳೆಯರಿಗೆ ತೆಗೆದುಕೊಟ್ಟ ಹಾಳೆಯಲ್ಲಿದ್ದ ಕವನದಲ್ಲಿ ‘ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು / ಬೇಕಾದ್ದು ಬೆಳೆದುಕೋ ಬಂಧು’ ಎನ್ನುವ ಸಾಲುಗಳ ’ನಿನ್ನ ಗದ್ದೆಗೆ ನೀರು’ ಕವಿತೆಯಿತ್ತು. ಅದು ಕವಿಯೊಬ್ಬ ತಯಾರಿಸಬಹುದಾದ ಬಾಂಬು!

ADVERTISEMENT

ಇದು ದಿವಾಕರ್‌ ನೆನಪಿಸಿಕೊಂಡ ಅಡಿಗರ ಬಾಂಬಿನ ಪ್ರಸಂಗ. ಅಡಿಗರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸುವ  ರೂಪದಲ್ಲಿ ‘ಸಾಹಿತ್ಯ ಸಂಭ್ರಮ’ ಅಡಿಗರ ಕವಿತೆಗಳ ಓದನ್ನು ಏರ್ಪಡಿಸಿತ್ತು. ಈ ಗೋಷ್ಠಿ ನಡೆಸಿಕೊಟ್ಟ ದಿವಾಕರ್‌ ತಮ್ಮ ಮಾತುಗಳ ಕೊನೆಯಲ್ಲಿ ಬಾಂಬ್‌ ಸಿಡಿಸಿ, ಸಭಾಂಗಣದಲ್ಲಿ ನಗುವಿನ ಸ್ಫೋಟಕ್ಕೆ ಕಾರಣರಾದರು.

ಅಡಿಗರ ‘ಮನೆ ಇಲ್ಲದವರು’ ಕವಿತೆಯನ್ನು ಓದಿದ ಕವಿ ವೀರಣ್ಣ ಮಡಿವಾಳರ ಅಕ್ಷರಶಃ ವಿಷಾದದ ಬಾಂಬು ಒಗೆದಂತಿತ್ತು. ‘ಫುಟ್‌ಪಾತಿನಲ್ಲಿ ಸಂಸಾರ ಹೂಡಿ ಬೆಳಗಾಗೆದ್ದು, ಗಂಟುಮೂಟೆಗಳನ್ನು ಕಟ್ಟಿ ಗಿಡಗಂಟೆಗಳಲ್ಲಿ ನೇತಾಡುವವರು’ ಎಂದು ಪದಪದಕ್ಕೂ ಜೀವತುಂಬಿ, ಇದು ತನ್ನದೇ ಕವಿತೆಯೇನೋ ಎನ್ನುವಷ್ಟು ತೀವ್ರತೆಯಿಂದ ವೀರಣ್ಣ ಕವಿತೆ ವಾಚಿಸುವಾಗ ಸಭಾಂಗಣ ಮಾತು ಕಳೆದುಕೊಂಡಿತ್ತು.

ನಂತರ ಬಾಂಬು ಒಗೆಯುವ ಸರದಿ ಹಿರಿಯರಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರದು. ಧಾರವಾಡದಲ್ಲಿ ಅಡಿಗರ ಸಮಗ್ರಕಾವ್ಯದ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಿದ್ದನ್ನು ನೆನಪಿಸಿಕೊಂಡ ಅವರು, ’ಅಂಬೇಡ್ಕರ್‌ ಭೀಮರಾಯರಿಗೆ’ ಕವಿತೆ ಓದಿದರು. ಸ್ವತಃ ಮೂರ್ತಿಯಾಗಿ ಕೆತ್ತಿಸಿಕೊಳ್ಳಲು ಒಲ್ಲದವರು ಅಂಬೇಡ್ಕರರನ್ನು ಮೂರ್ತಿಯಾಗಿಸಿ ಕತ್ತಲಲ್ಲಿ ಕೊನೆಯಾಗಿಸುವ ಧ್ವನಿಪೂರ್ಣ ಕವಿತೆ ಪಟ್ಟಣಶೆಟ್ಟರ ದನಿಯಲ್ಲಿ ಹೊಸ ಧ್ವನಿ ಪಡೆದುಕೊಂಡಿತ್ತು.

ಬ್ಯಾಡರಹಳ್ಳಿ ಶಿವರಾಜ್‌ ‘ಅಳುವ ಕಡಲೊಳು ತೇಲಿಬರುತಲಿದೆ’ ಕವಿತೆಯನ್ನು ಹಾಡುವ ಮೂಲಕ ಗೋಷ್ಠಿಯ ಗಾಂಭೀರ್ಯಕ್ಕೊಂದು ಬಿಡುಗಡೆಯ ಉಸಿರು ತಂದುಕೊಟ್ಟರು. ಆದರೆ, ಅದು ಕ್ಷಣಿಕದ ಬಿಡುಗಡೆ. ‘ದಂಗೆ ಏಳುತ್ತಲೇ ಇರಬೇಕಾಗುತ್ತದೆ ಇಲ್ಲಿ ಪ್ರತಿಯೊಬ್ಬರೂ’ ಎಂದು ಬಸು ಬೇವಿನಗಿಡದ ಅಡಿಗರ ಬಾಂಬೊಂದನ್ನು ಸಿಡಿಸಿದರೆ, ಭೈರಮಂಗಲ ರಾಮೇಗೌಡರು ’ಚಿಂತಾಮಣಿಯಲ್ಲಿ ಕಂಡ ಮುಖ’ವನ್ನು ಧಾರವಾಡಕ್ಕೂ ಕರೆತಂದರು.

ಚಿಂತಾಮಣಿಯಲ್ಲಿ ಕಂಡ ಮುಖ ನನ್ನದಲ್ಲ ಎಂದು ತಮಾಷೆ ಮಾಡಿದ ಬಿ.ಆರ್‌. ಲಕ್ಷ್ಮಣರಾವ್‌, ‘ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ’ ಗೀತೆ ಹಾಡಿದರು. ಅದಕ್ಕೂ ಮುನ್ನ ಆನಂದ ಝುಂಜರವಾಡರು ‘ಆನಂದತೀರ್ಥರಿಗೆ’ ಕವಿತೆಯ ಮೂಲಕ ಮಧ್ವಾಚಾರ್ಯರನ್ನು ನೆನಪು ಮಾಡಿದರು.

ಅಡಿಗರು ‘ಪ್ರತಿಮಾ ಮಾರ್ಗ’ದಲ್ಲಿ ಕಟೆದ ಅಪೂರ್ವ ವಾಸ್ತುಶಿಲ್ಪವಾದ ’ಶ್ರೀರಾಮನವಮಿಯ ದಿವಸ’ ಕವಿತೆಯನ್ನು ವಾಚಿಸಿದ್ದು ಎಚ್‌.ಎಸ್‌. ವೆಂಕಟೇಶಮೂರ್ತಿ. ಅವರ ಧ್ವನಿಯಲ್ಲಿ ಮೂಡಿದ ‘ಮತ್ಸ್ಯ ಕೂರ್ಮ ವರಾಹ ಮೆಟ್ಟಿಲುಗಳನ್ನೇರುತ್ತ, ಹುತ್ತಗಟ್ಟಿದ್ದ ಕೈ ಕಡೆದನೋಟ’ದ ಶ್ರೀರಾಮನ ರೂಪಕವನ್ನು ಮುಂದುವರಿಸುವಂತೆ ಚೆನ್ನವೀರ ಕಣವಿಯವರು, ‘ನನ್ನ ಅವತಾರ’ ಕವಿತೆಯನ್ನು ಲಯಬದ್ಧವಾಗಿ ವಾಚಿಸಿದರು. ತೊಂಬತ್ತರ ಚೆಂಬೆಳಕಿನ ಕವಿಯ ಕಂಠದಲ್ಲಿ ಮೂಡಿದ ಕವಿತೆ ಅಡಿಗರನ್ನು ಕೇಳುಗರಿಗೆ ಹೆಚ್ಚು ಸಮೀಪವಾಗಿಸುವಂತಿತ್ತು.

ದಿವಾಕರ್‌ ’ಸಾಮಾನ್ಯನಂತೆ ಈ ನಾನು’ ಕವಿತೆಯನ್ನು ವಾಚಿಸಿದರೆ, ಸಹೃದಯರ ಕಾವ್ಯಪ್ರೀತಿಯನ್ನು ಪರೀಕ್ಷಿಸುವಂತೆ ತಮಿಳ್‌ ಸೆಲ್ವಿ ಅವರು ‘ಭೂಮಿಗೀತ’ ಸುದೀರ್ಘ ಕವಿತೆಯನ್ನು ಸಾವಧಾನವಾಗಿ ಓದಿದರು.

ಅಡಿಗರ ಬಾಂಬ್‌ ರೂಪದ ಕವಿತೆಯಾದ ‘ನಿನ್ನ ಗದ್ದೆಗೆ ನೀರು’ ಕವಿತೆಯನ್ನು ಪ್ರೀತಿ ನಾಗರಾಜ ವಾಚಿಸಿದರು. ನಂತರದ್ದು ಗೀತಾ ಆಲೂರರ ‘ಸಂಕ್ರಾಂತಿ’ ಗಾಯನ. ಶಶಿಧರ ತೋಡಕರ್‌ ‘ಏನಾದರು ಮಾಡುತಿರು ತಮ್ಮ’ ಕವಿತೆಯನ್ನು ವಾಚಿಸುವ ಮೂಲಕ ‘ಅಡಿಗರ ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗಳು’ ಗೋಷ್ಠಿ ಕೊನೆಗೊಂಡಿತು.

ಸುಮಾರು ಎರಡು ತಾಸುಗಳ ಗೋಷ್ಠಿ ಸುದೀರ್ಘವೆನಿಸಿ ಸಂಘಟಕರನ್ನು ಪೇಚಿಗೆ ಸಿಲುಕಿಸಿದರೂ, ಪರಿಣಾಮದ ದೃಷ್ಟಿಯಿಂದ ಮಹತ್ವದ್ದಾಗಿತ್ತು. ಬಿ.ಆರ್. ಲಕ್ಷ್ಮಣರಾವ್‌ ಹಾಡಿದ ಕವಿತೆಯ ‘ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ, ತೊಳೆದೀತು ಒಳಗು ಹೊರಗ’ ಅನುಭವ ಸಹೃದಯರದಾಗಿತ್ತು.

* ಇಪ್ಪತ್ತನೇ ಶತಮಾನದಲ್ಲಿ ನನಗೆ ಕಾವ್ಯದ ಗುರು ಯಾರಾದರೂ ಇದ್ದರೆ ಅದು ಬೇಂದ್ರೆ ಮಾತ್ರ ಎಂದು ಅಡಿಗರು ಹೇಳುತ್ತಿದ್ದರು. ಅಂಥ ಬೇಂದ್ರೆಯ ಊರು ಧಾರವಾಡದಲ್ಲಿ ನಡೆದ ಅಡಿಗರ ಕವಿತೆಗಳ ಓದು ಕವಿಯ ಶತಮಾನೋತ್ಸವಕ್ಕೆ ಸಂದ ಅರ್ಥಪೂರ್ಣ ಗೌರವ.
–ಎಸ್. ದಿವಾಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.