ADVERTISEMENT

ನೋಟು ರದ್ದತಿ ಸಂದರ್ಭ ಕುಸಿದಿದ್ದ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತೆ ಲಯಕ್ಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 1:44 IST
Last Updated 23 ಆಗಸ್ಟ್ 2018, 1:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನೋಟು ರದ್ದತಿ ಸಮಯದಲ್ಲಿ ರಾಜಧಾನಿಯಲ್ಲಿ ಪ್ರಪಾತಕ್ಕೆ ಕುಸಿದಿದ್ದ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತೆ ಲಯಕ್ಕೆ ಮರಳಿದೆ.

2016ರ ನವೆಂಬರ್‌ನಲ್ಲಿ ಭಾರಿ ಮುಖಬೆಲೆಯ ನೋಟು ರದ್ದು ಮಾಡಿದ್ದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆ, ನಗರ ಮತ್ತು ಪಟ್ಟಣಗಳಲ್ಲಿ ಭೂಮಿ, ನಿವೇಶನ, ಫ್ಲಾಟ್ ಖರೀದಿ ಮತ್ತು ಮಾರಾಟ ಬಹುತೇಕ ಸ್ಥಗಿತಗೊಂಡಿತ್ತು.

2016–17ರಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ರೂಪದಲ್ಲಿ ₹9,100 ಕೋಟಿ ತೆರಿಗೆ ಸಂಗ್ರಹ ಗುರಿ ಇತ್ತು. ತಿಂಗಳಿಗೆ ಸರಾಸರಿ ₹758 ಕೋಟಿ ಸಂಗ್ರಹವಾಗಬೇಕಿತ್ತು. ನೋಟು ರದ್ದತಿ ಬಳಿಕ ತೆರಿಗೆ ಸಂಗ್ರಹದಲ್ಲಿ ತಿಂಗಳ ಸರಾಸರಿ ₹150 ಕೋಟಿ ಇಳಿಕೆಯಾಗಿತ್ತು. ಆ ವರ್ಷ ಇಲಾಖೆಯ ಆದಾಯ ₹1,350 ಕೋಟಿ ರಾಜಸ್ವ ಖೋತಾ ಉಂಟಾಗಿತ್ತು.

ADVERTISEMENT

2017-18ರ ಆರಂಭದಲ್ಲಿ ಮಂದಗತಿಯಲ್ಲಿತ್ತು. ಬಳಿಕ ಚೇತರಿಸಿಕೊಂಡಿತ್ತು. ಕಳೆದ ವರ್ಷ ₹9 ಸಾವಿರ ಕೋಟಿ ರಾಜಸ್ವ ನಿರೀಕ್ಷಿಸಲಾಗಿತ್ತು. ಪ್ರತಿಯಾಗಿ ₹9,041 ಕೋಟಿ ಸಂಗ್ರಹವಾಗಿತ್ತು. ರಾಜಧಾನಿಯ 5 ಜಿಲ್ಲಾ ನೋಂದಣಾಧಿಕಾರಿ ಕಚೇರಿಗಳ ರಾಜಸ್ವ ಸಂಗ್ರಹ ಮೊತ್ತ ₹6,383 ಕೋಟಿ ಮೊತ್ತ ಆಗಿತ್ತು.

‘2013ರಿಂದ 2016ರ ವರೆಗೆ ನಾಲ್ಕು ಸಲ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿತ್ತು. ರಾಜಸ್ವ ಸಂಗ್ರಹದಲ್ಲಿ ಗುರಿ ತಲುಪಿದ್ದೆವು. ನೋಟು ರದ್ದತಿಯಿಂದಾಗಿ ಆದಾಯದಲ್ಲಿ ಖೋತಾ ಉಂಟಾಗಿತ್ತು. ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಈ ವರ್ಷ ಮೂರು ತಿಂಗಳಲ್ಲೇ ರಾಜಧಾನಿಯಲ್ಲಿ ₹2,071 ಕೋಟಿ ರಾಜಸ್ವ ಇಲಾಖೆಗೆ ಜಮೆಯಾಗಿದೆ. ಆ ಆರ್ಥಿಕ ವರ್ಷದಲ್ಲಿ ₹10,500 ಕೋಟಿಯ ನಿರೀಕ್ಷೆಯಲ್ಲಿ ದ್ದೇವೆ. ಅದಕ್ಕಿಂತ ಹೆಚ್ಚು ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.