ADVERTISEMENT

ಅನುದಾನಿತ ಶಾಲೆಗಳಿಗೆ ಷರತ್ತು ಸುತ್ತೋಲೆ ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:39 IST
Last Updated 6 ಜುಲೈ 2018, 19:39 IST

ಬೆಂಗಳೂರು: ಅನುದಾನಿತ ಶಾಲೆಯ ಫಲಿತಾಂಶವು ಕಳೆದ ಐದು ಶೈಕ್ಷಣಿಕ ವರ್ಷಗಳ ಸರಾಸರಿ ಫಲಿತಾಂಶಕ್ಕಿಂತ ಉತ್ತಮವಾಗಿರಬೇಕು ಎಂದು ಶಿಕ್ಷಣ ಇಲಾಖೆ ವಿಧಿಸಿರುವ ಷರತ್ತನ್ನು ಹಿಂಪಡೆಯಬೇಕು ಎಂದು ಸದಸ್ಯರು ಪಕ್ಷ ಭೇದ ಮರೆತು ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಆಗ್ರಹಿಸಿದರು.

ಬಿಜೆಪಿಯ ಎಸ್‌.ವಿ.ಸಂಕನೂರ ವಿಷಯ ಪ್ರಸ್ತಾಪಿಸಿ, ‘ಈ ಸುತ್ತೋಲೆ ಅವೈಜ್ಞಾನಿಕವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕಾಲೇಜುಗಳ ಫಲಿತಾಂಶ ಶೇ 80ಕ್ಕಿಂತ ಹೆಚ್ಚು ಇರುತ್ತದೆ. ಯಾದಗಿರಿ ಜಿಲ್ಲೆಯ ಫಲಿತಾಂಶ ಶೇ 50ರ ಆಸುಪಾಸಿನಲ್ಲಿ ಇರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಶೇ 81 ಫಲಿತಾಂಶ ಪಡೆದರೆ ಮಾತ್ರ ಅನುದಾನ ನೀಡಲಾಗುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ಶೇ 51 ಫಲಿತಾಂಶ ಪಡೆದರೂ ಅನುದಾನ ಸಿಗುತ್ತದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು. ‘ಅನೇಕ ಸರ್ಕಾರಿ ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದೂ ಆಕ್ಷೇಪಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌, ‘ಈ ಷರತ್ತು ಸಮಂಜಸವಾಗಿದೆ. ಇದರಿಂದ ಪ್ರತಿಯೊಂದು ಅನುದಾನಿತ ಪ್ರೌಢಶಾಲೆಯ ಶೈಕ್ಷಣಿಕ ಪ್ರಗತಿ ಉತ್ತಮವಾಗಿ ಸರ್ಕಾರದ ಅನುದಾನದ ಉದ್ದೇಶ ಈಡೇರಿದಂತಾಗುತ್ತದೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ, ‘ಐಎಎಸ್‌ ಅಧಿಕಾರಿಗಳಿಗೆ ಪ್ರಾಯೋಗಿಕ ಜ್ಞಾನ ಇಲ್ಲ. ಯಾವುದೇ ಚರ್ಚೆ ನಡೆಸದೆ ಈ ಸುತ್ತೋಲೆ ಹೊರಡಿಸಲಾಗಿದೆ. ಶಿಕ್ಷಕರನ್ನೇ ನೇಮಿಸದೆ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಹೇಳುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು. ಸುತ್ತೋಲೆ ವಾಪಸ್‌ ಪಡೆಯಬೇಕು ಎಂದು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.

ಎನ್‌.ಮಹೇಶ್‌ ಪ್ರತಿಕ್ರಿಯಿಸಿ, ‘ಸುತ್ತೋಲೆ ಹೊರಡಿಸುವ ಮುನ್ನ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯಬೇಕಿತ್ತು. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದರು.

ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ‘ಇದೊಂದು ಅವೈಜ್ಞಾನಿಕ ಸುತ್ತೋಲೆ. ಇದನ್ನು ವಾ‍ಪಸ್‌ ‍ಪಡೆಯಬೇಕು. ಈ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.