ADVERTISEMENT

ಅಧ್ಯಕ್ಷತೆಗೆ ಇಂದು ಮತದಾನ

ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗೆ * ಇಮೇಲ್‌ ಆರೋಪ–ಹಿಲರಿ ದೋಷಮುಕ್ತ

ಪಿಟಿಐ
Published 7 ನವೆಂಬರ್ 2016, 19:30 IST
Last Updated 7 ನವೆಂಬರ್ 2016, 19:30 IST
ಸೈಬೀರಿಯಾದ ಮೃಗಾಲಯವೊಂದರಲ್ಲಿರುವ ಫೆಲಿಕ್ಸ್‌ ಎಂಬ ಹಿಮಕರಡಿ ಅಮೆರಿ ಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಭವಿಷ್ಯ ನುಡಿಯುವ ಸಂದರ್ಭದಲ್ಲಿ ಟ್ರಂಪ್‌ ಅವರ ಹೆಸರಿನ ಕಾರ್ಡನ್ನು ಎತ್ತಿ ಹಿಡಿಯಿತು. - ರಾಯಿಟರ್ಸ್‌ ಚಿತ್ರ
ಸೈಬೀರಿಯಾದ ಮೃಗಾಲಯವೊಂದರಲ್ಲಿರುವ ಫೆಲಿಕ್ಸ್‌ ಎಂಬ ಹಿಮಕರಡಿ ಅಮೆರಿ ಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಭವಿಷ್ಯ ನುಡಿಯುವ ಸಂದರ್ಭದಲ್ಲಿ ಟ್ರಂಪ್‌ ಅವರ ಹೆಸರಿನ ಕಾರ್ಡನ್ನು ಎತ್ತಿ ಹಿಡಿಯಿತು. - ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್‌: ಇಡೀ ವಿಶ್ವವೇ ಕುತೂಹಲದಿಂದ ನಿರೀಕ್ಷಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ ಮತದಾನ ನಡೆಯಲಿದೆ.

ಕಣದಲ್ಲಿರುವ ಡೆಮಾಕ್ರಟಿಕ್‌ ಪಕ್ಷದ  ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಮತ್ತು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ನಡುವೆ ತೀವ್ರ ಸ್ಪರ್ಧೆ ಇದೆ. ಇವರಲ್ಲಿ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಯಾರು ಎಂಬುದು  ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಈ ಚುನಾವಣೆ 48ನೇ ಉಪಾಧ್ಯಕ್ಷರನ್ನೂ ಆಯ್ಕೆ ಮಾಡಲಿದೆ. ಉಪಾಧ್ಯಕ್ಷ ಹುದ್ದೆಗೆ ರಿಪಬ್ಲಿಕನ್ ಪಕ್ಷದಿಂದ ಮೈಕ್‌ ಪೆನ್ಸ್ ಹಾಗೂ ಡೆಮಾಕ್ರಟಿಕ್‌ ಪಕ್ಷದಿಂದ ಟಿಮ್‌   ಕೇನ್‌ ಕಣದಲ್ಲಿದ್ದಾರೆ.

ADVERTISEMENT

ನ್ಯೂಯಾರ್ಕ್‌ನಲ್ಲಿ ಮಂಗಳವಾರ ಬೆಳಿಗ್ಗೆ 6ರಿಂದ 7 ಗಂಟೆ ಒಳಗೆ ಮತದಾನ ಆರಂಭವಾಗಲಿದೆ. (ಭಾರತೀಯ ಕಾಲಮಾನ ಮಂಗಳವಾರ ಸಂಜೆ 4.30 ರಿಂದ 5.30). ಎರಡು ರಾಜ್ಯಗಳಲ್ಲಿ  ಮಾತ್ರ ರಾತ್ರಿ 9 ಗಂಟೆವರೆಗೂ ಮತದಾನ (ಅಲ್ಲಿನ ಕಾಲಮಾನ) ಮುಂದುವರಿ ಯಲಿದೆ. ಅಂದಾಜು 12 ಕೋಟಿ ಜನರು ಮತ ಚಲಾಯಿಸುವ ನಿರೀಕ್ಷೆ ಇದೆ.

ಹಿಲರಿ ದೋಷಮುಕ್ತ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಖಾಸಗಿ ಇ– ಮೇಲ್‌  ಬಳಕೆ ಮಾಡಿದ ಆರೋಪ ಎದುರಿಸುತ್ತಿದ್ದ  ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಅವರನ್ನು ಎಫ್‌ಬಿಐ ಸೋಮವಾರ ದೋಷಮುಕ್ತಗೊಳಿಸಿದೆ. 

ಇದರಿಂದ ಅಧ್ಯಕ್ಷೀಯ ಚುನಾವಣೆಗೆ  ಒಂದು ದಿನ ಬಾಕಿ ಇರುವಾಗ  ಹಿಲರಿ ಅವರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಎಫ್‌ಬಿಐಯ ಈ ಕ್ರಮವನ್ನು ಟ್ರಂಪ್‌ ಟೀಕಿಸಿದ್ದಾರೆ. ‘ಅಕ್ರಮ ವ್ಯವಸ್ಥೆ’ ಹಿಲರಿ ಅವರನ್ನು ರಕ್ಷಿಸಿದೆ. ಆದರೆ ಅಷ್ಟು ಸುಲಭವಾಗಿ ಅವರು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ಜನರು ಸರಿಯಾದ ತೀರ್ಪು ನೀಡಲಿದ್ದಾರೆ ಎಂದು ಟ್ರಂಪ್‌ ಮಾರ್ಮಿಕವಾಗಿ ಹೇಳಿದ್ದಾರೆ.

‘ಹೊಸ ಇ–ಮೇಲ್‌ಗಳನ್ನು ಪರಿಶೀಲಿ ಸಲಾಗಿದೆ. ಹಿಲರಿ ಮೇಲಿನ ಆರೋಪ ದಲ್ಲಿ ಹುರುಳಿಲ್ಲ ಎಂದು ಸಾಬೀತಾಗಿದೆ’ ಎಂದು ಎಫ್‌ಬಿಐ  ಸ್ಪಷ್ಟಪಡಿಸಿದೆ.

ಹಿಲರಿಗೆ ಮುನ್ನಡೆ
ಮತದಾನಕ್ಕೆ ಮುನ್ನಾದಿನ ‘ಸಿಬಿಎಸ್‌ ನ್ಯೂಸ್‌’ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ ಅವರು ಟ್ರಂಪ್‌ ಅವರಿಗಿಂತ ಶೇ ನಾಲ್ಕರಷ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ. ಹಿಲರಿ ಅವರಿಗೆ ಶೇ.45 ಮತ್ತು ಟ್ರಂಪ್‌ ಅವರಿಗೆ ಶೇ.41ರಷ್ಟು ಮತಗಳು ಬಂದಿವೆ.

ಕಳೆದ ವಾರದ ಸಮೀಕ್ಷೆಯ ಲ್ಲಿಯೂ ಹಿಲರಿ ಅವರಿಗೆ ಮುನ್ನಡೆ ಇತ್ತು. ಪದವಿಗಿಂತ ಕಡಿಮೆ ವಿದ್ಯಾ ಭ್ಯಾಸದ ಬಿಳಿಯರು ಮತ್ತು ಹಿರಿಯ ನಾಗರಿಕರು ಟ್ರಂಪ್‌ ಪರವಾಗಿದ್ದಾರೆ. ಮಹಿಳೆಯರು, ಆಫ್ರಿಕಾ–ಅಮೆರಿಕ ನ್ನರು ಮತ್ತು ಯುವ ಜನರ ಬೆಂಬಲ ಹಿಲರಿಗೆ ಅವರಿಗೆ ಹೆಚ್ಚಾಗಿದೆ ಎಂದು ಸಿಬಿಎಸ್‌ ನ್ಯೂಸ್‌ ಹೇಳಿದೆ.

ಮುಖ್ಯಾಂಶಗಳು

* ಮಂಗಳವಾರ ಬೆಳಗ್ಗೆ ಮತದಾನ ಆರಂಭ (ಭಾರತೀಯ ಕಾಲಮಾನ ಮಂಗಳವಾರ ಸಂಜೆ 4.30ರ ನಂತರ)
* ಒಟ್ಟು ಮತದಾರರ ಸಂಖ್ಯೆ 20 ಕೋಟಿಗೂ ಹೆಚ್ಚು; 12 ಕೋಟಿ ಜನರಿಂದ ಮತದಾನ ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.