ADVERTISEMENT

ಅಮೆರಿಕ ನಿರ್ನಾಮ ಮಾಡುತ್ತೇವೆ: ಉತ್ತರ ಕೊರಿಯಾ ಅಧಿಕೃತ ಪತ್ರಿಕೆ ಎಚ್ಚರಿಕೆ

ಏಜೆನ್ಸೀಸ್
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಸೋಲ್: ಒಂದು ವೇಳೆ ಅಮೆರಿಕವು ಯುದ್ಧಕ್ಕೆ ಮುಂದಾದರೆ, ಅದನ್ನು ನಿರ್ನಾಮ ಮಾಡುತ್ತೇವೆ ಎಂದು ಉತ್ತರ ಕೊರಿಯಾ ಕಠಿಣ ಎಚ್ಚರಿಕೆ ನೀಡಿದೆ.

ಉತ್ತರ ಕೊರಿಯಾದ ಆಡಳಿತಾರೂಢ ಪಕ್ಷದ ಮುಖವಾಣಿ ‘ರೊಡೊಂಗ್ ಸಿನ್ಮನ್’ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಈ ಸಂಬಂಧ ಸರಣಿ ಸಂಪಾದಕೀಯ ಪ್ರಕಟಿಸಲಾಗಿದೆ.

‘ಅಮೆರಿಕದ ಯುದ್ಧವಿಮಾನ ವಾಹಕ ನೌಕೆ ಕಾರ್ಲ್ ವಿನ್ಸನ್ ಕೊರಿಯಾ, ಪರ್ಯಾಯ ದ್ವೀಪದ ಸಮೀಪಕ್ಕೆ ಬರಲಿದೆ’ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಶನಿವಾರವಷ್ಟೇ ಹೇಳಿದ್ದರು. ಉತ್ತರ ಕೊರಿಯಾವು ಆರನೇ ಬಾರಿಗೆ ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ ನಡೆಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಇದು  ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.

ADVERTISEMENT

‘ಉತ್ತರ ಕೊರಿಯಾದ ಸೇನಾಪಡೆ ಸನ್ನದ್ಧವಾಗಿದೆ. ಅಮೆರಿಕ ತನ್ನ ನೌಕೆಯನ್ನು ಕಳುಹಿಸುವ ಮೂಲಕ ಸೇನಾ ಬೆದರಿಕೆ ಒಡ್ಡುತ್ತಿದೆ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ. ‘ಇಂತಹ ಬೆದರಿಕೆಗಳು ಜೆಲ್ಲಿಫಿಶ್‌ಗೆ ಹೆದರಿಕೆ ಹುಟ್ಟಿಸಬಹುದು, ಆದರೆ ಉತ್ತರ ಕೊರಿಯಾವನ್ನಲ್ಲ’ ಎಂದು ಪತ್ರಿಕೆ ಹೇಳಿದೆ.

ಉತ್ತರ ಕೊರಿಯಾದ ಪ್ರಬಲ ಸೇನೆಯು, ಅಮೆರಿಕದ ಅಣ್ವಸ್ತ್ರ ಸಜ್ಜಿತ ಯುದ್ಧನೌಕೆಯನ್ನು ಕೇವಲ ಒಂದೇ ಏಟಿಗೆ  ಸಮುದ್ರದಲ್ಲಿ ಮುಳುಗಿಸುವ ಸಾಮರ್ಥ್ಯ ಹೊಂದಿದೆ ಎಂದು  ಪತ್ರಿಕೆ ಭಾನುವಾರ ಹೇಳಿತ್ತು.

ಇನ್ನೊಂದೆಡೆ, ಅಮೆರಿಕವು ಯುದ್ಧನೌಕೆಯನ್ನು ಕಳುಹಿಸುತ್ತಿರುವುದು ಯುದ್ಧ ಆರಂಭದ ಸೂಚನೆ ಎಂದು ಉರಿಮಿನಝೊಕ್ಕಿರಿ ಎಂಬ ಮತ್ತೊಂದು ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. ‘ಉತ್ತರ ಕೊರಿಯಾವು ಆಕ್ರಮಣ ನಡೆಸುವ ದಿನ ಹತ್ತಿರ ಬರುತ್ತಿದೆ.

ಅಮೆರಿಕವು ಉತ್ತರ ಕೊರಿಯಾವನ್ನು ಸಿರಿಯಾದ ಜೊತೆ ಹೋಲಿಸಿ ತಪ್ಪು ಲೆಕ್ಕಾಚಾರ ಹಾಕುತ್ತಿದೆ. ಅದರ ಯುದ್ಧನೌಕೆಯು ಸಮುದ್ರದಲ್ಲಿ ಉರಿದು ಉಕ್ಕಿನ ಅಸ್ತಿಪಂಜರವಾಗಲಿದೆ’ ಎಂದು ಸೇನಾಧಿಕಾರಿಯೊಬ್ಬರು ಬರೆದಿರುವ ಲೇಖನದಲ್ಲಿ ಎಚ್ಚರಿಸಲಾಗಿದೆ.

ಶಸ್ತ್ರಾಸ್ತ್ರ ಹೊಂದುವ ಹಾಗೂ ಸೇನಾ ದಾಳಿ ನಡೆಸುವ ಉತ್ತರ ಕೊರಿಯಾದ ಬಯಕೆಯನ್ನು ಹತ್ತಿಕ್ಕುವ ಎಲ್ಲ ಅವಕಾಶಗಳೂ ಇವೆ ಎಂದು ಅಮೆರಿಕ ಎಚ್ಚರಿಸುತ್ತಲೇ ಬಂದಿದೆ.

ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿ ವ್ಯವಸ್ಥೆ ನಿರ್ಮಿಸಲು ಉತ್ತರ ಕೊರಿಯಾಗೆ ಇನ್ನೂ ಸಾಧ್ಯವಾಗಿಲ್ಲ. ಆದರೂ ಇದೇ ತಿಂಗಳಲ್ಲಿ ಎರಡು ಕ್ಷಿಪಣಿಗಳನ್ನು ಅದು ಪರೀಕ್ಷೆಗೊಳಪಡಿಸಿತ್ತು.

ಅಮೆರಿಕ ನಾಗರಿಕನ ಬಂಧನ: ಬಿಕ್ಕಟ್ಟು ಉಲ್ಬಣ
ಪಿಂಗ್‌ಯಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ  ಕಿಮ್ ಸಂಗ್–ಡಕ್ ಅವರನ್ನು  ಉತ್ತರ ಕೊರಿಯಾದಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ವಿಶ್ವವಿದ್ಯಾಲಯ ಖಚಿತಪಡಿಸಿದೆ. ಈ ಮೂಲಕ ಅಮೆರಿಕದ ಮೂರನೇ ವ್ಯಕ್ತಿ ಇಲ್ಲಿ ಸೆರೆಯಾಗಿದ್ದಾರೆ. ಇದರಿಂದ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.

ಕಿಮ್ ಅವರ ಬಂಧನಕ್ಕೆ ನಿಖರ ಕಾರಣ ತಿಳಿದಿಲ್ಲ ಎಂದು  ವಿಶ್ವವಿದ್ಯಾಲಯ ತಿಳಿಸಿದೆ. ಉತ್ತರ ಕೊರಿಯಾ ಜತೆ ಅಮೆರಿಕ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿರದ ಕಾರಣ ಸ್ವೀಡನ್ ರಾಯಭಾರ ಕಚೇರಿಯು ಅಮೆರಿಕ ನಾಗರಿಕರಿಗೆ ಸಂಬಂಧಿಸಿದ ವಿಷಯವನ್ನು ನಿರ್ವಹಿಸುತ್ತಿದೆ.

ಸಂಯಮ ಕಾಯ್ದುಕೊಳ್ಳಿ: ಚೀನಾ ಆಗ್ರಹ
(ಬೀಜಿಂಗ್ ವರದಿ):
ಉತ್ತರ ಕೊರಿಯಾ ವಿಚಾರದಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಗ್ರಹಿಸಿದ್ದಾರೆ.

ಅಮೆರಿಕ ತನ್ನ ಯುದ್ಧನೌಕೆಯನ್ನು ಕೊರಿಯಾ ಪರ್ಯಾಯ ದ್ವೀಪಕ್ಕೆ ರವಾನಿಸುತ್ತಿರುವುದು ಇನ್ನಷ್ಟು ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಚೀನಾ ಹೇಳಿದೆ.
ಚೀನಾದ ಆಪ್ತ ರಾಷ್ಟ್ರ ಎನಿಸಿರುವ ಉತ್ತರ ಕೊರಿಯಾವು ಪರಮಾಣು ಪರೀಕ್ಷೆ ನಡೆಸದಂತೆ ತಡೆಯಬೇಕು ಎಂದು ಅಮೆರಿಕ ಪದೇ ಪದೇ ಆಗ್ರಹಿಸುತ್ತಾ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.