ADVERTISEMENT

ಅರಾಜಕತೆಯತ್ತ ಪಾಕ್‌

ಸಂಧಾನಕ್ಕೆ ನಕಾರ: ದೇಶವ್ಯಾಪಿ ಪ್ರತಿಭಟನೆಗೆ ಇಮ್ರಾನ್ ಕರೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2014, 19:30 IST
Last Updated 21 ಆಗಸ್ಟ್ 2014, 19:30 IST

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನ­ದಲ್ಲಿ ರಾಜಕೀಯ ಬಿಕ್ಕಟ್ಟು ಗುರುವಾರ ಮತ್ತಷ್ಟು ಉಲ್ಬಣಿಸಿದೆ. ದೇಶ ಅರಾಜಕತೆಯತ್ತ ಸಾಗುವ ಲಕ್ಷಣಗಳು ಕಂಡುಬರುತ್ತಿವೆ.

ಪ್ರತಿಪಕ್ಷ ನಾಯಕ ಇಮ್ರಾನ್‌ ಖಾನ್‌ ಅವರು ಪ್ರಧಾನಿ ಷರೀಫ್‌ ವಿರುದ್ಧದ ತಮ್ಮ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿದ್ದು ಮಾತುಕತೆಯಿಂದ ಹಿಂದೆ ಸರಿದಿದ್ದಾರೆ. ಕೋರ್ಟ್‌, ಪಾರ್ಲಿಮೆಂಟ್‌ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳಿರುವ ರಾಜಧಾನಿಯ  ನಿಷೇಧಿತ ವಲಯವನ್ನು ತೆರವು ಮಾಡುವಂತೆ ಪ್ರತಿ­ಭಟನಾಕಾರರಿಗೆ ಸೂಚಿಸಬೇಕು ಎಂಬ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿರು­ವುದು ಅವರಿಗೆ ಬಲ ಒದಗಿಸಿದೆ. ಹೀಗಾಗಿ ಹೋರಾ­ಟಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೆ ವಿರಮಿಸುವುದಿಲ್ಲ ಎಂದು ಇಮ್ರಾನ್‌ ಪ್ರತಿಜ್ಞೆ ಮಾಡಿದ್ದಾರೆ.

ಪ್ರಧಾನಿ ರಾಜೀನಾಮೆಗೆ ಆಗ್ರ­ಹಿಸಿ ಪ್ರತ್ಯೇಕ ಪ್ರತಿಭಟನೆ ನಡೆಸುತ್ತಿರುವ ಪಾಕಿ­ಸ್ತಾನ್‌ ಅವಾಮಿ ತೆಹ್ರೀಕ್‌ (ಪಿಎಟಿ) ಪಕ್ಷವೂ ಹೋರಾಟ ಮುಂದುವ­ರಿ­ಸಿದೆ. ಪಕ್ಷದ ಮುಖಂಡ ತಾಹಿರ್‌- ಉಲ್‌- ಖಾದ್ರಿ ಮತ್ತು ಅವರ ಪಕ್ಷದ ಸಾವಿ­ರಾರು ಕಾರ್ಯ­ಕ­ರ್ತರು ನಿಷೇಧಿತ ವಲಯದಲ್ಲಿಯೇ ಬೀಡು ಬಿಟ್ಟಿದ್ದಾರೆ.

ಪಿಎಟಿ ಮುಖಂಡರ ಜೊತೆ ಸರ್ಕಾರದ ಪ್ರತಿನಿಧಿ­ಗಳು ಬುಧವಾರ ಮಾತುಕತೆ ನಡೆಸಿದ್ದರು. ಆದರೆ ಗುರು­ವಾರ ಯಾವುದೇ ಮಾತುಕತೆ ನಡೆಯಲಿಲ್ಲ.

ನಿಲುವು ಬದಲು: ‘ಅಕ್ರಮ ಎಸಗಿ ಚುನಾವಣೆ ಗೆದ್ದಿ­ರುವ’ ಷರೀಫ್‌ ರಾಜೀನಾಮೆ ನೀಡುವ ತನಕ ಮಾತುಕತೆ ಇಲ್ಲ ಎಂದು ಪಟ್ಟು ಹಿಡಿದಿದ್ದ ಖಾನ್‌ ಬುಧ­ವಾರ ರಾತ್ರಿ ತಮ್ಮ ನಿಲುವು ಸಡಿಲಿಸಿದ್ದರು. ಅವರ ಪಕ್ಷದ ಮುಖಂಡರು ಸರ್ಕಾರದ ಪ್ರತಿನಿಧಿ­ಗಳೊಂದಿಗೆ ಮಾತುಕತೆ ಕೂಡ ನಡೆಸಿದ್ದರು.

ಆದರೆ, ಸರ್ಕಾರದ ಅರ್ಜಿಯನ್ನು ಸುಪ್ರೀಂ­ಕೋರ್ಟ್‌ ತಿರಸ್ಕರಿಸಿದ್ದರಿಂದ ಮತ್ತಷ್ಟು ಹುಮ್ಮಸ್ಸು ಪಡೆದುಕೊಂಡ ಖಾನ್‌, ಸರ್ಕಾರದ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದು, ಚಳವಳಿಯನ್ನು ಎಲ್ಲ ಪ್ರಾಂತ್ಯಗಳಿಗೂ ವಿಸ್ತರಿಸುವಂತೆ ಕರೆ ನೀಡಿದ್ದಾರೆ.

* ಸರ್ಕಾರದೊಂದಿಗಿನ ಮಾತುಕತೆ ಮುಗಿದ ಅಧ್ಯಾಯ. ಪ್ರಧಾನಿ ನವಾಜ್‌ ಷರೀಫ್‌ ಅವರ ರಾಜೀನಾಮೆಯೇ ನಮ್ಮ ಬೇಡಿಕೆ ಆಗಿರುವಾಗ, ಮಾತುಕತೆ ಹೇಗೆ ಸಾಧ್ಯ?
ಇಮ್ರಾನ್‌ ಖಾನ್‌, ಪ್ರತಿಪಕ್ಷ ಮುಖಂಡ

* ಸಂಸತ್‌ ತಿರಸ್ಕಾರ
ಪ್ರಧಾನಿ ನವಾಜ್‌ ಷರೀಫ್‌ ಅವರ ರಾಜೀನಾಮೆ ಮತ್ತು ಸಂಸತ್ತನ್ನು ಬರ್ಖಾಸ್ತು­ಗೊ­ಳಿಸುವ ಪ್ರತಿಭಟನಾಕಾರರ ಬೇಡಿಕೆಯನ್ನು ಪಾಕ್ ಸಂಸತ್ತು ಅವಿರೋಧವಾಗಿ ತಿರಸ್ಕರಿಸಿದೆ.

ತೆರವು ಆದೇಶಕ್ಕೆ ‘ಸುಪ್ರೀಂ’ ನಕಾರ
ಇಸ್ಲಾಮಾಬಾದ್‌ (ಪಿಟಿಐ):
ಸಂಸತ್ತನ್ನು ಸುತ್ತುವರಿದಿರುವ ಪ್ರತಿಭಟನಾಕಾರರು ಅಲ್ಲಿಂದ ತೆರಳುವುಗೊಳಿಸಲು ಆದೇಶ ನೀಡಬೇಕೆಂಬ ಸರ್ಕಾರದ ಅರ್ಜಿಯನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಇದೊಂದು ಆಡಳಿತಾತ್ಮಕ ವಿಷಯವಾಗಿದ್ದು, ಸಂಬಂಧಪಟ್ಟ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.

ಪ್ರಧಾನಿ ನವಾಜ್‌ ಷರೀಫ್‌ ಅವರು ರಾಜೀ­ನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆ­ಸುತ್ತಿರುವವರನ್ನು ತೆರವುಗೊಳಿಸಲು ಆದೇಶ ನೀಡಬೇಕು ಎಂದು ಅಟಾರ್ನಿ ಜನರಲ್‌ ಸಲ್ಮಾನ್‌ ಭಟ್‌ ಸುಪ್ರೀಂಕೋರ್ಟನ್ನು ಕೋರಿ­ದರು. ಆದರೆ ಐವರು ಸದಸ್ಯರ ಪೀಠ ಅದನ್ನು ನಿರಾಕರಿಸಿತು.

ಇಮ್ರಾನ್‌ ಖಾನ್‌ ಮತ್ತು ತಾಹಿರ್‌-ಉಲ್‌-ಖಾದ್ರಿ ಅವರ ನೇತೃತ್ವದ ಪಕ್ಷಗಳು ನಡೆಸುತ್ತಿ­ರುವ ಪ್ರತಿಭಟನೆ ವಿರುದ್ಧ ಲಾಹೋರ್‌ ಹೈ­ಕೋರ್ಟ್‌ನ ಮುಲ್ತಾನ್‌ ವಕೀಲರ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.