ADVERTISEMENT

ಅರ್ಹತೆ ಆಧಾರಿತ ವಲಸೆ ನೀತಿಗೆ ಟ್ರಂಪ್ ಒಲವು

ಪಿಟಿಐ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ಅರ್ಹತೆ ಆಧಾರಿತ ವಲಸೆ ನೀತಿಗೆ  ಟ್ರಂಪ್ ಒಲವು
ಅರ್ಹತೆ ಆಧಾರಿತ ವಲಸೆ ನೀತಿಗೆ ಟ್ರಂಪ್ ಒಲವು   
ವಾಷಿಂಗ್ಟನ್: ಅಮೆರಿಕದ ಆರ್ಥಿಕತೆಗೆ ಲಾಭಕರವಾದ ಮತ್ತು ಉದ್ಯೋಗ ಸೃಷ್ಟಿಸುವಂತಹ ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಯ ಬಗ್ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಒಲವು ಹೊಂದಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
 
‘ದೇಶಕ್ಕೆ ಬರುವ ವಲಸಿಗರು ನಮ್ಮ ಆರ್ಥಿಕತೆ ಬೆಳವಣಿಗೆ ಮತ್ತು ಪ್ರತಿಯೊಬ್ಬರ ವೇತನ ಸುಧಾರಣೆಗೆ ನೆರವಾಗುವಂತಹ ಅರ್ಹತೆ ಆಧಾರಿತ ವ್ಯವಸ್ಥೆ ಅಗತ್ಯ ಎಂದು ಅಧ್ಯಕ್ಷರು ಮನಗಂಡಿದ್ದಾರೆ’ ಎಂಬುದಾಗಿ ಶ್ವೇತಭವನದ ಹಿರಿಯ ನೀತಿ ಸಲಹೆಗಾರ ಸ್ಟೀಫನ್ ಮಿಲ್ಲರ್ ತಿಳಿಸಿದ್ದಾರೆ.
 
ಆದರೆ, ಯಾವುದೇ ಕಾನೂನುಬದ್ಧ ವಲಸೆ ವ್ಯವಸ್ಥೆಯು ಅಮೆರಿಕದ ಕೆಲಸಗಾರರ ಸ್ಥಾನಪಲ್ಲಟಕ್ಕೆ ಎರವಾಗಬಾರದು ಮತ್ತು ಎಚ್‌1ಬಿ ವೀಸಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವಂಚನೆಯ ಆರೋಪಗಳು ಎದುರಾಗುವಂತೆ ಆಗಬಾರದು ಎಂದು ಅವರು ಹೇಳಿದ್ದಾರೆ.
 
‘ಅಮೆರಿಕನ್ನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಯೋಜನೆ ದೇಶಕ್ಕೆ ಅಗತ್ಯವಾಗಿದೆ. ಈ ಬಗ್ಗೆ ಕಾರ್ಮಿಕ ಒಕ್ಕೂಟಗಳೂ ಸಹಮತ ವ್ಯಕ್ತಪಡಿಸಿವೆ. ಅಲ್ಲದೆ, ಕಾಂಗ್ರೆಸ್‌ನಲ್ಲಿನ ಡೆಮಾಕ್ರಟಿಕ್ ಪಕ್ಷದ ಅನೇಕ ಸದಸ್ಯರು ಸಹ ಒಪ್ಪಿಕೊಂಡಿದ್ದಾರೆ’ ಎಂದು ಮಿಲ್ಲರ್‌ ತಿಳಿಸಿದ್ದಾರೆ. 
 
ಹೊಸ ನೀತಿ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.