ADVERTISEMENT

ಆತ್ಮಾಹುತಿ ಬಾಂಬ್ ದಾಳಿ, 6 ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ

ಪೇಶಾವರ ಕೋರ್ಟ್‌ ಕಟ್ಟಡ ಆವರಣ

ಏಜೆನ್ಸೀಸ್
Published 21 ಫೆಬ್ರುವರಿ 2017, 10:17 IST
Last Updated 21 ಫೆಬ್ರುವರಿ 2017, 10:17 IST
ಆತ್ಮಾಹುತಿ ಬಾಂಬ್ ದಾಳಿ, 6 ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ
ಆತ್ಮಾಹುತಿ ಬಾಂಬ್ ದಾಳಿ, 6 ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ   
ಪೇಶಾವರ: ಇಲ್ಲಿನ ಕೋರ್ಟ್‌ ಕಟ್ಟಡ ಆವರಣದಲ್ಲಿ ಮೂವರು ಆತ್ಮಾಹುತಿ ಬಾಂಬ್‌ ದಾಳಿಕೋರರು ನಡೆಸಿದ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ದಾಳಿ ನಡೆಸಿದ ನಂತರ ಚರ್ಸಾಡ್ಡದ ವಾಯವ್ಯ ಭಾಗದಲ್ಲಿರುವ ಟಂಗಿ ಎಂಬ ಪ್ರದೇಶದ ಕಟ್ಟಡವೊಂದರಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
 
ದಾಳಿ ನಡೆದಿರುವ ಬಗ್ಗೆ ಖಚಿತ ಮಾಹಿತಿ ನೀಡಿದ ಚಾರ್ಸಡ್ಡಾದ ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಇಯಾಜ್‌ ಖಾನ್ ಅವರು, ಮೂವರು ಉಗ್ರವಾದಿಗಳು ಕೋರ್ಟ್‌ ಕಟ್ಟಡದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ ಉಗ್ರವಾದಿಗಳಲ್ಲಿ ಒಬ್ಬ ತಾನೇ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ.  ಮತ್ತೊಬ್ಬ ಉಗ್ರನನ್ನು ಪೊಲೀಸರು ಹತ್ಯೆಗೈದಿದ್ದಾರೆ ಎಂದು ಹೇಳಿದ್ದಾರೆ. 
 
ಕೋರ್ಟ್‌ ಕಟ್ಟಡದ ಒಳಗೆ ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ವಕೀಲರು, ನ್ಯಾಯಾಧೀಶರು, ನಾಗರೀಕರು ಸೇರಿದಂತೆ ನೂರಾರು ಮಂದಿ ಇರುವ ಸಾಧ್ಯತೆ ಇದೆ. ಪಾಕಿಸ್ತಾನದ ಜಮಾತ್‌–ಉರ್–ಅಹ್ರಾರ್ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
 
ಜಮಾತ್–ಉರ್–ಅಹ್ರಾರ್ ಸಂಘಟನೆಯ ವಕ್ತಾರ ಅಸಾದ್ ಮನ್ಸೂರ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ. ಈ ದಾಳಿ ಮೂಲಕ ಪತ್ರಕರ್ತರಿಗೆ ಸಂದೇಶ ರವಾನಿಸಿದ್ದೇನೆ. ಕೆಲವು ದಿನಗಳಲ್ಲಿ  ಇನ್ನಷ್ಟು ಆತ್ಮಾಹುತಿ ಬಾಂಬ್ ದಾಳಿಗಳು ನಡೆಯಲಿವೆ ಎಂದು ಹೇಳಿದ್ದಾನೆ.
 
ಪಾಕಿಸ್ತಾನದಲ್ಲಿ ಕಳೆದ ಹತ್ತು ದಿನಗಳಲ್ಲಿ ಹಲವು ಬಾಂಬ್ ದಾಳಿಗಳು ನಡೆದಿದ್ದು, ನೂರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.