ADVERTISEMENT

ಆರೋಪ ಸಾಬೀತಾದರೆ ಜೈಲು

ಪನಾಮ ಹಗರಣ: ಷರೀಫ್ ಕುಟುಂಬಕ್ಕೆ ‘ಸುಪ್ರೀಂ’ ಎಚ್ಚರಿಕೆ

ಪಿಟಿಐ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ನವಾಜ್ ಷರೀಫ್
ನವಾಜ್ ಷರೀಫ್   

ಇಸ್ಲಾಮಾಬಾದ್: ಪನಾಮ ಪೇಪರ್ಸ್ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಸುತ್ತಿರುವ ತಂಡಕ್ಕೆ ನಕಲಿ ದಾಖಲೆ ನೀಡಿರುವುದು ಸಾಬೀತಾದರೆ ಪ್ರಧಾನಿ ನವಾಜ್ ಷರೀಫ್ ಮಕ್ಕಳು ಏಳು ವರ್ಷ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.

ಹಗರಣದ ಬಗ್ಗೆ ಸೋಮವಾರದಿಂದ ಪ್ರತಿದಿನ ವಿಚಾರಣೆ ನಡೆಯುತ್ತಿದ್ದು, ಸುಪ್ರೀಂಕೋರ್ಟ್ ನೇಮಿಸಿದ್ದ ಜಂಟಿ ತನಿಖಾ ತಂಡ (ಜೆಐಟಿ) ಕೋರ್ಟ್‌ಗೆ ಗುರುವಾರ ವರದಿ ಸಲ್ಲಿಸಿತು. ಷರೀಫ್ ಮಕ್ಕಳು ಕೆಲವು ತಿದ್ದಿದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ಜೆಐಟಿ ಗಮನಿಸಿದೆ. 

ಕ್ಯಾಲಿಬರಿ ಫಾಂಟ್ ಎಲ್ಲಿಂದ ಬಂತು: ಷರೀಫ್ ಪುತ್ರಿ ಮರಿಯಮ್ ಷರೀಫ್ ಸಲ್ಲಿಸಿರುವ ಆಸ್ತಿ ದಾಖಲೆ ಪತ್ರದಲ್ಲಿ ಕ್ಯಾಲಿಬರಿ ಫಾಂಟ್ ಬಳಸಲಾಗಿದೆ. ಈ ದಾಖಲೆ ಪತ್ರವು 2006ರಲ್ಲಿ ಜಾರಿಗೊಂಡಿತ್ತು. ವಿಚಿತ್ರವೆಂದರೆ, ಈ ಫಾಂಟ್ ಅಧಿಕೃತವಾಗಿ ಬಳಕೆಗೆ ಲಭ್ಯವಾಗಿದ್ದು 2007ರಲ್ಲಿ. ಅಲ್ಲದೆ ಈ ದಾಖಲೆಯು ಲಂಡನ್‌ನಲ್ಲಿ ನೋಟರಿಯೂ ಆಗಿತ್ತು. ಆದರೆ ನೋಟರಿ ಮಾಡಿಸಿದ ದಿನ ಕಚೇರಿಯ ರಜಾದಿನವಾಗಿತ್ತು.

ADVERTISEMENT

ಹೀಗಾಗಿ ಅವರು ಸಲ್ಲಿಸಿದ ದಾಖಲೆಯ ಬಗ್ಗೆ ಸಂದೇಹಗಳು ಮೂಡಿವೆ ಎಂದು ಜೆಐಟಿ ಹೇಳಿದೆ. ನವಾಜ್ ಪುತ್ರ ಹುಸೇನ್ ನವಾಜ್ ಸಲ್ಲಿಸಿದ್ದ ಗಲ್ಫ್ ಆಫ್ ಸ್ಟೀಲ್ ಮಿಲ್ಸ್ ದಾಖಲೆಗಳು ನಕಲಿ ಎಂಬುದನ್ನು ದುಬೈ ಸರ್ಕಾರ ಬಹಿರಂಗಪಡಿಸಿದೆ. ಈ ಪತ್ರಗಳಿಗೆ ಯಾವುದೇ ದಾಖಲೆಗಳಿಲ್ಲ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.