ADVERTISEMENT

ಕರಾಚಿಯಲ್ಲಿ ಪತ್ತೆಯಾದ ಮೌಲ್ವಿಗಳು

ಮಾರ್ಚ್ 20ಕ್ಕೆ ಭಾರತಕ್ಕೆ ವಾಪಸ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST
ಕರಾಚಿಯಲ್ಲಿ ಪತ್ತೆಯಾದ ಮೌಲ್ವಿಗಳು
ಕರಾಚಿಯಲ್ಲಿ ಪತ್ತೆಯಾದ ಮೌಲ್ವಿಗಳು   

ಕರಾಚಿ/ನವದೆಹಲಿ: ಸೋದರಿಯನ್ನು ಭೇಟಿ ಮಾಡಲು ಹೋಗಿ ನಾಪತ್ತೆಯಾಗಿದ್ದ ಭಾರತದ ಇಬ್ಬರು ಮೌಲ್ವಿಗಳು  ಪತ್ತೆಯಾಗಿದ್ದು, ಶನಿವಾರ ಕರಾಚಿ ತಲುಪಿದ್ದಾರೆ.

‘ಇಬ್ಬರು ಮೌಲ್ವಿಗಳು ಪತ್ತೆ ಮಾಡಿ ಕರಾಚಿಗೆ ಕಳುಹಿಸಿರುವುದನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ದೃಢ ಪಡಿಸಿದೆ’ ಎಂದು ನವದೆಹಲಿಯ ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಪಾಕಿಸ್ತಾನ ಪ್ರಧಾನಿಯವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರೊಂದಿಗೆ ಮಾತನಾಡಿದ ಬಳಿಕ ಈ ವಿಷಯ ದೃಢಪಟ್ಟಿದೆ.

ADVERTISEMENT

ದೆಹಲಿಯ ಹಜ್ರತ್‌ ನಿಜಾಮುದ್ದಿನ್‌ ಅಲಿಯಾ ದರ್ಗಾದ ಮುಖ್ಯ ಮೌಲ್ವಿ ಸಯ್ಯದ್‌ ಆಸಿಫ್‌ ನಿಜಾಮಿ ಹಾಗೂ ಅವರ ಸೋದರ ಸಂಬಂಧಿ ನಜಿಂ ನಿಜಾಮಿ ಅವರು ‘ಸಿಂಧ್‌ ಪ್ರಾಂತ್ಯದಲ್ಲಿ ಮೊಬೈಲ್‌ ಸಂಪರ್ಕ ಸಹ ದೊರಕದ’  ಗ್ರಾಮವೊಂದರಲ್ಲಿ ಪತ್ತೆಯಾಗಿದ್ದಾರೆ. ಆದ್ದರಿಂದಲೆ ಅವರು ತಮ್ಮ ಸಂಬಂಧಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

ಮಾರ್ಚ್‌ 20ರಂದು ಅವರು ಭಾರತಕ್ಕೆ ಮರಳಲಿದ್ದಾರೆ. ಇದಕ್ಕೂ ಮೊದಲು ಇಬ್ಬರೂ ಮೌಲ್ವಿಗಳ ಮೇಲೆ ಮುತ್ತಾಹಿದಾ ಖ್ವಾಮಿ ಚಳವಳಿ (ಎಂಕ್ಯುಎಂ) ಜತೆಗೆ ಸಂಪರ್ಕ ಹೊಂದಿರುವ ಆರೋಪ ಇದೆ ಎಂದು ಪಾಕ್‌ ಮೂಲಗಳು ಹೇಳಿದ್ದವು. 

ಈ ಇಬ್ಬರನ್ನು  ಲಾಹೋರ್‌ನ ಅಲ್ಲಾಮಾ ಇಕ್ಬಾಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಮಾರ್ಚ್‌ 14ರಂದು ವಶಕ್ಕೆ ಪಡೆಯಲಾಗಿತ್ತು.  ಕರಾಚಿಯಿಂದ ಹೊರಟಿದ್ದ ಇವರಿಬ್ಬರೂ ಶಹೀನ್‌್ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.