ADVERTISEMENT

ಕಳಂಕಿತ ಕಂಪೆನಿಯಲ್ಲಿ ಬ್ರಿಟನ್‌ ರಾಣಿಯ ಹಣ

ಹೂಡಿಕೆ ಪ್ರಕ್ರಿಯೆಯು ಕಾನೂನು ಬದ್ಧ: ಮಾಧ್ಯಮಗಳ ವರದಿ

ಏಜೆನ್ಸೀಸ್
Published 6 ನವೆಂಬರ್ 2017, 19:30 IST
Last Updated 6 ನವೆಂಬರ್ 2017, 19:30 IST
ರಾಣಿ 2ನೇ ಎಲಿಜಬೆತ್‌
ರಾಣಿ 2ನೇ ಎಲಿಜಬೆತ್‌   

ಲಂಡನ್‌: ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅವರು ಕೂಡ ವಿದೇಶಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ವಿಷಯ ಪ್ಯಾರಡೈಸ್‌ ದಾಖಲೆ ಸೋರಿಕೆಯಿಂದ ಗೊತ್ತಾಗಿದೆ.

ಸೋರಿಕೆಯಾದ ಮಾಹಿತಿ ಪ್ರಕಾರ, ರಾಣಿಗೆ ಸೇರಿದ ಸುಮಾರು 1 ಕೋಟಿ ಪೌಂಡ್‌ಗಳಷ್ಟು (ಅಂದಾಜು ₹85 ಕೋಟಿ) ಮೊತ್ತವನ್ನು ಕೇಮ್ಯಾನ್‌ ದ್ವೀಪಗಳು ಮತ್ತು ಬರ್ಮುಡಾದಲ್ಲಿ ಇರಿಸಲಾಗಿತ್ತು.

ಈ ಹಣವನ್ನು ವಿವಿಧ ಉದ್ದಿಮೆಗಳಲ್ಲಿ ಮರು ಹೂಡಿಕೆ ಮಾಡಲಾಗಿದ್ದು, ಬಡವರನ್ನು ಶೋಷಣೆ ಮಾಡುತ್ತಿರುವ ಆರೋಪ ಹೊತ್ತಿರುವ ವಿವಾದಾತ್ಮಕ ಬ್ರೈಟ್‌ಹೌಸ್‌ ಕಂಪೆನಿ ಮತ್ತು ಈಗ ದಿವಾಳಿಯಾಗಿರುವ, ಮದ್ಯ ಮಾರಾಟ ಮಳಿಗೆಗಳನ್ನು ನಿರ್ವಹಿಸುತ್ತಿದ್ದ ಸಂಸ್ಥೆಯೂ ಇದರಲ್ಲಿ ಸೇರಿವೆ ಎಂದು ದಾಖಲೆಗಳು ಹೇಳಿವೆ.

ADVERTISEMENT

ಸೋರಿಕೆಯಾದ ದಾಖಲೆಗಳಲ್ಲಿರುವ ಮಾಹಿತಿಗಳನ್ನು ಉಲ್ಲೇಖಿಸಿ ಬಿಬಿಸಿ ಮತ್ತು ಗಾರ್ಡಿಯನ್‌ ಪತ್ರಿಕೆ ಸುದ್ದಿ ಪ್ರಕಟಿಸಿವೆ.

ರಾಣಿ ಅವರ ಎಸ್ಟೇಟ್‌, ಖಾಸಗಿ ಆಸ್ತಿ ಮತ್ತು ವಹಿವಾಟುಗಳನ್ನು ನಿರ್ವಹಿಸುವ ಡಚಿ ಆಫ್‌ ಲ್ಯಾಂಕೆಸ್ಟರ್‌ ಮೂಲಕ ಬಂಡವಾಳ ಹೂಡಿಕೆ ಮಾಡಲಾಗಿದೆ. ಹೂಡಿಕೆ ಪ್ರಕ್ರಿಯೆಯು ಕಾನೂನು ಬದ್ಧವಾಗಿಯೇ ನಡೆದಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ.

ರಾಣಿಯವರ ಆಸ್ತಿ ನಿರ್ವಹಣಾ ಸಂಸ್ಥೆ ಅಕ್ರಮ ಎಸಗಿರುವ ಬಗ್ಗೆ ಅಥವಾ ಸರ್ಕಾರಕ್ಕೆ ತೆರಿಗೆ ಪಾವತಿಸದಿರುವ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖ ಇಲ್ಲ.

ಆದರೆ, ಬ್ರಿಟನ್‌ನ್ನಿನ ಮುಖ್ಯಸ್ಥರಾದವರು ತೆರಿಗೆರಹಿತ ದೇಶಗಳಲ್ಲಿ ಬಂಡವಾಳ ಹೂಡಬಹುದೇ ಎಂಬ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.

ಸ್ಪಷ್ಟನೆ: ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿರುವ ಡಚಿ ಆಫ್‌ ಲ್ಯಾಂಕೆಸ್ಟರ್‌ನ ವಕ್ತಾರರೊಬ್ಬರು, ‘ನಮ್ಮ ಎಲ್ಲ ಬಂಡವಾಳ ಹೂಡಿಕೆಗಳು ಲೆಕ್ಕ ಪರಿಶೋಧನೆಗೆ ಒಳಪಟ್ಟಿವೆ ಮತ್ತು ನ್ಯಾಯಬದ್ಧವಾಗಿವೆ’ ಎಂದು ಹೇಳಿದ್ದಾರೆ.

‘ನಾವು ಹಲವು ರೀತಿಯ ಹೂಡಿಕೆಗಳನ್ನು ನಿರ್ವಹಿಸುತ್ತಿದ್ದು, ಇದರಲ್ಲಿ ಕೆಲವು ವಿದೇಶದಲ್ಲೂ ಇವೆ’ ಎಂದು ಅವರು ಹೇಳಿದ್ದಾರೆ.

‘ರಾಣಿ ಅವರು ತಮ್ಮ ಎಲ್ಲ ಆದಾಯಕ್ಕೂ ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸುತ್ತಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
*
ಪುಟಿನ್‌ ಸಂಬಂಧಿ ಕಂಪೆನಿಗಳ ಜೊತೆ ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಸಂಬಂಧ
ವಾಷಿಂಗ್ಟನ್‌:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಹತ್ತಿರದ ಸಂಬಂಧಿಗಳಿಗೆ ಸೇರಿದ ಕಂಪೆನಿಯೊಂದಿಗೆ ಅಮೆರಿಕದ ವಾಣಿಜ್ಯ ಇಲಾಖೆ ಕಾರ್ಯದರ್ಶಿ ವಿಲ್ಬರ್‌ ರಾಸ್‌ ಅವರಿಗೆ ಸಂಬಂಧವಿರುವ ವಿಚಾರವೂ ದಾಖಲೆಗಳ ಸೋರಿಕೆಯಿಂದ ಬಯಲಾಗಿದೆ.

ಉದ್ಯಮಿಯಾಗಿರುವ 79 ವರ್ಷ ವಯಸ್ಸಿನ ರಾಸ್‌ ಅವರು ನ್ಯಾವಿಗೇಟರ್‌ ಹೋಲ್ಡಿಂಗ್ಸ್‌ ಎಂಬ ಸಂಸ್ಥೆಯಲ್ಲಿ ಶೇ 31ರಷ್ಟು ಪಾಲು ಹೊಂದಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಅಮೆರಿಕದ ವಾಣಿಜ್ಯ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಅವರು ಈ ಕಂಪೆನಿಯಲ್ಲಿ ತಾವು ಹೊಂದಿದ್ದ ಪಾಲನ್ನು ಕಡಿತಗೊಳಿಸಿದ್ದರು.

ನ್ಯಾವಿಗೇಟರ್‌ ಹೋಲ್ಡಿಂಗ್ಸ್‌ ಸಂಸ್ಥೆಯು ರಷ್ಯಾದ ಇಂಧನ ಕ್ಷೇತ್ರದ ದೈತ್ಯ ಕಂಪೆನಿ ಸಿಬುರ್‌ ಜೊತೆ ಲಾಭದಾಯಕ ಪಾಲುದಾರಿಕೆ ಹೊಂದಿದೆ. ಸಿಬುರ್‌ ಕಂಪೆನಿಯ ಭಾಗಶಃ ಮಾಲೀಕತ್ವವನ್ನು ಪುಟಿನ್‌ ಅವರ ಅಳಿಯ ಕಿರಿಲ್‌ ಶಮಲೊವ್‌ ಹಾಗೂ ಪುಟಿನ್‌ ಸ್ನೇಹಿತ ಮತ್ತು ಉದ್ಯಮ ಪಾಲುದಾರ ಗೆನಡಿ ಟಿಮ್‌ಶೆಂಕೊ ಹೊಂದಿದ್ದಾರೆ.

ಗೆನಡಿ ವಿರುದ್ಧ ಅಮೆರಿಕ ಹಲವು ನಿರ್ಬಂಧಗಳನ್ನು ಹೇರಿದೆ.

ರಷ್ಯಾವು ಕ್ರಿಮಿಯಾ ಮೇಲೆ ನಡೆಸಿದ ಆಕ್ರಮಣ ಮತ್ತು ಉಕ್ರೇನ್‌ ವಿಚಾರದಲ್ಲಿ ತೋರಿದ ಪ್ರಚೋದನಾಕಾರಿ ಪ್ರವೃತ್ತಿಯನ್ನು ಖಂಡಿಸಿ ಅಮೆರಿಕವು ರಷ್ಯಾದ ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ನಿರ್ಬಂಧ ಹೇರಿತ್ತು.

ಆದರೆ, ರಾಸ್‌ ಅವರು ಅಕ್ರಮ ಎಸಗಿದ್ದಾರೆ ಎನ್ನುವ ಬಗ್ಗೆ ಸೋರಿಕೆಯಾದ ದಾಖಲೆಗಳಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ.
*
ಪಾಕ್‌ ಮಾಜಿ ಪ್ರಧಾನಿ ಅಜೀಜ್‌ ಹೆಸರು!
ಇಸ್ಲಾಮಾಬಾದ್‌:
‘ಪ್ಯಾರಡೈಸ್‌ ಪೇಪರ್ಸ್‌’ ದಾಖಲೆಗಳಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಶೌಕತ್‌ ಅಜೀಜ್‌ ಹಾಗೂ ರಾಷ್ಟ್ರೀಯ ವಿಮಾ ನಿಗಮದ (ಎನ್‌ಐಸಿಎಲ್‌) ಮಾಜಿ ಅಧ್ಯಕ್ಷ ಅಯಾಜ್‌ ಖಾನ್‌ ನಿಯಾಜಿ ಹೆಸರು ಇವೆ.

ಪನಾಮಾ ಪೇಪರ್ಸ್‌ ಸೋರಿಕೆ ಪ್ರಕರಣದಲ್ಲಿ ನವಾಜ್‌ ಷರೀಫ್‌ ಪ್ರಧಾನಿ ಹುದ್ದೆ ಕಳೆದಕೊಂಡ ಘಟನೆ ಮಾಸುವ ಮುನ್ನವೇ ಈ ಹೆಸರು ಹೊರ ಬಿದ್ದಿರುವುದು ಪಾಕಿಸ್ತಾನ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಪಾಕಿಸ್ತಾನದ ತೈಲ ಮತ್ತು ಅನಿಲ ಕ್ಷೇತ್ರದ ಇನ್ನೂ ಅನೇಕ ಬೃಹತ್‌ ಕಂಪೆನಿಗಳು ಮತ್ತು ಪ್ರತಿಷ್ಠಿತ ಉದ್ಯಮಿಗಳ ಹೆಸರುಗಳಿವೆ ಎನ್ನಲಾಗಿದೆ. ಸದ್ಯಕ್ಕೆ ಆ ಹೆಸರು ಮತ್ತು ವಿವರಗಳು ತಿಳಿದು ಬಂದಿಲ್ಲ.

‘ಪ್ಯಾರಡೈಸ್‌ ಪೇಪರ್ಸ್‌’ ದಾಖಲೆಗಳಲ್ಲಿ ಬೇರೆ ದೇಶಗಳಲ್ಲಿ ಬಂಡವಾಳ ಹೂಡಿರುವ ಮತ್ತು ವಹಿವಾಟು ಹೊಂದಿರುವ ವಿಶ್ವದ ವಿವಿಧ ರಾಷ್ಟ್ರಗಳ 31 ಸಾವಿರಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಪ್ರತಿಷ್ಠಿತ ಕಂಪೆನಿಗಳ ಹೆಸರುಗಳಿವೆ.

ಅಜೀಜ್‌ ಮತ್ತು ಕುಟುಂಬ ಸದಸ್ಯರು ಅಮೆರಿಕದಲ್ಲಿ ‘ಅಂಟಾರ್ಕ್ಟಿಕ್‌ ಟ್ರಸ್ಟ್’ ಹೊಂದಿದ್ದರೆ, ನಿಯಾಜಿ ಅವರು ಬ್ರಿಟಿಷ್‌ ವರ್ಜಿನ್‌ ಐಲೆಂಡ್‌ನಲ್ಲಿ (ಬಿವಿಐ) ಟ್ರಸ್ಟ್ ಮತ್ತು ಮೂರು ಕಂಪೆನಿ ಹೊಂದಿದ್ದಾರೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಈ ಇಬ್ಬರೂ ವಿದೇಶಿ ಹೂಡಿಕೆ ಮತ್ತು ವಹಿವಾಟು ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲ ಎಂದು ಐಸಿಐಜೆ ಹೇಳಿದೆ.

ವಿದೇಶದಲ್ಲಿ ಹೂಡಿಕೆ
68 ವರ್ಷದ ಅಜೀಜ್‌ 2004ರಿಂದ 2007ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. 1999ರಲ್ಲಿ ಪಾಕಿಸ್ತಾನದ ಹಣಕಾಸು ಸಚಿವರಾಗುವ ಮೊದಲು ಅಮೆರಿಕದಲ್ಲಿ ಸಿಟಿ ಬ್ಯಾಂಕ್‌ ಉದ್ಯೋಗಿಯಾಗಿದ್ದ ಅವರು, ಆಗಲೇ ಅಂಟಾರ್ಕ್ಟಿಕ್‌ ಟ್ರಸ್ಟ್‌ ಸ್ಥಾಪಿಸಿದ್ದರು. ಪತ್ನಿ, ಮಕ್ಕಳು, ಮೊಮ್ಮಕ್ಕಳು ಅದರ ಫಲಾನುಭವಿಗಳಾಗಿದ್ದಾರೆ.

2010ರಲ್ಲಿ ಎನ್‌ಐಸಿಎಲ್‌ ಅಧ್ಯಕ್ಷರಾಗಿದ್ದ ನಿಯಾಜಿ ವಿದೇಶದಲ್ಲಿ ಟ್ರಸ್ಟ್ ಮತ್ತು ಕಂಪೆನಿಗಳನ್ನು ಸ್ಥಾಪಿಸಿದ್ದು, ಸಂಬಂಧಿಗಳು ಸದಸ್ಯರಾಗಿದ್ದಾರೆ.

ಆಸ್ತಿ ಬಗ್ಗೆ ಸುಳ್ಳು ಮಾಹಿತಿ
ಪ್ರಧಾನಿ ಮತ್ತು ಹಣಕಾಸು ಸಚಿವರಾಗಿದ್ದ ಶೌಕತ್‌ ಅಜೀಜ್‌ ಆಸ್ತಿ ಘೋಷಣೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ವಿರೋಧ ಪಕ್ಷಗಳು ಆಗ ಆರೋಪ ಮಾಡಿದ್ದವು. ಭ್ರಷ್ಟಾಚಾರ, ಹಣಕಾಸು ಅಕ್ರಮ ಆರೋಪಗಳೂ ಅವರ ವಿರುದ್ಧ ಕೇಳಿ ಬಂದಿದ್ದವು.

ಬಲೂಚಿಸ್ತಾನದ ಪ್ರಭಾವಿ ನಾಯಕ ಅಕ್ಬರ್‌ ಬುಗ್ತಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಅವರ ವಿರುದ್ಧ ಮೂರು ಬಾರಿ ಬಂಧನ ವಾರಂಟ್‌ ಹೊರಡಿಸಿತ್ತು ಎಂಬ ದಾಖಲೆಗಳನ್ನು ಆ್ಯಪಲ್‌ಬಿ ಕಾನೂನು ಸಂಸ್ಥೆ ಸಂಗ್ರಹಿಸಿತ್ತು. ಈ ನಡುವೆ 2015ರಲ್ಲಿ ಅಮೆರಿಕದ ಟ್ರಸ್ಟ್ ಮುಚ್ಚಿದ ಅಜೀಜ್‌, ಆ್ಯಪಲ್‌ಬಿ ಆಂತರಿಕ ದತ್ತಾಂಶಗಳ ಸಂಗ್ರಹದಿಂದ ದಾಖಲೆ ತೆಗೆಸಿ ಹಾಕಿದ್ದರು.

ಅಮೆರಿಕದಲ್ಲಿರುವ ಟ್ರಸ್ಟ್‌ ವಹಿವಾಟುಗಳ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ಮಾಹಿತಿ ನೀಡುವ ಅಗತ್ಯವಿಲ್ಲ. ಅಮೆರಿಕ ಸರ್ಕಾರಕ್ಕೆ ಸಲ್ಲಬೇಕಾಗದ ಎಲ್ಲ ತೆರಿಗೆಗಳನ್ನು ಅವರು ಪಾವತಿಸಿದ್ದಾರೆ ಎಂದು ಅಜೀಜ್‌ ಪರ ವಕೀಲರು ಐಸಿಐಜೆಗೆ ತಿಳಿಸಿದ್ದರು.
*
ಮಾಹಿತಿ ಸಂಗ್ರಹಿಸಿದ್ದು ಪಾಕ್‌ ಪತ್ರಕರ್ತ
ಮಾಜಿ ಪ್ರಧಾನಿ ಅಜೀಜ್‌ ಮತ್ತು ನಿಯಾಜಿ ವಿದೇಶಗಳಲ್ಲಿ ಹೊಂದಿರುವ ‘ಪ್ಯಾರಡೈಸ್‌ ಪೇಪರ್ಸ್‌’ ದಾಖಲೆಗಳನ್ನು ಸಂಗ್ರಹಿಸಲು ತನಿಖಾ ಪತ್ರಕರ್ತರ ಕೂಟಕ್ಕೆ ನೆರವಾಗಿದ್ದು ಪಾಕಿಸ್ತಾನದ ಪತ್ರಕರ್ತ ಉಮರ್‌ ಚೀಮಾ.

ಸೋರಿಕೆಯಾದ ಪಟ್ಟಿಯಲ್ಲಿ ಪಾಕಿಸ್ತಾನದ ಇನ್ನೂ ಅನೇಕ ಗಣ್ಯರು ಮತ್ತು ಕಂಪೆನಿಗಳ ಹೆಸರುಗಳಿವೆ ಎಂದು ಅವರು ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇನ್ನುಳಿದ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
*
ವಹಿವಾಟು ವೈಯಕ್ತಿಕವಲ್ಲ: ಜಯಂತ್‌ ಸಿನ್ಹಾ

ನವದೆಹಲಿ (ಪಿಟಿಐ): ‘ಪ್ಯಾರಡೈಸ್‌ ದಾಖಲೆ’ಗಳಲ್ಲಿ ತಮ್ಮ ಹೆಸರು ಸೇರಿರುವುದಕ್ಕೆ ಕೆಂದ್ರ ಸಚಿವ ಜಯಂತ್‌ ಸಿನ್ಹಾ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಈ ವಹಿವಾಟು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮಾಡಿದ್ದಲ್ಲ ಎಂದು ಅವರು ಹೇಳಿದ್ದಾರೆ.

ಒಮಿಡ್ಯಾರ್‌ ನೆಟ್‌ವರ್ಕ್‌ ಎಂಬ ಕಂಪೆನಿಯ ಭಾರತ ವಿಭಾಗಕ್ಕೆ ಜಯಂತ್‌ ಸಿನ್ಹಾ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಒಮಿಡ್ಯಾರ್‌ ನೆಟ್‌ವರ್ಕ್‌ ಅಮೆರಿಕದ ಡಿ.ಲೈಟ್‌ ಡಿಸೈನ್‌ ಎಂಬ ಕಂಪೆನಿಯಲ್ಲಿ ಹೂಡಿಕೆ ಮಾಡಿತ್ತು. ಈ ಡಿ.ಲೈಟ್‌ ಡಿಸೈನ್‌ನ ಅಂಗಸಂಸ್ಥೆಯೊಂದು ಕೇಮನ್‌ ಐಲ್ಯಾಂಡ್‌ನಲ್ಲಿದೆ ಎಂದು ಪ್ಯಾರಡೈಸ್‌ ದಾಖಲೆಗಳು ಹೇಳುತ್ತಿವೆ.

ತಾವು ಭಾಗಿಯಾಗಿದ್ದ ಕಂಪೆನಿಯ ವಹಿವಾಟುಗಳೆಲ್ಲವೂ ಕಾನೂನುಬದ್ಧವಾಗಿದ್ದವು ಮತ್ತು ವಿಶ್ವಾಸಾರ್ಹವಾಗಿದ್ದವು ಎಂದು ಟ್ವೀಟ್‌ ಮೂಲಕ ಸಿನ್ಹಾ ಅವರು ಹೇಳಿದ್ದಾರೆ.

‘ಒಮಿಡ್ಯಾರ್‌ ನೆಟ್‌ವರ್ಕ್‌ನ ಪಾಲುದಾರನಾಗಿ ಜಗತ್ತಿನ ಪ್ರಮುಖ ಸಂಸ್ಥೆಗಳ ಜತೆ ವಹಿವಾಟು ನಡೆಸಿದ್ದೇನೆ. ಓಮಿಡ್ಯಾರ್‌ ನೆಟ್‌ವರ್ಕ್‌ನ ಪ್ರತಿನಿಧಿಯಾಗಿ ಡಿ.ಲೈಟ್‌ ಡಿಸೈನ್‌ ಆಡಳಿತ ಮಂಡಳಿಯಲ್ಲಿಯೂ ಇದ್ದೆ. ಹಾಗಾಗಿ ನಾನು ಮಾಡಿದ ಎಲ್ಲ ವಹಿವಾಟುಗಳೂ ಒಮಿಡ್ಯಾರ್‌ ಸಂಸ್ಥೆಯ ಪರವಾಗಿಯೇ ಹೊರತು ವೈಯಕ್ತಿಕವಾದುದು ಅಲ್ಲ ಎಂಬುದು ಗಮನಾರ್ಹ’ ಎಂದು ಸಿನ್ಹಾ ತಿಳಿಸಿದ್ದಾರೆ.

ಎಲ್ಲ ವಹಿವಾಟುಗಳ ಬಗ್ಗೆ ಅಗತ್ಯ ಪ್ರಾಧಿಕಾರಗಳಿಗೆ ಮಾಹಿತಿ ನೀಡಲಾಗಿದೆ. ಲೆಕ್ಕಪತ್ರಗಳನ್ನೂ ಸಲ್ಲಿಸಲಾಗಿದೆ. ‘ಒಮಿಡ್ಯಾರ್‌ ನೆಟ್‌ವರ್ಕ್‌ನಿಂದ ಹೊರಬಂದ ಬಳಿಕ ಡಿ.ಲೈಟ್‌ನಲ್ಲಿ ಸ್ವತಂತ್ರ ನಿರ್ದೇಶಕನಾಗಿ ಮುಂದುವರಿಯುವಂತೆ ಕೋರಿದ್ದರು. ಸಚಿವನಾದ ಕೂಡಲೇ ಡಿ.ಲೈಟ್‌ನ ಸ್ವತಂತ್ರ ನಿರ್ದೇಶಕ ಹುದ್ದೆಗೂ ರಾಜೀನಾಮೆ ನೀಡಿದ್ದೇನೆ. ಆ ಕಂಪೆನಿಯ ಜತೆಗೆ ನನಗೆ ಯಾವುದೇ ಸಂಬಂಧ ಈಗ ಇಲ್ಲ’ ಎಂದು ಸಿನ್ಹಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.