ಲಾಹೋರ್(ಐಎಎನ್ಎಸ್): ಈ ಸಲ ನರೇಂದ್ರ ಮೋದಿ ಗೆಲ್ಲುತ್ತಾರೆಯೇ? ಭಾರತಕ್ಕೊಂದು ಸುಸ್ಥಿರ ಸರ್ಕಾರ ಸಿಗುತ್ತದೆಯೇ? ಅರವಿಂದ ಕೇಜ್ರಿವಾಲ್ ಅವರ ಭವಿಷ್ಯ ಏನಾಗಬಹುದು? ಕಾಂಗ್ರೆಸ್ ಕತೆ ಮುಗಿಯಿತೇ?ಇವೆಲ್ಲ ಯಾವುದೋ ವಾಹಿನಿಯ ಚುನಾವಣಾ ಕಾರ್ಯಕ್ರಮದಲ್ಲಿ ಮೂಡಿಬಂದ ಪ್ರಶ್ನೆಗಳಲ್ಲ. ಬದಲಾಗಿ ಭಾರತದ ಲೋಕಸಭಾ ಚುನಾವಣೆಯ ಕುರಿತಾಗಿ ನೆರೆದೇಶ ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿರುವ ವಿಷಯಗಳು.
ಹೌದು. ಭಾರತದ ಲೋಕಸಭಾ ಚುನಾವಣೆಯ ಕಾವು ನೆರೆಯ ಪಾಕಿಸ್ತಾನಕ್ಕೂ ತಲುಪಿದೆ. ಕಾಶ್ಮೀರ ಸಮಸ್ಯೆ ಒಳಗೊಂಡಂತೆ ಭಾರತದ ಚುನಾವಣೆ ಕುರಿತಾಗಿ ಅಲ್ಲಿ ಬಿಸಿಬಿಸಿ ಚರ್ಚೆಗಳಾಗುತ್ತಿವೆ.
ಹಲವು ಪಾಕಿಸ್ತಾನಿ ನಾಗರಿಕರಿಗೆ ಭಾರತದಲ್ಲಿ ನೆಚ್ಚಿನ ರಾಜಕೀಯ ನಾಯಕರೂ ಇದ್ದಾರೆ.ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ.ರಾಜಕಾರಣಿಯಾಗಿ ಬದಲಾಗಿರುವ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ದೇಶದ ಗಡಿಯನ್ನೂ ಮೀರಿ ಪಾಕಿಸ್ತಾನದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಅನೇಕ ಪಾಕಿಸ್ತಾನಿಗಳಿಗೆ ಕೇಜ್ರಿವಾಲ್ ನೆಚ್ಚಿನ ರಾಜಕೀಯ ನಾಯಕ.
‘ಮುಖ್ಯಮಂತ್ರಿಯಾದ ಅತ್ಯಂತ ಕಡಿಮೆ ಅವಧಿಯಲ್ಲಿ ಅರವಿಂದ ಕೇಜ್ರಿವಾಲ್ ಮಾಡಿದ ಸಾಧನೆ ಪ್ರಶಂಸನಾರ್ಹವಾದದ್ದು. ಅವರು ಮತ್ತೆ ದೆಹಲಿಯಲ್ಲಿ ಸರ್ಕಾರ ರಚಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ.’ ಎಂದು ಪಾಕಿಸ್ತಾನದ ಉದ್ಯಮಿ ಹರ್ದೀಪ್ ಖುಲ್ಲರ್ ತಮ್ಮ ಆಶಯ ವ್ಯಕ್ತಪಡಿಸುತ್ತಾರೆ.
40 ವರ್ಷದ ನಾವೇದ್ ಸಿದ್ದೀಖಿ ಅವರೂ ಕೇಜ್ರಿವಾಲ್ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆ. ಕ್ರಿಕೆಟಿಗರಾಗಿದ್ದ ಇಮ್ರಾನ್ ಖಾನ್ ನಂತರ ರಾಜಕಾರಣಿಯಾಗಿ ಬದಲಾಗಿ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷ ಕಟ್ಟಿ ಹೊಸ ಅಲೆ ಎಬ್ಬಿಸಿದ್ದನ್ನು ನೆನೆಸಿಕೊಂಡು ‘ನಾವು ಕೇಜ್ರಿವಾಲ್ ಅವರಲ್ಲಿಯೂ ಇಂಥದ್ದೇ ಕಿಡಿಯನ್ನು ನೋಡಿದ್ದೇವೆ. ತನ್ನ ಆದರ್ಶದ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷ ಗೆಲ್ಲಬೇಕು ಎಂದು ಬಯಸುತ್ತೇನೆ’ ಎನ್ನುತ್ತಾರೆ.
ವ್ಯಾಪಕವಾದ ಪ್ರಚಾರದ ಹೊರತಾಗಿಯೂ ನರೇಂದ್ರ ಮೋದಿ ಪಾಕಿಸ್ತಾನಿಗಳಿಗೆ ಸಮಸ್ಯಾತ್ಮಕ ವ್ಯಕ್ತಿಯಾಗಿಯೇ ಉಳಿದಿದ್ದಾರೆ.
ಯುವ ಉದ್ಯಮಿ ಮತ್ತು ಸಾರ್ವಜನಿಕ ಸಂಪರ್ಕ ಸಲಹೆಗಾರ ನವಾಜುದ್ದೀನ್ ಖಾನ್ ಅವರ ಪ್ರಕಾರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಬಿಜೆಪಿ ತಪ್ಪು ಮಾಡಿದೆ.
‘ಮೋದಿ ಅವರು 2002ರಲ್ಲಿ ನಡೆದ ಗುಜರಾತ್ ಗಲಭೆಯ ಕಳಂಕವನ್ನು ತೊಳೆದುಕೊಳ್ಳಲು ಇನ್ನೂ ಕಷ್ಟಪಡುತ್ತಿದ್ದಾರೆ. ಅಲ್ಲದೇ ಮುಸ್ಲಿಮರ ಕುರಿತಾದ ಅವರ ಧೋರಣೆ ಕೂಡ ಅಷ್ಟು ಸಮಂಜಸವಾಗಿಲ್ಲ’ ಎಂದು ಅವರು ಅಭಿಪ್ರಾಯಪಡುತ್ತಾರೆ.
ಭಾರತ ಮತ್ತು ಪಾಕಿಸ್ತಾನದ ರಾಜಕೀಯ ಪರಿಸ್ಥಿತಿಗಳ ನಡುವಣ ಸಾಮ್ಯತೆಯತ್ತ ಗಮನಸೆಳೆಯುವ ಯುವ ಟ್ಯಾಕ್ಸಿ ಚಾಲಕ ಮೊಹ್ಸಿನ್ ರೆಹಮಾನ್, ‘ಭಾರತೀಯರು ಸಾಮಾನ್ಯವಾಗಿ ಬೇರೆಯವರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಾರೆ. ಪಾಕಿಸ್ತಾನದಲ್ಲಿಯೂ ಹೀಗೆಯೇ ಆಗುತ್ತಿದೆ’ ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.