ADVERTISEMENT

ಕೈಕುಲುಕಿದ ಮೋದಿ– ಷರೀಫ್

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 19:59 IST
Last Updated 30 ನವೆಂಬರ್ 2015, 19:59 IST

ಪ್ಯಾರಿಸ್ (ಪಿಟಿಐ): ಹವಾಮಾನ ವೈಪರೀತ್ಯ ತಡೆ ಶೃಂಗಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಸೋಮವಾರ ಶೃಂಗಸಭೆ ಆರಂಭಕ್ಕೆ ಮೊದಲು ಪರಸ್ಪರ ಹಸ್ತ ಲಾಘವ ನೀಡಿದರು.

ನಂತರ ಈ ಇಬ್ಬರು ನಾಯಕರು  ಸೋಫಾದಲ್ಲಿ ಅಕ್ಕಪಕ್ಕ ಕುಳಿತು ಮಾತನಾಡಿದರು. ಏನು ಮಾತುಕತೆ ನಡೆಯಿತು ಎಂಬ ವಿವರಗಳು ಲಭ್ಯವಾಗಿಲ್ಲ. ಮೋದಿ ಮತ್ತು ಷರೀಫ್ ಒಂದೆರೆಡು ನಿಮಿಷಗಳ ಕಾಲ ಅನೌಪಚಾರಿಕ ಮಾತುಕತೆ ನಡೆಸಿದರು ಎಂದು ವಿದೇಶಾಂಗ ಇಲಾಖೆಯ ವಕ್ತಾರ  ವಿಕಾಸ್ ಸ್ವರೂಪ್ ಹೇಳಿದ್ದಾರೆ.

ಇದೇ ರೀತಿ ಜಪಾನ್ ಪ್ರಧಾನಿ ಅಬೆ ಮತ್ತು ಇತರ ದೇಶಗಳ ನಾಯಕರ ಜತೆಯೂ ಮೋದಿ ಅನೌಪಚಾರಿಕ ಮಾತುಕತೆ ನಡೆಸಿದರು ಎಂದು ತಿಳಿಸಿದ್ದಾರೆ. ಮೋದಿ– ಷರೀಫ್‌ ಭೇಟಿ ಬಗ್ಗೆ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ. ಜತೆಗೆ ಈ ಇಬ್ಬರು  ಕೈಕುಲುಕುತ್ತಿರುವ ಚಿತ್ರವನ್ನೂ ಕಳುಹಿಸಿದ್ದಾರೆ.

ಕಳೆದ ಜೂನ್‌ನಲ್ಲಿ ರಷ್ಯಾದ ಉಫಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಇದೇ ಮೊದಲ ಬಾರಿಗೆ ಮೋದಿ ಮತ್ತು ಷರೀಫ್ ಭೇಟಿ ಯಾಗಿದ್ದಾರೆ.

ತಾತ್ವಿಕ ನಿಲುವಿಗೆ ಬದ್ಧ: ಷರೀಫ್‌ಪಾಕಿಸ್ತಾನವು ತನ್ನ ತಾತ್ವಿಕ ನಿಲುವುಗಳಿಗೆ ಅತ್ಯಂತ ಮಹತ್ವ ನೀಡುತ್ತದೆ ಎಂದು ಮೋದಿ ಅವರಿಗೆ ತಿಳಿಸಿದ್ದಾಗಿ ಪಾಕಿಸ್ತಾನ ಮಾಧ್ಯಮಗಳ ಜೊತೆ  ಮಾತನಾಡುತ್ತಾ ನವಾಜ್‌ ಷರೀಫ್‌ ತಿಳಿಸಿದ್ದಾರೆ.

‘ಭಾರತದೊಂದಿಗೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಲು ಪಾಕಿಸ್ತಾನ ಬಯಸುತ್ತದೆ. ನಮ್ಮ ಘನತೆ ಮತ್ತು ಗೌರವ ಕುರಿತು ಯಾವುದೇ ರೀತಿಯ ರಾಜಿಯಾಗದೆ ಶಾಂತಿ ಬಯಸುತ್ತೇವೆ ಎಂದು ಷರೀಫ್‌ ಹೇಳಿದ್ದಾರೆ’ ಎಂದು ‘ಜಿಯೊ ಟಿವಿ’ ವರದಿ ಮಾಡಿದೆ.

ಮಾಧ್ಯಮಗಳ ಮೆಚ್ಚುಗೆ: ಮೋದಿ ಮತ್ತು ಷರೀಫ್ ಪ್ಯಾರಿಸ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದಕ್ಕೆ ಪಾಕಿಸ್ತಾನ ಮಾಧ್ಯಮ ಮೆಚ್ಚುಗೆ ವ್ಯಕ್ತಪಡಿಸಿದೆ.

ಸರ್ಕಾರಿ ಒಡೆತನದ ಪಾಕಿಸ್ತಾನ ಟಿವಿ ಈ ಭೇಟಿಯನ್ನು ಉತ್ತಮ ಬೆಳವಣಿಗೆ ಎಂದು ತಿಳಿಸಿದೆಯಲ್ಲದೆ, ಕೈಕುಲುಕುತ್ತಿರುವ ದೃಶ್ಯವನ್ನು ಪದೇಪದೇ ಪ್ರಸಾರ ಮಾಡಿದೆ. ‘ಸೌಹಾರ್ದಯುತ ವಾತಾವರಣದಲ್ಲಿ ಭೇಟಿ ನಡೆದಿದ್ದು ಇದು ಸಂಭ್ರಮದ ಕ್ಷಣ ಮತ್ತು ಸಕಾರಾತ್ಮಕ ಬೆಳವಣಿಗೆ’ ಎಂದು ಬಣ್ಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.