ADVERTISEMENT

ಟಿಸಿಎಸ್‌, ಇನ್ಫೊಸಿಸ್‌ನಿಂದ ಎಚ್‌1ಬಿ ವೀಸಾ ದುರ್ಬಳಕೆ

ಶ್ವೇತಭವನದ ಹಿರಿಯ ಅಧಿಕಾರಿ ಆರೋಪ * ಶೇಕಡ 5ರಷ್ಟು ನೌಕರರಿಗೆ ಮಾತ್ರ ನಿಯಮಾನುಸಾರ ವೇತನ

ಪಿಟಿಐ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅಮೆರಿಕದ ಸ್ಟೀವನ್‌ ಮುಚಿನ್‌ ಅವರನ್ನು ಭೇಟಿಯಾದರು   – ಎಪಿ ಚಿತ್ರ
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅಮೆರಿಕದ ಸ್ಟೀವನ್‌ ಮುಚಿನ್‌ ಅವರನ್ನು ಭೇಟಿಯಾದರು – ಎಪಿ ಚಿತ್ರ   

ವಾಷಿಂಗ್ಟನ್: ಭಾರತದ ಪ್ರಮುಖ ಐಟಿ ಕಂಪೆನಿಗಳಾದ ಟಿಸಿಎಸ್‌ ಮತ್ತು ಇನ್ಫೊಸಿಸ್‌ಗಳು ತಮ್ಮ ಲಾಭಕ್ಕಾಗಿ ಎಚ್‌1ಬಿ ವೀಸಾ ನಿಯಮಾವಳಿಗಳನ್ನು ಉಲ್ಲಂಘಿಸಿವೆ ಎಂದು ಅಮೆರಿಕ ಆರೋಪಿಸಿದೆ.

‘ಟಾಟಾ, ಇನ್ಫೊಸಿಸ್‌, ಕಾಗ್ನಿಜೆಂಟ್‌ ಮುಂತಾದ ಎಚ್‌1ಬಿ ವೀಸಾದ ಪ್ರಮುಖ ಫಲಾನುಭವಿ ಕಂಪೆನಿಗಳು ತಾವು ಪಡೆದುಕೊಳ್ಳಲು ಅವಕಾಶವಿರುವ ಪ್ರಮಾಣಕ್ಕಿಂತಲೂ ಹೆಚ್ಚಿನ ವೀಸಾಗೆ ಅರ್ಜಿ ಸಲ್ಲಿಸುತ್ತವೆ. ಲಾಟರಿ ವ್ಯವಸ್ಥೆಯಲ್ಲಿ ಹೆಚ್ಚುವರಿ ಟಿಕೆಟ್‌ಗಳನ್ನು ಇರಿಸುವ ಮೂಲಕ ವೀಸಾ ಹಂಚಿಕೆಯಲ್ಲಿ ಬಹುಪಾಲನ್ನು ತಮ್ಮದಾಗಿಸಿಕೊಳ್ಳುತ್ತವೆ’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದ ಕಂಪೆನಿಗಳ ಹೆಸರನ್ನು ಮಾತ್ರ ಉಲ್ಲೇಖಿಸಿದ್ದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅತಿ ಹೆಚ್ಚು ಎಚ್‌1ಬಿ ವೀಸಾ ಪಡೆದುಕೊಳ್ಳುವುದರಲ್ಲಿ ಟಿಸಿಎಸ್‌, ಇನ್ಫೊಸಿಸ್‌ ಮತ್ತು ಕಾಗ್ನಿಜೆಂಟ್‌ ಮೊದಲ ಮೂರು ಸ್ಥಾನದಲ್ಲಿವೆ ಎಂದರು.

ADVERTISEMENT

ಈ ಮೂರು ಕಂಪೆನಿಗಳು ಎಚ್‌1ಬಿ ವೀಸಾದಡಿ ನೀಡುವ  ಸರಾಸರಿ ವೇತನ ಕೇವಲ ₹38.79 ಲಕ್ಷದಿಂದ (60 ಸಾವಿರ ಅಮೆರಿಕನ್‌ ಡಾಲರ್‌) ₹42 ಲಕ್ಷ (65 ಸಾವಿರ ಡಾಲರ್‌) ನಡುವೆ ಇರುತ್ತದೆ. ಆದರೆ, ಸಿಲಿಕಾನ್‌ ವ್ಯಾಲಿಯ ಸಾಮಾನ್ಯ ಸಾಫ್ಟ್‌ವೇರ್ ಎಂಜಿನಿಯರ್‌ ಅಂದಾಜು ₹96 ಲಕ್ಷ (1.50 ಲಕ್ಷ ಡಾಲರ್‌) ವೇತನ ಪಡೆದುಕೊಳ್ಳುತ್ತಾರೆ’ ಎಂದು ಹೇಳಿದರು.

ಈ ಕಂಪೆನಿಗಳು ಉದ್ಯೋಗಿಗಳ ಕೌಶಲವನ್ನು ಬಳಸಿಕೊಳ್ಳುವುದಿಲ್ಲ. ಹೆಚ್ಚಿನ ಸಮಯ ಕೆಲಸಗಾರರನ್ನು ಕೆಳಹಂತದ ಕೆಲಸಗಳಿಗೆ ಬಳಸಿಕೊಳ್ಳುತ್ತವೆಎಂದು ಆರೋಪಿಸಿದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಭಾರತದ ಮೂರೂ ಕಂಪೆನಿಗಳು ನಿರಾಕರಿಸಿವೆ.

ಎಚ್‌1ಬಿ ವೀಸಾವನ್ನು ಪ್ರಸ್ತುತ ಲಾಟರಿ ಪ್ರಕ್ರಿಯೆ ಮೂಲಕ ನೀಡಲಾಗುತ್ತಿದೆ. ಶೇ 80ರಷ್ಟು ಎಚ್‌1ಬಿ ವೀಸಾ ಉದ್ಯೋಗಿಗಳು ತಮ್ಮ ಕ್ಷೇತ್ರದಲ್ಲಿನ ಮಾರುಕಟ್ಟೆ ವೇತನದ ಮಟ್ಟಕ್ಕಿಂತಲೂ ಕಡಿಮೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಪ್ರತಿ ವರ್ಷ ಶೇ 5 ರಿಂದ 6ರಷ್ಟು ಎಚ್‌1ಬಿ ಉದ್ಯೋಗಿಗಳು ಮಾತ್ರ ಕಾರ್ಮಿಕ ಇಲಾಖೆಯ ನಿಯಮಕ್ಕೆ ಅನುಗುಣವಾಗಿ ಅಧಿಕ ವೇತನ ಪಡೆದುಕೊಳ್ಳುತ್ತಿದ್ದಾರೆ. 2015ರಲ್ಲಿ ಶೇ 5ರಷ್ಟು ಮಾತ್ರ ಎಚ್‌1ಬಿ ವೀಸಾ ಉದ್ಯೋಗಿಗಳು ಅತ್ಯಧಿಕ ವೇತನ ಪಡೆದುಕೊಂಡಿದ್ದರು ಎಂದು ಅವರು ವಿವರಿಸಿದರು.

ಅಮೆರಿಕದ ಉದ್ಯೋಗಿಗಳ ಜಾಗಕ್ಕೆ ಕಡಿಮೆ ವೇತನಕ್ಕೆ ದುಡಿಯುವ ಕೆಲಸಗಾರರನ್ನು ಕರೆತರಲಾಗುತ್ತಿದೆ. ಇದು ಕೌಶಲವುಳ್ಳ ಉದ್ಯೋಗಿಗಳನ್ನು ಕರೆತರಲು ರೂಪಿಸಿರುವ ಯೋಜನೆ. ಆದರೆ ಇಲ್ಲಿಯೂ ವೀಸಾ ಯೋಜನೆಯ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ದೂರಿದರು.

‘ಕಡಿಮೆ ಕೌಶಲವುಳ್ಳ, ಹೆಚ್ಚು ದುಡಿಯುವ ಅಧಿಕ ಪ್ರಮಾಣದ ಕೆಲಸಗಾರರನ್ನು ಕರೆತಂದು, ಅವರನ್ನು ಅಧಿಕ ವೇತನ ಪಡೆಯುವವರ ಜಾಗಕ್ಕೆ ಕಡಿಮೆ ಸಂಬಳ ನೀಡಿ ಕೂರಿಸಲಾಗುತ್ತಿದೆ’ ಎಂದು ಹರಿಹಾಯ್ದರು.

ಈ ವೀಸಾ ವ್ಯವಸ್ಥೆ ಕುಶಲತೆ ಆಧಾರಿತ ವೇತನಕ್ಕೆ ಬದಲಾದರೆ, ಅಮೆರಿಕದ ಕೆಲಸಗಾರರ ಬದಲಿಗೆ ಹೊರದೇಶದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ವೀಸಾ ಬಳಸುವುದು ಕಷ್ಟಕರವಾಗಲಿದೆ ಎಂದು ಹೇಳಿದರು.

ವಿಷಯ ಪ್ರಸ್ತಾಪಿಸಿದ ಜೇಟ್ಲಿ
ಅಮೆರಿಕದ ಆರ್ಥಿಕಾಭಿವೃದ್ಧಿಯಲ್ಲಿ ಭಾರತದ ಐಟಿ ಕಂಪೆನಿಗಳ ಕೊಡುಗೆಯನ್ನು ವಿವರಿಸಿರುವ ಅರುಣ್ ಜೇಟ್ಲಿ, ಎಚ್‌1ಬಿ ವೀಸಾ ನಿಯಮಾವಳಿಗಳನ್ನು ಕಠಿಣಗೊಳಿಸುವ ಸರ್ಕಾರದ ಉದ್ದೇಶದ ಕುರಿತು ಅಮೆರಿಕ ಹಣಕಾಸು ಸಚಿವ ಸ್ಟೀವನ್‌ ಮುಚಿನ್‌ ಅವರ ಜತೆಗಿನ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.

ವಾಣಿಜ್ಯ ಕಾರ್ಯದರ್ಶಿ ವಿಲ್ಬುರ್‌ ರಾಸ್‌ ಅವರೊಂದಿಗಿನ ಮಾತುಕತೆ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿಯೂ  ಜೇಟ್ಲಿ ಅವರು ಹೊಸ ವೀಸಾ ನಿಯಮಾವಳಿಗಳ ಕುರಿತು ಕಳವಳ ವ್ಯಕ್ತಪಡಿಸಿದ್ದರು.

ಮುಖ್ಯಾಂಶಗಳು
*
 ಭಾರತದ ಐಟಿ ಕಂಪೆನಿಗಳಿಂದ ನಿಯಮ ಉಲ್ಲಂಘನೆ

* ಕಡಿಮೆ ಕೌಶಲ, ಕಡಿಮೆ ವೇತನ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.