ADVERTISEMENT

ಟ್ರಂಪ್‌ಗೆ ಇರಾನ್ ತಿರುಗೇಟು

ಅಮೆರಿಕದ ನಡೆಗೆ ಇರಾನ್ ಆಕ್ರೋಶ

ಏಜೆನ್ಸೀಸ್
Published 12 ಆಗಸ್ಟ್ 2017, 19:30 IST
Last Updated 12 ಆಗಸ್ಟ್ 2017, 19:30 IST
ಟ್ರಂಪ್‌ಗೆ ಇರಾನ್ ತಿರುಗೇಟು
ಟ್ರಂಪ್‌ಗೆ ಇರಾನ್ ತಿರುಗೇಟು   

ಟೆಹರಾನ್: ತನ್ನ ಖಂಡಾಂತರ ಕ್ಷಿಪಣಿ ಕಾರ್ಯಕ್ರಮಗಳ ವಿರುದ್ಧ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ಶನಿವಾರ ತಿರುಗೇಟು ನೀಡಿದೆ. 2015ರ ಪರಮಾಣು ಒಪ್ಪಂದ ವಿಚಾರದಲ್ಲಿ ಅವರು ಅಪನಂಬಿಕೆ ಹೊಂದಿದ್ದಾರೆ ಎಂದು ಅದು ಆರೋಪಿಸಿದೆ.

‘ಟ್ರಂಪ್ ಅವರು ಒಪ್ಪಂದವನ್ನು ಮುರಿಯಲು ಸದಾ ಯತ್ನಿಸುತ್ತಿದ್ದಾರೆ. ಏಕಾಂಗಿಯಾಗುವುದನ್ನು ತಡೆಯಲು ಅವರು ಇರಾನ್ ಮೇಲೆ ಆರೋಪ ಹೊರಿಸುತ್ತಿದ್ದಾರೆ’ ಎಂದು ವಿದೇಶಾಂಗ ಸಚಿವ ಮಹಮ್ಮದ್ ಜಾವೇದ್ ಜಾರಿಫ್ ಅವರು ಟ್ವೀಟ್ ಮಾಡಿದ್ದಾರೆ.

‘ಒಪ್ಪಂದವನನ್ನು ಇರಾನ್ ಪಾಲಿಸುತ್ತಿದ್ದ. ನಿಯಮಗಳಿಗೆ ತಕ್ಕಂತೆ ಅದು ನಡೆದುಕೊಳ್ಳುತ್ತಿಲ್ಲ’ ಎಂದು ಟ್ರಂಪ್ ಆರೋಪಿಸಿದ್ದರು. ಇದೊಂದು ಅಪಾಯಕಾರಿ ಒಪ್ಪಂದ ಎಂದೂ ಅವರು ಕರೆದಿದ್ದರು.

ADVERTISEMENT

ಪರಮಾಣು ಶಸ್ತ್ರಾಸ್ತ್ರ ಉತ್ಪಾದನೆಯನ್ನು ಇರಾನ್ ಸ್ಥಗಿತಗೊಳಿಸುವುದು ಹಾಗೂ ಇದಕ್ಕೆ ಪ್ರತಿಯಾಗಿ ಅದರ ಮೇಲಿರುವ ದಿಗ್ಬಂಧನ ತೆರವುಗೊಳಿಸುವ ಒಪ್ಪಂದ ಇದಾಗಿತ್ತು.

ಒಪ್ಪಂದದಿಂದ ಹಿಂದೆ ಸರಿಯುವುದಾಗಿ ತಮ್ಮ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆ ಅನುಷ್ಠಾನಕ್ಕೆ ಮುಂದಾಗಿದ್ದ ಟ್ರಂಪ್ ಅವರು ಕೊನೆ ಕ್ಷಣದಲ್ಲಿ ಒತ್ತಡ ಹೆಚ್ಚಾದ ಕಾರಣ ತಮ್ಮ ನಿರ್ಧಾರ ಬದಲಿಸಿದ್ದರು.

ಇದು ಅತ್ಯಂತ ಕೆಟ್ಟ ಒಪ್ಪಂದ ಎಂದು ಕರೆದಿದ್ದ ಟ್ರಂಪ್, ಮಧ್ಯಪ್ರಾಚ್ಯದಲ್ಲಿ ತೀವ್ರಗಾಮಿಗಳಿಗೆ ಇರಾನ್ ನೆರವು ನೀಡುವುದನ್ನು ಮುಂದುವರಿಸಿದೆ ಎಂದು ಆರೋಪಿಸಿದ್ದರು.

ಆದರೆ ಜುಲೈ 17ರಂದು ಪ್ರಕಟಣೆ ಹೊರಡಿಸಿದ್ದ ಶ್ವೇತಭವನ, ಒಪ್ಪಂದಕ್ಕೆ ಇರಾನ್ ಬದ್ಧವಾಗಿದೆ ಎಂದು ಘೋಷಿಸಿತ್ತು. ಆದರೆ ಕೆಲ ದಿನಗಳ ಬಳಿಕ ಕ್ಷಿಪಣಿ ಕಾರ್ಯಕ್ರಮ ಹಮ್ಮಿಕೊಂಡ ಆರೋಪದ ಮೇಲೆ ಇರಾನ್ ಮೇಲೆ ನಿರ್ಬಂಧಗಳನ್ನು ವಿಧಿಸಿ ಅಮೆರಿಕ ಅದೇಶ ಹೊರಡಿಸಿತ್ತು.

ಟ್ರಂಪ್ ಸಹಿ: ಇರಾನ್‌ ಪ್ರತಿಭಟನೆ

ಇರಾನ್‌ನ ಕ್ಷಿಪಣಿ ಕಾರ್ಯಕ್ರಮ ಹಾಗೂ ಮಾನವ ಹಕ್ಕು ಉಲ್ಲಂಘನೆ ಆರೋಪ ಹೊರಿಸಿ ಮಂಡಿಸಲಾಗಿರುವ ಮಸೂದೆಗೆ ಟ್ರಂಪ್ ಅವರು ಸಹಿ ಹಾಕಿದ್ದು, ಮುಂದಿನ ವಾರ ಅಮೆರಿಕ ಸಂಸತ್ತಿನಲ್ಲಿ ಮತದಾನ ನಡೆಯಲಿದೆ.

ಈ ಮಧ್ಯೆ ಅಮೆರಿಕ ವಿಧಿಸಿದ ನಿರ್ಬಂಧಗಳು ಪರಮಾಣು ಒಪ್ಪಂದದ ಉಲ್ಲಂಘನೆ ಎಂದು ಇರಾನ್ ಪ್ರತಿಭಟನೆ ದಾಖಲಿಸಿದೆ. ತನ್ನ ಕ್ಷಿಪಣಿ ಕಾರ್ಯಕ್ರಮಗಳು ಸ್ವಯಂ ರಕ್ಷಣೆಗೆ ಮಾತ್ರವೇ ಎಂದು ಇರಾನ್ ಸಮರ್ಥಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.