ADVERTISEMENT

ನಕಲಿ ಶಿಲ್ಪ ಮಾರಾಟ: ಭಾರತೀಯನಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2014, 19:30 IST
Last Updated 18 ಅಕ್ಟೋಬರ್ 2014, 19:30 IST

ನ್ಯೂಯಾರ್ಕ್‌ (ಪಿಟಿಐ): ಕಂಚಿನ ನಕಲಿ ಶಿಲ್ಪಗಳನ್ನು ಮಾರಾಟ ಮಾಡಿದ ಭಾರತ ಮೂಲದ ಅಮೆರಿಕ ಪ್ರಜೆ ಬ್ರಿಯಾನ್‌ ರಾಮನಾರಾಯಣ್‌ಗೆ (60) ಮ್ಯಾನ್‌ಹಟನ್‌ನ ಫೆಡರಲ್‌ ನ್ಯಾಯಾಲಯ 30 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಹೆಸರಾಂತ ಶಿಲ್ಪಿಗಳಾದ ಜಸ್ಪರ್‌ ಜಾನ್ಸ್‌, ರಾಬರ್ಟ್‌ ಇಂಡಿಯಾನಾ, ಸೇಂಟ್‌ ಕ್ಲೇರ್‌ ಕೆಮಿನ್‌ ಅವರ ಶಿಲ್ಪಕೃತಿಗಳು ಎಂದು ನಂಬಿಸಿ ನಕಲಿ ಶಿಲ್ಪಗಳನ್ನು ರಾಮನಾರಾಯಣ್‌ ಮಾರಾಟ ಮಾಡುತ್ತಿದ್ದರು.

ಎರಕ ವೃತ್ತಿ ಮಾಡುತ್ತಿರುವ ರಾಮನಾರಾಯಣ್‌, 1.10 ಕೋಟಿ ಡಾಲರ್‌ (ಅಂದಾಜು ₨ 66 ಕೋಟಿ) ಮೌಲ್ಯಕ್ಕೂ ಹೆಚ್ಚಿನ ಮೊತ್ತದ ಕಂಚಿನ ನಕಲಿ ಶಿಲ್ಪಗಳನ್ನು ಮಾರಾಟ ಮಾಡಲು ಯತ್ನಿಸಿದ ಆಪಾದನೆಗೂ ಗುರಿಯಾಗಿದ್ದರು.

ರಾಮನಾರಾಯಣ್‌ ಅವರನ್ನು 2012ರ ನವೆಂಬರ್‌ ಬಂಧಿಸಲಾಗಿತ್ತು. ಅವರ ವಿರುದ್ಧ ಆರೋಪ ಕಳೆದ ಜನವರಿಯಲ್ಲಿ ಸಾಬೀತಾದ ಕಾರಣ ಜಿಲ್ಲಾ ನ್ಯಾಯಾಲಯ ನಕಲಿ ಶಿಲ್ಪಗಳನ್ನು ಜಪ್ತಿ ಮಾಡುವಂತೆ ಮತ್ತು 70 ಸಾವಿರ ಡಾಲರ್‌ (ಅಂದಾಜು ₨42 ಲಕ್ಷ) ದಂಡ ವಿಧಿಸಿತ್ತು. ಜೊತೆಗೆ ಮೂರು ವರ್ಷಗಳ ಕಾಲ ಅವರ ಚಲನವಲನದ ಮೇಲೆ ನಿಗಾ ಇರಿಸುವಂತೆ ಸೂಚಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಭಾರತ ಮೂಲದ ಅಮೆರಿಕನ್ನರು ಮ್ಯಾಡಿಸನ್‌ ಸ್ಕ್ವೈರ್‌ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಮನಾರಾಯಣ್‌ ನ್ಯಾಯಾಲಯದಿಂದ ವಿಶೇಷ ಅನುಮತಿ ಪಡೆದುಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಸನ್ಮಾನಿಸಿ ‘ಶಾಂತಿ ಯೋಧರ’ ಶಿಲ್ಪವನ್ನು ಅವರಿಗೆ ನೀಡಲಾಗಿತ್ತು. ಇದು ರಾಮನಾರಾಯಣ್‌ ಎರಕ ಮಾಡಿದ ಶಿಲ್ಪ ಎಂದು ನ್ಯಾಯಾಲಯ ವಾರ್ತಾ ಸೇವೆ ಹೇಳಿದೆ.

ಗುಜರಾತ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಸರ್ದಾರ್‌ ವಲ್ಲಭ ಭಾಯಿ ಪಟೇಲ್ ಅವರ ಅತಿ ಎತ್ತರದ ಶಿಲ್ಪ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸುವಂತೆ ರಾಮ ನಾರಾಯಣ್‌ಗೆ ಆಹ್ವಾನ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.