ADVERTISEMENT

ಪಾಕಿಸ್ತಾನದ ತಾಲಿಬಾನ್‌ ಸಂಘಟನೆ

ಸುದ್ದಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ಸೈನಿಕರ ವಿರುದ್ಧ ಪ್ರತೀಕಾರ ಕೈಗೊಳ್ಳುವ ಏಕೈಕ ಉದ್ದೇಶದಿಂದ ಪೆಶಾವರದ ಸೇನಾ ಶಾಲೆಗೆ ನುಗ್ಗಿ ನೂರಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿ­ಗಳನ್ನು ನಿರ್ದಯ­ವಾಗಿ ಕೊಂದು ಹಾಕಿದ  ಪಾಕಿಸ್ತಾನದ ತಾಲಿಬಾನ್‌ ಉಗ್ರರ ರಾಕ್ಷಸಿ ಸ್ವಭಾವ ಕಂಡು  ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಶಿಕ್ಷೆಗೆ ಗುರಿಯಾಗಿರುವ ಉಗ್ರರಿಗೆ  ಗಲ್ಲಿಗೆ ಏರಿಸುವುದನ್ನು ನಿಲ್ಲಿಸದಿದ್ದರೆ ರಾಜಕಾರಣಿಗಳ ಮಕ್ಕಳನ್ನು ಕೊಲ್ಲು­ವುದು ತನ್ನ ಮುಂದಿನ ಗುರಿಯಾಗಿದೆ ಎಂದೂ ಉಗ್ರರು ಬೆದರಿಕೆ ಹಾಕಿದ್ದಾರೆ.

ತೆಹ್ರಿಕ್‌ ಎ ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಎಂದು  ಕರೆಯಿಸಿಕೊಳ್ಳುವ ಈ ಸಂಘಟನೆಯಲ್ಲಿಯೂ ಎಲ್ಲವೂ ಸರಿ ಇಲ್ಲ. ಹಿಂದೊಮ್ಮೆ ಇದು 30 ಉಗ್ರಗಾಮಿ ಗುಂಪುಗಳ ಸಂಘಟನೆ­­ಯಾಗಿತ್ತು. ಜಿಹಾದಿ ಕಮಾಂಡರ್‌ ಬೈತ್‌ ಉಲ್ಲಾ ಮೆಹ್ಸೂದ್  2007ರಲ್ಲಿ ಇದನ್ನು  ಅಧಿಕೃತವಾಗಿ ಸ್ಥಾಪಿಸಿದ್ದ. ಅಮೆರಿಕದ ನಡೆಸಿದ ದಾಳಿಯಲ್ಲಿ ಈತ 2009ರಲ್ಲಿ ಹತನಾದ.  ಆರಂಭದ ಅನೇಕ ವರ್ಷಗಳವರೆಗೆ ಇದು ಅಲ್‌ ಕೈದಾ ಸಂಘಟನೆ ಜತೆಗೂಡಿ ವಾಯವ್ಯ ಪಾಕಿಸ್ತಾನದ ಪಶ್ತೂನ್‌ ಆದಿವಾಸಿ ಪ್ರದೇಶಗಳಾದ ಉತ್ತರ ಮತ್ತು ದಕ್ಷಿಣ ವಜಿರಿಸ್ತಾನನಲ್ಲಿ ಸಕ್ರಿಯವಾಗಿತ್ತು.

ಸಂಘಟನೆಯ ಅನೇಕ ಮುಖಂಡರು ಆಫ್ಘಾನಿ­ಸ್ತಾನದ ತಾಲಿಬಾನಿಗರ ಪರ ಹೋರಾಟದಲ್ಲಿಯೂ ಪಾಲ್ಗೊಂಡಿ­ದ್ದರು. 2001ರಲ್ಲಿ ಅಮೆರಿಕವು ಕಾಬೂಲ್‌­ನಲ್ಲಿನ ತಾಲಿ­ಬಾನ್‌ ಸರ್ಕಾರ­ವನ್ನು ಪದ­ಚ್ಯುತ­ಗೊಳಿಸಿದ ನಂತರ ಅನೇಕರು ಪಾಕಿಸ್ತಾನದ ಗಡಿಗೆ ಓಡಿ ಬಂದು ಆಶ್ರಯ ಪಡೆದಿದ್ದರು. ಅಮೆರಿಕದ ಒತ್ತಡ ಹೆಚ್ಚುತ್ತಿದ್ದಂತೆ ಪಾಕಿ­ಸ್ತಾನವು 2003 ಮತ್ತು 2004ರಲ್ಲಿ ಈ ತಾಲಿಬಾನ್‌ ಉಗ್ರರ ಉಪಟಳ ಸದೆಬಡೆಯಲು ಮುಂದಾ­ದರೂ, ಅದಾಗಲೇ ಕಾಲ ಮಿಂಚಿತ್ತು.

ಪಾಕಿಸ್ತಾನದಲ್ಲಿ ತಮ್ಮದೇ ಆಡಳಿತ ನಡೆಸಬೇಕು ಎಂಬ ಉಮೇದಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸೇನೆ ಮತ್ತು ಭದ್ರತಾ ಪಡೆಗಳ ಮೇಲೆ ತಾಲಿಬಾನ್‌ ಉಗ್ರರು ನಿಯಮಿತವಾಗಿ ದಾಳಿ ನಡೆಸ­ತೊಡಗಿದರು.
ಆಫ್ಘಾನಿಸ್ತಾನದಲ್ಲಿನ ಬಂಡಾಯ­ದಲ್ಲಿ  ಭಾಗಿಯಾದ  ಈ ಸಂಘಟನೆಯು ಅಲ್ಲಿನ ಉಗ್ರರಿಗೂ ನಿರಂತರವಾಗಿ ಅಗತ್ಯ ನೆರವು ನೀಡುತ್ತಿದೆ. ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಿಂದ ನೂರಾರು ಆತ್ಮಹತ್ಯಾ  ಬಾಂಬರ್‌ಗಳಿಗೆ ತರಬೇತಿ ನೀಡಿ ಆಫ್ಘಾನಿಸ್ತಾನಕ್ಕೆ ಕಳಿಸಿಕೊಟ್ಟಿದೆ. ಆಫ್ಘಾನಿಸ್ತಾನ ತಾಲಿಬಾನ್‌ ಸಂಘ­ಟನೆಯ ಹಕ್ಕಾನಿ ಜಾಲದ ಜತೆಗೂ ನೇರ ಸಂಬಂಧ ಹೊಂದಿದೆ. ಅಲ್‌ಕೈದಾ ಸಂಘಟನೆಗೂ ನೆರವಾಗುತ್ತಿದೆ.

ಪ್ರಮುಖ ದಾಳಿಗಳು
ಪಾಕ್‌ ತಾಲಿಬಾನ್‌ ಉಗ್ರರು ಪಾಕಿಸ್ತಾನದ ಸೇನಾ ನೆಲೆಗಳು, ಬೇಹುಗಾರಿಕೆ ಪಡೆಗಳ ಮೇಲೆ ನಿರಂತರ­ವಾಗಿ ದಾಳಿ ನಡೆಸುತ್ತಲೇ ಬಂದಿದ್ದಾರೆ. ಅವುಗಳ ಪೈಕಿ ಪ್ರಮುಖ­ವಾದವುಗಳು ಹೀಗಿವೆ.
* 2007ರಲ್ಲಿ ನಡೆದ ಮಾಜಿ ಪ್ರಧಾನಿ ಬೆನಜೀರ್‌ ಭುಟ್ಟೊ ಅವರ ಹತ್ಯೆ ಘಟನೆಯಲ್ಲಿಯೂ  ಬೈತ್‌ ಉಲ್ಲಾ ಮೆಹ್ಸೂದ್‌ನ ಕೈವಾಡ ಇದೆ ಎನ್ನುವ ಅನುಮಾನಗಳಿವೆ.
* 2008ರಲ್ಲಿ ಇಸ್ಲಾಮಾಬಾದ್‌ನ ಪಂಚತಾರಾ ಹೋಟೆಲ್‌, 2009ರಲ್ಲಿ ಪೆಶಾವರದ ಪರ್ಲ್‌ ಕಾಂಟಿನೆಂಟಲ್‌ ಹೋಟೆಲ್‌ ಮೇಲೆಯೂ ಬಾಂಬ್‌ ದಾಳಿ ನಡೆಸಲಾಗಿತ್ತು.
* ಹೆಣ್ಣು ಮಕ್ಕಳ ಶಿಕ್ಷಣ ಹಕ್ಕನ್ನು ಪ್ರತಿಪಾದಿಸುತ್ತಿದ್ದ ಶಾಲಾ ಬಾಲಕಿ ಮಲಾಲಾ ಯೂಸುಫ್‌ಝೈ ಮೇಲೆ 2012ರಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು.
* ಮುಸ್ಲಿಮರು ಮತ್ತು ಕ್ರೈಸ್ತರ ಬಾಂಧವ್ಯದ ಸಂಕೇತ­ವಾಗಿರುವ ಪೆಶಾವರದ ಆಲ್‌ ಸೇಂಟ್ಸ್‌ ಚರ್ಚ್‌ ಮೇಲೆಯೂ ಆತ್ಮಹತ್ಯಾ ದಾಳಿ ನಡೆಸಲಾ­ಗಿತ್ತು. ಘಟನೆಯಲ್ಲಿ 120 ಜನರು ಹತರಾ­ಗಿದ್ದರು.
* ಈ ವರ್ಷದ ಜೂನ್‌ನಲ್ಲಿ ಕರಾಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ  ಮೇಲೆ ನಡೆದ ದಾಳಿಯಲ್ಲಿ ಉಗ್ರರು ಅನೇಕ ಗಂಟೆಗಳ ಕಾಲ ಸೈನಿಕರ ಜತೆ ಹೋರಾಟ ನಡೆಸಿ 13 ಜನರನ್ನು ಕೊಂದಿದ್ದರು.
ನಾಯಕತ್ವ
2013ರಲ್ಲಿ ಅಮೆರಿಕ ನಡೆಸಿದ ದಾಳಿಯಲ್ಲಿ ಹಕಿಮುಲ್ಲಾ ಮೆಹ್ಸೂದ್‌ ಹತನಾದ ನಂತರ, ಪಾಕಿಸ್ತಾನ ತಾಲಿಬಾನ್‌ ಸಂಘಟನೆಯನ್ನು  ಸದ್ಯಕ್ಕೆ ಮೌಲಾನಾ ಫಜಲುಲ್ಲಾಹ ಮುನ್ನ­ಡೆಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.