ADVERTISEMENT

ಪಾಕ್‌ ಮೇಲೆ ರಷ್ಯಾ ಪ್ರಾಬಲ್ಯ ವಿರೋಧಿಸಿದ್ದ ರಾಜೀವ್‌

ಸಿಐಎ ಗೋಪ್ಯ ದಾಖಲೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ವಾಷಿಂಗ್ಟನ್‌ (ಪಿಟಿಐ): ಪಾಕಿಸ್ತಾನದ ಮೇಲೆ ರಷ್ಯಾ (ಯುಎಸ್‌ಎಸ್‌ಆರ್‌) ಹಿಡಿತ ಸಾಧಿಸುವುದನ್ನು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ವಿರೋಧಿಸಿದ್ದರು. ಪಾಕ್‌ನ ಜಿಯಾ ಉಲ್‌ ಹಕ್‌ ಸರ್ಕಾರವನ್ನು ರಷ್ಯಾ ಕಿತ್ತೊಗೆದ ಪಕ್ಷದಲ್ಲಿ ಅಲ್ಲಿನ ರಷ್ಯಾ ವಿರೋಧಿ ಗುಂಪುಗಳಿಗೆ ಬೆಂಬಲ ನೀಡಲು ರಾಜೀವ್‌ ನಿರ್ಧರಿಸಿದ್ದರು ಎಂಬ ಅಂಶ ಈಗ ಬಯಲಾಗಿದೆ.

ಅಮೆರಿಕದ ಮಾಹಿತಿ ಸ್ವಾತಂತ್ರ್ಯ ಕಾಯ್ದೆ (Freedom of information ‌act) ಅನ್ವಯ ಸಿಐಎ ವೆಬ್‌ಸೈಟ್‌ನಲ್ಲಿ 1985ರ ಏಪ್ರಿಲ್‌ನ ಕೆಲ ಗೋಪ್ಯ ದಾಖಲೆಗಳನ್ನು ಪ್ರಕಟಿಸಲಾಗಿದ್ದು, ಅಲ್ಲಿ ಈ ವಿವರಗಳು ಲಭ್ಯವಿವೆ. ‘ಆಫ್ಘಾನಿಸ್ತಾನದಲ್ಲಿ ಸೋವಿಯತ್‌ ಅಸ್ತಿತ್ವ: ಪ್ರಾದೇಶಿಕ ಶಕ್ತಿಗಳು ಮತ್ತು ಅಮೆರಿಕದ ಮೇಲೆ ಪರಿಣಾಮ’ ಎನ್ನುವ ತಲೆಬರಹವುಳ್ಳ ದಾಖಲೆ ಇದಾಗಿದೆ.

‘ದಕ್ಷಿಣ ಏಷ್ಯಾ ಭಾಗದಲ್ಲಿ ರಷ್ಯಾ ಹಾಗೂ ಅಮೆರಿಕ  ಹಸ್ತಕ್ಷೇಪ ಮಾಡು ವುದನ್ನು ರಾಜೀವ್‌ ವಿರೋಧಿಸಿದ್ದರು. ‘ಆ ಸಮಯದಲ್ಲಿ ರಷ್ಯಾ ಆಪ್ಘಾನಿ ಸ್ತಾನದ ಮೇಲೆ  ಹಿಡಿತ ಹೊಂದಿತ್ತು. ಪಾಕಿಸ್ತಾನದ ಆಡಳಿತವನ್ನು ಕಿತ್ತೊಗೆದು ಅಲ್ಲಿಯೂ ಹಿಡಿತ ಸಾಧಿಸಬಯಸಿತ್ತು.

‘ಅಲ್ಲದೇ ಭಾರತ– ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ತನಗೆ ಲಾಭವಾಗುವಂತೆ ಬಳಸಿಕೊಳ್ಳುತ್ತಿತ್ತು. ಭಾರತದ ನಾಯಕರಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿದೆ ಎಂಬ ಭಾವನೆಯನ್ನು ಬಿತ್ತುತ್ತಿತ್ತು. ‘ಪಾಕಿಸ್ತಾನದ ಜಿಯಾ ಉಲ್‌ ಹಕ್‌ ಆಡಳಿತವನ್ನು ರಷ್ಯಾ ಕಿತ್ತೊಗೆದು ಅಲ್ಲಿ ತನ್ನ ಸೇನಾ ಆಡಳಿತ ಸ್ಥಾಪಿಸಿದಲ್ಲಿ ಭಾರತ ಪಾಕ್‌ ಜತೆ ಸೇನಾ ಸಂಘರ್ಷಕ್ಕೂ ಸನ್ನದ್ಧವಾಗಿತ್ತು’ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.