ADVERTISEMENT

ಪಾಕ್‌: 3 ಐಎಸ್ ಶಂಕಿತ ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 13:11 IST
Last Updated 5 ಜುಲೈ 2015, 13:11 IST

ಲಾಹೋರ್‌ (ಪಿಟಿಐ): ಮೂವರು ಇಸ್ಲಾಮಿಕ್ ಸ್ಟೇಟ್‌ ಶಂಕಿತ ಉಗ್ರರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಭದ್ರತಾ ಪಡೆಗಳು ಹೇಳಿವೆ. ಮೂವರಲ್ಲಿ ಇಬ್ಬರು ಅವರನ್ನು ಅಸ್ಮತುಲ್ಲಾಹ್ ಹಾಗೂ ಅಬ್ದುರ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಅವರು ಆಫ್ಗಾನಿಸ್ತಾನದವರು. ಮತ್ತೊಬ್ಬ ಪಾಕಿಸ್ತಾನದ ಪಂಜಾಬ್‌ ಪಾಂತ್ಯದ ಮುಹಮ್ಮದ್‌ ಇಬ್ರಾಹೀಂ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗುಪ್ತಚರ ಸಂಸ್ಥೆಗಳು ಶಂಕಿತರ ದೂರವಾಣಿ ಕರೆಯೊಂದನ್ನು ಕದ್ದಾಲಿಸಿದಾಗ ವಿಷಯ ತಿಳಿಯಿತು. ಬಳಿಕ ಅವರ ಅಡಗುತಾಣದ ಮೇಲೆ ದಾಳಿ ನಡೆಸಿ ಶುಕ್ರವಾರ ಬಂಧಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

‘ಐಎಸ್‌ ಮುಖಂಡರ ಲಿಂಕ್‌ಗಳು, ಪಂಜಾಬ್‌ ಪ್ರಾಂತ್ಯದ ಸೂಕ್ಷ್ಮ ಕಟ್ಟಡಗಳ ನಕ್ಷೆಗಳಿದ್ದ ಲ್ಯಾಪ್‌ಟ್ಯಾಪ್‌ಗಳು ಹಾಗೂ ಐಎಸ್‌ ಸಾಹಿತ್ಯವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವು ಹೇಳಿವೆ. ಇಬ್ಬರು ಶಂಕಿತರನ್ನು ವಿಚಾರಣೆಗಾಗಿ ರಹಸ್ಯ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.

ADVERTISEMENT

20 ಶಂಕಿತರು ವಶಕ್ಕೆ: ಮತ್ತೊಂದೆಡೆ, 20 ಆಫ್ಘಾನ್ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲಾಹೋರ್ ಪೊಲೀಸರು ತಿಳಿಸಿದ್ದಾರೆ.

ಪ್ರಧಾನಿ ನವಾಜ್ ಷರೀಫ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಶಹಬಾಜ್‌ ಷರೀಫ್‌ ಅವರ ನಿವಾಸಗಳಿರುವ ರೈವಿಂದ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಇವರನ್ನು ವಶಕ್ಕೆ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.